ನಿಮ್ಮ ಕೆಲಸ ನೀವು ಮಾಡಿ: ಉಮರ್ ಖಾಲಿದ್​ ಪರ ಬ್ಯಾಟ್​ ಬೀಸಿದ ಮಮ್ದಾನಿಗೆ ಖಡಕ್​ ಎಚ್ಚರಿಕೆ ಕೊಟ್ಟ ಭಾರತ | Umar Khalid

ಜೊಹ್ರಾನ್ ಮಮ್ದಾನಿ,  ಉಮರ್ ಖಾಲಿದ್
ಜೊಹ್ರಾನ್ ಮಮ್ದಾನಿ, ಉಮರ್ ಖಾಲಿದ್
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್
  • ಉಮರ್ ಖಾಲಿದ್​ಗೆ ಸಹಾನುಭೂತಿ ಸೂಚಿಸಿದ್ದ ನ್ಯೂಯಾರ್ಕ್​ ಮೇಯರ್​ ಜೊಹ್ರಾನ್ ಮಮ್ದಾನಿ
  • ವೈಯಕ್ತಿಕ ಪೂರ್ವಾಗ್ರಹಗಳನ್ನು ವ್ಯಕ್ತಪಡಿಸುವುದು ಅಧಿಕಾರದಲ್ಲಿರುವವರಿಗೆ ಯೋಗ್ಯವಲ್ಲ : ವಿದೇಶಾಂಗ ಸಚಿವಾಲಯ
ನವದೆಹಲಿ: ತಿಹಾರ್ ಜೈಲಿನಲ್ಲಿರುವ ಗಲಭೆಕೋರ ಉಮರ್ ಖಾಲಿದ್(Umar Khalid)​ಗೆ ಬೆಂಬಲ ಸೂಚಿಸಿ ನ್ಯೂಯಾರ್ಕ್ ನಗರ ಮೇಯರ್ ಜೊಹ್ರಾನ್ ಮಮ್ದಾನಿ ಬರೆದ ಪತ್ರಕ್ಕೆ ವಿದೇಶಾಂಗ ಸಚಿವಾಲಯ ತೀವ್ರವಾಗಿ ಪ್ರತಿಕ್ರಿಯಿಸಿದೆ.
ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ನಡೆದ ಸಭೆಯಲ್ಲಿ ಭಾರತೀಯ ಮೂಲದ ಮಮ್ದಾನಿ, ಖಾಲಿದ್ ಅವರ ಪೋಷಕರಿಗೆ ಕೈಬರಹದ ಸಂದೇಶವನ್ನು ಹಸ್ತಾಂತರಿಸಿ, ಉಮರ್​ನ ದೀರ್ಘಕಾಲದ ಸೆರೆವಾಸದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು.

ವೈಯಕ್ತಿಕ ಪೂರ್ವಾಗ್ರಹಗಳ ವಿರುದ್ಧ ಭಾರತ ಎಚ್ಚರಿಕೆ

ವಿದೇಶಾಂಗ ಸಚಿವಾಲಯದ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಈ ಬೆಳವಣಿಗೆಯ ಬಗ್ಗೆ ಕೇಳಿದಾಗ, ವಕ್ತಾರ ರಣಧೀರ್ ಜೈಸ್ವಾಲ್ ಸಾರ್ವಜನಿಕ ಹುದ್ದೆಯಲ್ಲಿರುವವರಿಗೆ ಇಂತಹ ಕೆಲಸ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದರು.
ಇತರ ಪ್ರಜಾಪ್ರಭುತ್ವಗಳಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಸಾರ್ವಜನಿಕ ಪ್ರತಿನಿಧಿಗಳು ಗೌರವಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಜೈಸ್ವಾಲ್ ಹೇಳಿದರು. ವೈಯಕ್ತಿಕ ಪೂರ್ವಾಗ್ರಹಗಳನ್ನು ವ್ಯಕ್ತಪಡಿಸುವುದು ಅಧಿಕಾರದಲ್ಲಿರುವವರಿಗೆ ಯೋಗ್ಯವಲ್ಲ. ಇಂತಹ ಹೇಳಿಕೆಗಳನ್ನು ನೀಡುವ ಬದಲು, ಅವರಿಗೆ ವಹಿಸಲಾದ ಜವಾಬ್ದಾರಿಗಳ ಮೇಲೆ ಗಮನಕೊಡುವುದು ಉತ್ತಮ ಎಂದು ಹೇಳಿದರು.
ಪ್ರೀತಿಯ ಉಮರ್, ಕಹಿ ಭಾವನೆ ಮತ್ತು ಅದು ನಮ್ಮ ಆತ್ಮವನ್ನು ನುಂಗಲು ಬಿಡದಿರುವ ಮಹತ್ವದ ಬಗ್ಗೆ ನೀವು ಹೇಳುತ್ತಿದ್ದ ಮಾತುಗಳನ್ನು ನಾನು ಆಗಾಗ್ಗೆ ನೆನಪಿಸಿಕೊಳ್ಳುತ್ತೇನೆ. ನಿಮ್ಮ ಹೆತ್ತವರನ್ನು ಭೇಟಿಯಾಗಿದ್ದು ಸಂತೋಷವಾಯಿತು. ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಮಮ್ದಾನಿ ಪತ್ರದಲ್ಲಿ ಬರೆದಿದ್ದರು.

ಉಮರ್ ಖಾಲಿದ್ ಪ್ರಕರಣದ ಹಿನ್ನೆಲೆ

ಸೆಪ್ಟೆಂಬರ್ 2020 ರಲ್ಲಿ ದೆಹಲಿ ಪೊಲೀಸರು ಬಂಧಿಸಿದಾಗಿನಿಂದ ಉಮರ್ ಖಾಲಿದ್ ಜೈಲಿನಲ್ಲೇ ಇದ್ದಾರೆ. ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಕಠಿಣ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ಆರೋಪ ಹೊರಿಸಲಾಯಿತು.
ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರುದ್ಧದ ಪ್ರತಿಭಟನೆಗಳ ನಡುವೆ ನಡೆದ ಘರ್ಷಣೆಯಲ್ಲಿ 53 ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡರು.ಹಿಂಸಾಚಾರವು ಕೇಂದ್ರ ಸರ್ಕಾರವನ್ನು ದೂಷಿಸುವ ಗುರಿಯನ್ನು ಹೊಂದಿರುವ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಸುಪ್ರೀಂ ಕೋರ್ಟ್ ಖಾಲಿದ್ ಮತ್ತು ಅದೇ ಪ್ರಕರಣದಲ್ಲಿ ಆರೋಪಿಯಾಗಿರುವ ಮತ್ತೊಬ್ಬ ಕಾರ್ಯಕರ್ತ ಶಾರ್ಜೀಲ್ ಇಮಾಮ್​ಗೆ ಜಾಮೀನು ನೀಡಲು ನಿರಾಕರಿಸಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net