ಸಶಸ್ತ್ರ ಸಂಘರ್ಷಕ್ಕೆ ಸಜ್ಜಾಗುತ್ತಿವೆಯೇ ಭಾರತ-ಪಾಕ್​..? 2026 ರ ಭವಿಷ್ಯ ನುಡಿದ ಸಿಎಫ್‌ಆರ್..! | India VS Pak Conflict

 India VS Pak Conflict
India VS Pak Conflict
Published on
ದೆಹಲಿ: 2026 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯಬಹುದು ( India VS Pak Conflict ) ಎಂದು ಅಮೆರಿಕದ ಪ್ರಮುಖ ಚಿಂತಕರ ಚಾವಡಿ, ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ (CFR) ತನ್ನ ವರದಿಯ ಮೂಲಕ ಎಚ್ಚರಿಸಿದೆ.
ಎರಡೂ ದೇಶಗಳ ನಡುವಿನ ಮುಂಬರುವ ಸಶಸ್ತ್ರ ಸಂಘರ್ಷಕ್ಕೆ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳು ಪ್ರಾಥಮಿಕ ಕಾರಣ ಆಗಿರಬಹುದು ಎಂದು ಅಮೆರಿಕದ ವಿದೇಶಾಂಗ ನೀತಿ ತಜ್ಞರ ಸಮೀಕ್ಷೆಯನ್ನು ಉಲ್ಲೇಖಿಸಿ, ಚಿಂತಕರ ಚಾವಡಿ ತಿಳಿಸಿದೆ.
ಈ ವರ್ಷದ ಮೇ ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಭಾರತ ನಾಶಪಡಿಸಿತು. ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಹೆಚ್ಚಾಯಿತು. ಭಾರತ ಗುರಿಯಾಗಿಸಿಕೊಂಡ ಸ್ಥಳಗಳು ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಪ್ರಮುಖ ಕಮಾಂಡ್ ಕೇಂದ್ರಗಳಾಗಿದ್ದವು, ಇವು ಪುಲ್ವಾಮಾ (2019) ಮತ್ತು ಮುಂಬೈ (2008) ನಂತಹ ಪ್ರಮುಖ ದಾಳಿಗಳಿಗೆ ಕಾರಣವಾಗಿವೆ. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಇದಕ್ಕೆ ಪ್ರತಿಕಾರವೆಂಬಂತೆ ಪಾಕಿಸ್ತಾನ ಮುಂದಿನ ಮೂರು ದಿನಗಳಲ್ಲಿ ( ಮೇ 8, 9 ಮತ್ತು 10) ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಇದಕ್ಕೆ ಪ್ರತಿಯಾಗಿ ಭಾರತ, ಪಾಕಿಸ್ತಾನದ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು.
ನಾಲ್ಕು ದಿನಗಳ ಕಾಲ ನಡೆದ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ವಿನಿಮಯದ ಬಳಿಕ, ಎರಡೂ ದೇಶಗಳು ಮೇ 10 ರಂದು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಯುದ್ಧವನ್ನು ಕೊನೆಗೊಳಿಸಲು ಒಪ್ಪಿಕೊಂಡವು. ಪಾಕಿಸ್ತಾನದ ಕೋರಿಕೆಯ ಮೇರೆಗೆ ಎರಡೂ ರಾಷ್ಟ್ರಗಳ ನಡುವೆ ಡಿಜಿಎಂಒ ಮಟ್ಟದ ಮಾತುಕತೆಯ ನಂತರ ಕದನ ವಿರಾಮ ಉಂಟಾಯಿತು.

ನೂರ್ ಖಾನ್ ವಾಯುನೆಲೆಗೆ ಹಾನಿ: ಪಾಕಿಸ್ತಾನ

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಭಾಗವಾಗಿ ಭಾರತ ನಡೆಸಿದ ಕ್ಷಿಪಣಿ ದಾಳಿಯ ಸಮಯದಲ್ಲಿ ತನ್ನ ಪ್ರಮುಖ ಮಿಲಿಟರಿ ಸ್ಥಾಪನೆಗಳಲ್ಲಿ ಒಂದನ್ನು ಹೊಡೆದುರುಳಿಸಲಾಗಿತ್ತು ಎಂದು ಪಾಕಿಸ್ತಾನ ಅಧಿಕೃತವಾಗಿ ಒಪ್ಪಿಕೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನ ಮಂತ್ರಿ ಇಶಾಕ್ ದಾರ್, ರಾವಲ್ಪಿಂಡಿಯ ಚಕಲಾ ಪ್ರದೇಶದಲ್ಲಿರುವ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತೀಯ ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ದೃಢಪಡಿಸಿದರು. ಈ ದಾಳಿಯಿಂದಾಗಿ ನೆಲೆಗೆ ಹಾನಿಯಾಗಿದೆ ಮತ್ತು ಅಲ್ಲಿ ನೆಲೆಸಿದ್ದ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ತಿಳಿಸಿದರು.
ಭಾರತ ಪಾಕಿಸ್ತಾನದ ಕಡೆಗೆ ಡ್ರೋನ್‌ಗಳನ್ನು ಕಳುಹಿಸಿದೆ, 36 ಗಂಟೆಗಳಲ್ಲಿ, ಕನಿಷ್ಠ 80 ಡ್ರೋನ್‌ಗಳು ಬಂದಿವೆ. 80 ಡ್ರೋನ್‌ಗಳಲ್ಲಿ 79 ಡ್ರೋನ್‌ಗಳನ್ನು ತಡೆಹಿಡಿಯಲು ಸಾಧ್ಯವಾಗಿದ್ದು, ಕೇವಲ ಒಂದು ಡ್ರೋನ್ ಮಾತ್ರ ಮಿಲಿಟರಿ ನೆಲೆಯನ್ನು ಹಾನಿಗೊಳಿಸಿತು ಮತ್ತು ದಾಳಿಯಲ್ಲಿ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net