ಬಾಂಗ್ಲಾ ಅಧ್ಯಕ್ಷ ದಿಢೀರ್​ ರಾಜೀನಾಮೆ! ಎರಡು ವರ್ಷಗಳ ಮೊದಲೇ ಗುಡ್​ಬೈ ಹೇಳಲು ಶೇಖ್ ಹಸೀನಾ ಕಾರಣ?

ಬಾಂಗ್ಲಾ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್​ ಶಹಾಬುದ್ದೀನ್ ರಾಜೀನಾಮೆ
ಬಾಂಗ್ಲಾ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್​ ಶಹಾಬುದ್ದೀನ್ ರಾಜೀನಾಮೆ
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್​ ಶಹಾಬುದ್ದೀನ್ ರಾಜೀನಾಮೆ
  • ಲಂಡನ್ ಪ್ರವಾಸದ ವೇಳೆ ಶೇಖ್​ ಹಸೀನಾ ಜತೆ ಫೋನ್ ಕಾಲ್​
  • ಎರಡು ವರ್ಷಗಳ ಮೊದಲೇ ರಾಜೀನಾಮೆ ಘೋಷಣೆ
ಢಾಕಾ: ಬಾಂಗ್ಲಾದೇಶ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿರುವ​ ಮೊಹಮ್ಮದ್ ಶಹಾಬುದ್ದೀನ್, ತಮ್ಮ ಎರಡು ವರ್ಷಗಳ ಅವಧಿಗೂ ಮೊದಲೇ ಗುಡ್​ಬೈ ಹೇಳಿರುವುದು ಸದ್ಯ ಭಾರಿ ಅಚ್ಚರಿಗೆ ಕಾರಣವಾಗಿದೆ.
ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾಗಿ ಘೋಷಿಸಿದ್ದರು. ಲಂಡನ್​ ಪ್ರವಾಸದ ವೇಳೆ ಅವರು ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ದೂರವಾಣಿ ಕರೆಯಲ್ಲಿ ಸಂಭಾಷಣೆ ನಡೆಸಿದ್ದೇ ಇದೀಗ ರಾಜೀನಾಮೆಗೆ ದೊಡ್ಡ ಕಾರಣ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಇಲ್ಲಿಯವರೆಗೆ ಇದಕ್ಕೆ ಯಾವುದೇ ಅಧಿಕೃತ ಪುರಾವೆಗಳು ಲಭಿಸಿಲ್ಲ ಎಂಬುದು ಗಮನಾರ್ಹ.
ತಮ್ಮ ರಾಜೀನಾಮೆ ಕುರಿತಂತೆ ಮಾತನಾಡಿದ ಶಹಾಬುದ್ದೀನ್, "ನಾನು ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಹೀಗಾಗಿಯೇ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಈಗ ಇದರ ಬಗ್ಗೆ ಹೆಚ್ಚೇನು ಹೇಳಲು ಬಯಸುವುದಿಲ್ಲ" ಎಂದು ಹೇಳಿ, ಬಂಗಾ ಭವನದಿಂದ ಹೊರನಡೆದರು. ನಾಯಕರು ತಮ್ಮ ರಾಜೀನಾಮೆ ಪತ್ರವನ್ನು ಅದಾಗಲೇ ಸಂಸತ್ತಿಗೆ ಕಳುಹಿಸಿದ್ದಾಗಿ ಬಾಂಗ್ಲಾದೇಶ ಮಾಧ್ಯಮಗಳು ಮಾಹಿತಿ ಹಂಚಿಕೊಂಡಿವೆ.

ಶೇಖ್ ಹಸೀನಾ ಜತೆ ಏನದು ಮಾತುಕತೆ?

ಈ ವರ್ಷದ ಮೇ ತಿಂಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಿದ್ದ ಶಹಾಬುದ್ದೀನ್, ಪ್ರಸ್ತುತ ಭಾರತದಲ್ಲೇ ವಾಸ್ತವ್ಯ ಹೂಡಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಜತೆ ಕೆಲ ಸಮಯ ಸಂಭಾಷಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಮೇ 9ರಂದು ಲಂಡನ್‌ಗೆ ತೆರಳಿದ್ದ ಅವರು, ಮೇ 18ಕ್ಕೆ ಬಾಂಗ್ಲಾಗೆ ವಾಪಾಸ್ ಆದರು. ಈ ವಿಷಯ ಹೊರಬಿದ್ದ ಕಾರಣ, ಅವರ ರಾಜೀನಾಮೆಗೆ ಒತ್ತಡ ಹೇರಲಾಯಿತು ಎಂಬ ಮಾತುಗಳು ಕೇಳಿಬಂದಿವೆ.
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರತೆಗೆ ಅವಾಮಿ ಲೀಗ್ ಸರ್ಕಾರ ಪತನವಾಯಿತು. ಆಕ್ರೋಶಭರಿತ ಪ್ರತಿಭಟನಾಕಾರರು ತನ್ನ ಕಚೇರಿ, ಮನೆಯನ್ನು ಧ್ವಂಸ ಮಾಡಿದ ಬೆನ್ನಲ್ಲೇ ಶೇಖ್ ಹಸೀನಾ ಆಗಸ್ಟ್ 2024ರಲ್ಲಿ ಭಾರತಕ್ಕೆ ಹಾರಿ, ಸದ್ಯ ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಅಧ್ಯಕ್ಷರು ಅವರೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಪ್ರಯತ್ನಿಸಿದ ಬಗ್ಗೆ ಸರ್ಕಾರ ಮತ್ತು ಗುಪ್ತಚರ ಸಂಸ್ಥೆಗಳು ಖಚಿತ ಮಾಹಿತಿ ಪಡೆದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶಹಾಬುದ್ದೀನ್ ರಾಜಕೀಯ ಜೀವನ

ಮೊಹಮ್ಮದ್ ಶಹಾಬುದ್ದೀನ್ ಅವರು ಏಪ್ರಿಲ್ 24, 2023ರಂದು ಬಾಂಗ್ಲಾದೇಶದ 22ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅವರು ಅವಾಮಿ ಲೀಗ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಸಂದರ್ಭದಲ್ಲಿ, ಅವರಿಗೆ ಯಾವುದೇ ವಿರೋಧಿಗಳಿಲ್ಲದ ಕಾರಣ ಸರ್ವಾನುಮತದಿಂದ ಆಯ್ಕೆಯಾದರು.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. 2006ರಲ್ಲಿ ನ್ಯಾಯಾಂಗದಿಂದ ನಿವೃತ್ತರಾದರು. ನಂತರ ಅವರು 2011ರಿಂದ 2016 ರವರೆಗೆ ಭ್ರಷ್ಟಾಚಾರ ನಿಗ್ರಹ ಆಯೋಗದ ಆಯುಕ್ತರಾಗಿ ಸೇವೆ ಸಲ್ಲಿಸಿದರು. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾಗವಹಿಸಿದರು ಮತ್ತು ಅವಾಮಿ ಲೀಗ್‌ನಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net