ಸತ್ತವರೊಂದಿಗೆ ನೃತ್ಯ, ಅಸ್ಥಿಪಂಜರಕ್ಕೆ ಸಿಂಗಾರ: ಏನಿದು ಫಮಾಡಿಹಾನ ಉತ್ಸವ? Dead Body

ಫಮಾಡಿಹಾನ ಆಚರಣೆಯಲ್ಲಿ ನಿರತರಾದ ಜನ
ಫಮಾಡಿಹಾನ ಆಚರಣೆಯಲ್ಲಿ ನಿರತರಾದ ಜನ
Published on

ಪ್ರಮುಖ ಮುಖ್ಯಾಂಶಗಳು

  • ಇಂಡೋನೇಷ್ಯಾದ ಮಲಗಾಸಿ ಸಮುದಾಯ ಮಾನವನ ಜೀವನದಲ್ಲಿ ಮರಣವೇ ಅಂತ್ಯ ಎಂಬುದನ್ನು ನಂಬುವುದಿಲ್ಲ
  • ಸತ್ತವರೊಂದಿಗೆ ನೃತ್ಯ ಮಾಡುವ ಆಚರಣೆ ಹೊಂದಿದೆ ಮಲಗಾಸಿ ಸಮುದಾಯ
  • ಸತ್ತವರಿಗಾಗಿ ಉಡುಗೊರೆ ತರುವ ಉತ್ಸವ : ಫಮಾಡಿಹಾನ
ಮಡಗಾಸ್ಕರ್‌: ಹುಟ್ಟು ಉಚಿತ; ಸಾವು ನಿಶ್ಚಿತ, ಸಾವೆನ್ನುವುದೇ ಜೀವನದ ಅಂತಿಮ ಸತ್ಯ ಎಂಬೆಲ್ಲಾ ಮಾತು, ನಾಣ್ಣುಡಿಗಳನ್ನು ನಾವು ಕೇಳಿರುತ್ತೇವೆ. ಅದೇ ರೀತಿ ಜಗತ್ತಿನ ಪ್ರತಿ ಧರ್ಮದಲ್ಲಿಯೂ ಸಾವು, ಪುನರ್ಜನ್ಮದ ಕುರಿತು ತನ್ನದೇ ಆದ ವ್ಯಾಖ್ಯಾನಗಳನ್ನು ಹೊಂದಿವೆ.
ಹಿಂದೂ, ಬೌದ್ಧ, ಸಿಖ್ ಮತ್ತು ಜೈನ ಧರ್ಮವನ್ನು ಪಾಲಿಸುವವರು ಕರ್ಮ ಅಂದರೆ ನಾವು ಮಾಡುವ ಕಲಸದ ಆಧಾರದಲ್ಲಿ ನಮ್ಮ ಮರುಜನ್ಮ ಮತ್ತು ಪುನರ್ಜನ್ಮ ನಿರ್ಧಾರವಾಗುತ್ತದೆ ಎಂದು ನಂಬುತ್ತಾರೆ. ಕ್ರಿಶ್ಚಿಯನ್​, ಇಸ್ಲಾಂ ಮತ್ತು ಯಹೂದಿಗಳು ಸ್ವರ್ಗದಲ್ಲಿ ತಮ್ಮ ಅಂತಿಮ ತೀರ್ಪು ದೊರೆತ ಮೇಲೆ ಮರಣಾನಂತರದ ಜೀವನ ನಿರ್ಧಾರವಾಗುತ್ತದೆ ಎಂದು ನಂಬುತ್ತಾರೆ.
ಆದರೆ ಇಂಡೋನೇಷ್ಯಾದ ಮಲಗಾಸಿ ಸಮುದಾಯವು ಮಾನವನ ಜೀವನದಲ್ಲಿ ಮರಣವೇ ಅಂತ್ಯ ಎಂಬುದನ್ನು ನಂಬುವುದಿಲ್ಲ, ಬದಲಾಗಿ ಇವರು ಸತ್ತ (Dead Body)ವರೊಂದಿಗೆ ನೃತ್ಯ ಮಾಡುವ ವಿಚಿತ್ರ ಆಚರಣೆಯನ್ನು ಹೊಂದಿದ್ದಾರೆ.

ಫಮಾಡಿಹಾನ: ಸತ್ತವರೊಂದಿಗೆ ನೃತ್ಯ ಮಾಡುವ ಆಚರಣೆ

ಏನು ಸತ್ತವರೊಂದಿಗೆ ನೃತ್ಯ ಮಾಡುವುದೇ? ಎಂದು ನೀವು ಕೇಳಿದರೆ ಖಂಡಿತ ಹೌದು ಇಂಡೋನೇಷ್ಯಾದ ಈ ಸಮುದಾಯವು ಸಾವು ಮಾನವನ ಅಂತ್ಯವಲ್ಲ ಎಂದು ನಂಬುತ್ತದೆ. ಈ ಆಚರಣೆಯನ್ನು ಅವರು ಫಮಾಡಿಹಾನ ಎಂದು ಕರೆಯಲಾಗುತ್ತದೆ. ಈ ಜನರು ಸತ್ತ ಜನರ ಆತ್ಮಗಳು ಭೂಮಿಗೆ ಮರಳಲು ಬಯಸುತ್ತವೆ ಎಂದು ನಂಬುತ್ತಾರೆ. ಅದಕ್ಕಾಗಿ ಸಮಾಧಿಗಳಲ್ಲಿ ಹೂಳಲಾದ ಕುಟುಂಬದ ಸದಸ್ಯರನ್ನು ಹೊರತೆಗೆದು ಅವರೊಂದಿಗೆ ನೃತ್ಯ ಮಾಡುತ್ತಾರೆ.
ಅವರ ಅಸ್ತಿ ಪಂಜರಗಳಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಯ ಉಡಿಸಿ ಇಡೀ ದಿನ ಅವರೊಂದಿಗೆ ನೃತ್ಯ ಮತ್ತು ಪಾರ್ಟಿ ಮಾಡಲಾಗುತ್ತದೆ. ಈ ಆಚನೆಯನ್ನು 5 ರಿಂದ 7 ವರ್ಷಗಳಿಗೊಮ್ಮೆ ಹಮ್ಮಿಕೊಳ್ಳಲಾಗುತ್ತದೆ. ಸಾವಿನ ನಂತರ, ಅವರ ಪೂರ್ವಜರ ಆತ್ಮಗಳು ಅಸ್ತಿತ್ವದಲ್ಲಿವೆ ಎಂದು ನಂಬುವ ಇವರು, ಅವರುಗಳು ತಮ್ಮ ಸುತ್ತಲಿರುವ ಪ್ರಾಣಿ, ಮರ ಮತ್ತು ಗಾಳಿಯಲ್ಲಿ ವಾಸಿಸುತ್ತಾರೆ ಎಂದು ನಂಬುತ್ತಾರೆ.

ಸತ್ತವರಿಗಾಗಿ ಉಡುಗೊರೆ ತರುವ ಉತ್ಸವ

17 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾದ ಫಮಾಡಿಹಾನಾ ಆಚರಣೆಯ ಸಮಯದಲ್ಲಿ, ಜನರು ತಮ್ಮ ಕುಟುಂಬ ಸದಸ್ಯರಿಗೆ ಅವರಿಷ್ಟದ ಉಡುಗೊರೆಗಳನ್ನು ತರುತ್ತಾರೆ. ಯಾರಾದರೂ ಸುಗಂಧ ದ್ರವ್ಯಗಳನ್ನು ಇಷ್ಟಪಟ್ಟರೆ, ಅವರ ಕುಟುಂಬ ಸದಸ್ಯರು ಶವದ ಮೇಲೆ ಸುಗಂಧ ದ್ರವ್ಯವನ್ನು ಸುರಿಯುತ್ತಾರೆ. ಸೌಂದರ್ಯದ ಬಗ್ಗೆ ಅತಿಹೆಚ್ಚು ಕಾಳಜಿ ಇದ್ದವರಾದರೆ ಅವರ ಹೆಣಕ್ಕೆ ಸಿಂಗಾರ ಮಾಡಲಾಗುತ್ತದೆ,

ಪ್ರವಾಸಿಗರು ಈ ಆಚರಣೆಯಲ್ಲಿ ಭಾಗವಹಿಸಬಹುದು

ಜುಲೈ ಮತ್ತು ಅಕ್ಟೋಬರ್ ನಡುವೆ ಮಡಗಾಸ್ಕರ್‌ನ ಎತ್ತರದ ಪ್ರದೇಶಗಳಲ್ಲಿ ಫಮದಿಹಾನವನ್ನು ಆಯೋಜಿಸಲಾಗುತ್ತದೆ. ಆದರೆ ಸ್ಥಳಕ್ಕೆ ತಲುಪುವುದು ಕಷ್ಟಕರವಾಗಿರುತ್ತದೆ. ಫ್ರೆಂಚ್ ಅಥವಾ ಮಲಗಾಸಿ ಭಾಷೆ ಬರದಿದ್ದರೆ ಅವರು ನಿಮ್ಮನ್ನು ಆಹ್ವಾನಿಸುವುದಿಲ್ಲ. ಮತ್ತು ಒಂದೇ ಸಮನೆ ನೂರಾರು ಹೆಣಗಳನ್ನು ಹೊರ ತೆಗೆಯುವುದರಿಂದ ಸಹಿಸಲು ಅಸಾಧ್ಯವಾದ ವಾಸನೆ ಬರುತ್ತದೆ.

ಪ್ಲೇಗ್​ನಿಂದ ಬದಲಾದ ನಿಯಮ

2017 ರಲ್ಲಿ, ಮಡಗಾಸ್ಕರ್‌ನಲ್ಲಿ ಪ್ಲೇಗ್ ಹರಡಿ ಸುಮಾರು 100 ಜನ ಸಾವನ್ನಪ್ಪಿದ್ದರು. ಫಮಾಡಿಹಾನ ಪದ್ಧತಿಯಿಂದ ಬ್ಯಾಕ್ಟೀರಿಯಾ ಹರಡಿರಬಹುದು ಎಂದು ಆರೋಗ್ಯ ಅಧಿಕಾರಿಗಳು ಸಮುದಾಯದವರಿಗೆ ಎಚ್ಚರಿಕೆ ನೀಡಿದ್ದರು. ಆದ್ದರಿಂದ, ಮಲಗಾಸಿ ಸರ್ಕಾರವು ಪ್ಲೇಗ್‌ನಿಂದ ಬಲಿಯಾದವರನ್ನು ಮತ್ತೆ ತೆರೆಯಬಹುದಾದ ಸಮಾಧಿಗಳಲ್ಲಿ ಹೂಳಬಾರದು ಎಂದು ಆದೇಶ ಹೊರಡಿಸಿತು.
ಒಬ್ಬ ವ್ಯಕ್ತಿಯು ನ್ಯುಮೋನಿಕ್ ಪ್ಲೇಗ್‌ನಿಂದ ಸಾವನ್ನಪ್ಪಿದರೆ ಮತ್ತು ನಂತರ ಫಮಾಡಿಹಾನಾಗಾಗಿ ತೆರೆಯಲಾದ ಸಮಾಧಿಯಲ್ಲಿ ಸಮಾಧಿ ಮಾಡಿದರೆ, ದೇಹವನ್ನು ನಿರ್ವಹಿಸುವ ಯಾರಿಗಾದರೂ ಬ್ಯಾಕ್ಟೀರಿಯಾ ಹರಡಬಹುದು ಮತ್ತು ಕಲುಷಿತಗೊಳಿಸಬಹುದು ಎಂದು ಆರೋಗ್ಯ ಸಚಿವಾಲಯ ಅದೇಶ ಹೊರಡಿಸಿದೆ.

ಅವನತಿಯತ್ತ ಸಾಗಿದೆ ಫಮಾಡಿಹಾನ ಉತ್ಸವ

ಆಧುನಿಕ ಕಾಲದಲ್ಲಿ ಮಡಗಾಸ್ಕರ್‌ನಲ್ಲಿ ನಡೆಯುವ ಸತ್ತವರೊಂದಿಗೆ ನೃತ್ಯ ಮಾಡುವ ಆಚರಣೆಯು ಕ್ಷೀಣಿಸುತ್ತಿದೆ. ಕ್ರಿಶ್ಚಿಯನ್ ಸಂಸ್ಥೆಗಳ ವಿರೋಧವು ಮೊದಲನೇ ಕಾರಣವಾಗಿದ್ದು, ಆಚರಣೆಯನ್ನು ಆಯೋಜಿಸಲು ತಗಲುವ ವೆಚ್ಚವನ್ನು ಭರಿಸಲು ಈ ಸಮುದಾಯಗಳಿಗೆ ಆಗದಿರುವುದೇ ಎರಡನೆಯ ಕಾರಣವಾಗಿದೆ.
ಹೆಣಗಳನ್ನು ಮುಚ್ಚಲು ದುಬಾರಿ ರೇಷ್ಮೆ ಕವಚಗಳನ್ನು ಮತ್ತು ನೂರಾರು ಅತಿಥಿಗಳಿಗೆ ಆತಿಥ್ಯ ನೀಡಲು ಸಾಧ್ಯವಾಗದ ಹಿನ್ನಲೆ ಈ ಆಚರಣೆ ಕ್ರಮೇಣ ಕಡಿಮೆಯಾಗುತ್ತಾ ಬಂದಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net