ಈಜಿಪ್ಟ್-ಅರ್ಜೆಂಟೀನಾ ಮ್ಯಾಚ್ ನಡುವೆ ರಣರಂಗವಾದ ಗಾಜಾ: ಇಸ್ರೇಲ್ ದಾಳಿಗೆ ಇಬ್ಬರು ಮಕ್ಕಳೂ ಸೇರಿ ನಾಲ್ವರು ದುರ್ಮರಣ! Israel Attack Gaza

ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್‌ನ ಈಜಿಪ್ಟ್-ಅರ್ಜೆಂಟೀನಾ ಪಂದ್ಯ ವೀಕ್ಷಣೆಗೆ ಸಿದ್ಧವಾಗಿದ್ದ ಗಾಜಾ ಜನ
  • ಇಸ್ರೇಲ್ ವೈಮಾನಿಕ ದಾಳಿಗೆ ವಿಶ್ವಕಪ್ ಸ್ಕ್ರೀನ್ ಅಳವಡಿಸುತ್ತಿದ್ದ ಅಧಿಕಾರಿ ಸಾವು
  • ಅಧಿಕಾರಿ ಜೊತೆ ಇಬ್ಬರೂ ಮಕ್ಕಳು ಸೇರಿ ನಾಲ್ವರ ದುರ್ಮರಣ
ಗಾಜಾ: ಜಗತ್ತಿನಾದ್ಯಂತ ಸದ್ಯ ಫಿಫಾ ಫುಟ್‌ಬಾಲ್ ವಿಶ್ವಕಪ್ ಹಬ್ಬದ ಅಲೆ ಎದ್ದಿದೆ. ಯುದ್ಧದ ಭೀಕರತೆಯ ನಡುವೆಯೂ ಗಾಜಾದ ಜನತೆ ನಿನ್ನೆ (ಮಂಗಳವಾರ, ಜು.7) ಸಂಜೆ ಈಜಿಪ್ಟ್ ಮತ್ತು ಅರ್ಜೆಂಟೀನಾ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದರು.
ಆದರೆ, ಇನ್ನೇನು ಪಂದ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ ನಡೆದ ಇಸ್ರೇಲಿ (Israel Attack Gaza) ಮಿಲಿಟರಿಯ ಭೀಕರ ವೈಮಾನಿಕ ದಾಳಿ ಇಡೀ ವಾತಾವರಣವನ್ನೇ ರಕ್ತಮಯವಾಗಿಸಿದೆ.
ಸಾರ್ವಜನಿಕವಾಗಿ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ದೊಡ್ಡ ಪರದೆಗಳನ್ನು ಅಳವಡಿಸುವ ಜವಾಬ್ದಾರಿ ಹೊತ್ತಿದ್ದ ಪ್ಯಾಲೆಸ್ಟೀನಿಯನ್ ನೆರವು ಸಮಿತಿಯ ಪ್ರಮುಖ ಅಧಿಕಾರಿ ಸೇರಿದಂತೆ ನಾಲ್ವರು ಈ ದಾಳಿಗೆ ಬಲಿಯಾಗಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಘೋಷಣೆಯಾಗಿದ್ದ ಪ್ರಾದೇಶಿಕ ಕದನ ವಿರಾಮದ ಹೊರತಾಗಿಯೂ, ಗಾಜಾದಲ್ಲಿ ನಾಗರಿಕರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿರುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಟಾರ್ಗೆಟ್ ಆಗಿದ್ದು ಯಾರು?
ಗಾಜಾ ನಗರದ ಸಬ್ರಾ ನೆರೆಹೊರೆಯಲ್ಲಿ ಚಲಿಸುತ್ತಿದ್ದ ಕಾರೊಂದನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಈ ದಾಳಿ ನಡೆಸಿದೆ. ಸ್ಫೋಟದ ತೀವ್ರತೆಗೆ ಕಾರಿನಲ್ಲಿದ್ದ ಗಾಜಾದ ಈಜಿಪ್ಟ್ ಪರಿಹಾರ ಸಮಿತಿಯ ಆಡಳಿತಾಧಿಕಾರಿ ಮೊಹಮ್ಮದ್ ಅಲ್-ವಾಹಿದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಅವರ ಜೊತೆಗೆ ಹತ್ತಿರದಲ್ಲೇ ನಡೆದು ಹೋಗುತ್ತಿದ್ದ ಎಂಟು ವರ್ಷದ ಫಾರಿ ಮತ್ತು ಹತ್ತು ವರ್ಷದ ಹಮ್ಜಾ ಅಲ್-ಡೇರಿ ಎಂಬ ಇಬ್ಬರು ಸಣ್ಣ ಮಕ್ಕಳು ಹಾಗೂ ಟ್ಯಾಕ್ಸಿ ಚಾಲಕ ಅಹ್ಮದ್ ದಗ್ಮುಶ್ ದುರ್ಮರಣಕ್ಕೀಡಾಗಿದ್ದಾರೆ ಎಂದು ಶಿಫಾ ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್ ಅಬು ಸೆಲ್ಮಿಯಾ ಖಚಿತಪಡಿಸಿದ್ದಾರೆ.
ಆದರೆ, ಈ ದಾಳಿಯ ನಂತರ ಸ್ಪಷ್ಟನೆ ನೀಡಿರುವ ಇಸ್ರೇಲಿ ಮಿಲಿಟರಿ, ನಮ್ಮ ಗುರಿ ಅಧಿಕಾರಿ ಅಲ್-ವಾಹಿದಿ ಆಗಿರಲಿಲ್ಲ, ಬದಲಿಗೆ ಹಮಾಸ್‌ನ ಸಕ್ರಿಯ ಉಗ್ರಗಾಮಿಯೊಬ್ಬನನ್ನು ಮುಗಿಸಲು ಈ ಕಾರ್ಯಾಚರಣೆ ಮಾಡಲಾಗಿತ್ತು ಎಂದು ಸಮರ್ಥಿಸಿಕೊಂಡಿದೆ. ಆದರೆ ಆಸ್ಪತ್ರೆ ಮೂಲಗಳು ಇದನ್ನು ನಿರಾಕರಿಸಿದ್ದು, ಮೃತ ಚಾಲಕ ದಗ್ಮುಶ್‌ಗೆ ಯಾವುದೇ ರಾಜಕೀಯ ಅಥವಾ ಉಗ್ರಗಾಮಿ ಸಂಘಟನೆಗಳ ಜೊತೆ ಸಂಬಂಧವಿರಲಿಲ್ಲ, ಆತ ಕೇವಲ ಸಾಮಾನ್ಯ ಟ್ಯಾಕ್ಸಿ ಡ್ರೈವರ್ ಆಗಿದ್ದ ಎಂದು ಹೇಳಿವೆ.

ಯುದ್ಧದ ನೋವಿನಲ್ಲೂ ಫುಟ್‌ಬಾಲ್ ಮೂಲಕ ಖುಷಿ ಹುಡುಕುತ್ತಿದ್ದ ಜನ!

ಮೃತಪಟ್ಟ ಅಲ್-ವಾಹಿದಿ ಸೇರಿದ್ದ ಈಜಿಪ್ಟ್ ಸಮಿತಿಯು ಕೇವಲ ಆಹಾರ, ಆಶ್ರಯ ನೀಡುವ ಮಾನವೀಯ ಕೆಲಸವನ್ನಷ್ಟೇ ಮಾಡುತ್ತಿರಲಿಲ್ಲ. ಯುದ್ಧದಿಂದ ಮನೆ-ಮಠ ಕಳೆದುಕೊಂಡು ಕಂಗಾಲಾಗಿದ್ದ ಜನರಿಗೆ ಸ್ವಲ್ಪ ನೆಮ್ಮದಿ ನೀಡಲು, ಸಾರ್ವಜನಿಕ ಚೌಕಗಳಲ್ಲಿ ದೊಡ್ಡ ಟಿವಿ ಪರದೆಗಳನ್ನು ಹಾಕಿ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡುತ್ತಿತ್ತು. ನಿನ್ನೆ ಸಂಜೆ ಕೂಡ ಪಂದ್ಯ ವೀಕ್ಷಣೆಗೆ ಜನರೆಲ್ಲಾ ಸೇರುವಷ್ಟರಲ್ಲಿ ಈ ದುರಂತ ಸಂಭವಿಸಿದೆ.
ಮತ್ತೊಂದೆಡೆ, ಈಜಿಪ್ಟ್ ಫುಟ್‌ಬಾಲ್ ತಂಡದ ಕೋಚ್ ಹೊಸಮ್ ಹಸನ್ ಅವರು ವಿಶ್ವಕಪ್ ವೇದಿಕೆಯನ್ನು ಪ್ಯಾಲೆಸ್ಟೀನಿಯನ್ನರ ಪರವಾಗಿ ಧ್ವನಿ ಎತ್ತಲು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಗೆದ್ದಾಗ ಮೈದಾನದಲ್ಲೇ ಪ್ಯಾಲೆಸ್ಟೀನಿಯನ್ ಧ್ವಜ ಹಾರಿಸಿದ್ದ ಹಸನ್, ಈ ವಿಜಯವನ್ನು ಗಾಜಾದ ಸಂತ್ರಸ್ತ ಕುಟುಂಬಗಳಿಗೆ ಅರ್ಪಿಸಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net