ಪಾಕ್ ವಾಯುದಾಳಿಗೆ ಅಫ್ಘಾನ್​ ಕೆಂಡ...ತಕ್ಕ ಪ್ರತ್ಯುತ್ತರ ನೀಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಎಚ್ಚರಿಕೆ! | Pakistan Air Strike

 Pakistan Air Strike (ಸಂಗ್ರಹ ಚಿತ್ರ)
Pakistan Air Strike (ಸಂಗ್ರಹ ಚಿತ್ರ)
Published on
ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಗಡಿ ಭಾಗದಲ್ಲಿ ಪಾಕಿಸ್ತಾನ ನಡೆಸಿದ ವಾಯು ದಾಳಿಯನ್ನು ( Pakistan Air Strike) ತಾಲಿಬಾನ್ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಈ ದಾಳಿ ಅಂತರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ, ಆದ್ದರಿಂದ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಅಫ್ಘಾನ್ ಎಚ್ಚರಿಕೆ ನೀಡಿದೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ವಕ್ತಾರ ಜಬಿಹುಲ್ಲಾ ಮುಜಾಹಿದ್, ನಂಗರ್ಹಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ವಸತಿ ಮನೆಗಳು ಮತ್ತು ಧಾರ್ಮಿಕ ಸೆಮಿನರಿಯ ಮೇಲೆ ದಾಳಿ ಈ ದಾಳಿಗಳು ನಡೆದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಡಜನ್​​ಗಟ್ಟಲೆ ಮುಗ್ಧ ನಾಗರಿಕರನ್ನು ಕೊಂದಿವೆ ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿ ಅವರು ನಮ್ಮ ನಾಗರಿಕ ದೇಶಬಾಂಧವರ ಮೇಲೆ ಬಾಂಬ್ ದಾಳಿ ನಡೆಸಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಡಜನ್ಗಟ್ಟಲೆ ಜನರನ್ನು ಹುತಾತ್ಮರನ್ನಾಗಿ ಮಾಡಿ ಗಾಯಗೊಳಿಸಿದರು ಎಂದು ಮುಜಾಹಿದ್ ಬರೆದುಕೊಂಡಿದ್ದಾರೆ.

ಪ್ರತಿಕಾರದ ಪ್ರತಿಜ್ಞೆ ಮಾಡಿದ ಅಫ್ಘಾನಿಸ್ತಾನ

ದೇಶದ ಸಾರ್ವಭೌಮತ್ವವನ್ನು ಕಾಪಾಡುವುದು ಮತ್ತು ಅದರ ಜನರನ್ನು ರಕ್ಷಿಸುವುದು ಧಾರ್ಮಿಕ ಮತ್ತು ರಾಷ್ಟ್ರೀಯ ಜವಾಬ್ದಾರಿ ಎಂದು ಅಫ್ಘಾನ್ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಹೇಳಿದ್ದು, ಸರಿಯಾದ ಸಮಯದಲ್ಲಿ ಸೂಕ್ತ ಮತ್ತು ಲೆಕ್ಕಾಚಾರದ ಪ್ರತಿಕ್ರಿಯೆಯನ್ನು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ನಾಗರಿಕರನ್ನು ಗುರಿಯಾಗಿಸಿಕೊಳ್ಳುವ ಮೂಲಕ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿರುವುದು ಪಾಕಿಸ್ತಾನಿ ಸೇನೆಯ ಗುಪ್ತಚರ ಮತ್ತು ಭದ್ರತಾ ವೈಫಲ್ಯಗಳಿಗೆ ಸ್ಪಷ್ಟ ಸಾಕ್ಷಿಯಾಗಿದ್ದು, ಈ ರೀತಿಯ ಪುನರಾವರ್ತಿತ ಆಕ್ರಮಣಗಳು ಅವರ ಆಂತರಿಕ ನ್ಯೂನತೆಗಳನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪಾಕ್​ ಹೇಳಿದ್ದೇನು...?

ಇತ್ತೀಚೆಗೆ ಪಾಕ್​ನಲ್ಲಿ ನಡೆದ ಮಾರಕ ದಾಳಿಗಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕ್ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಪಾಕ್​ನ ಮಾಹಿತಿ ಸಚಿವ ಅತ್ತೌಲ್ಲಾ ತರಾರ್, ಸೇನೆಯು ಗುಪ್ತಚರ ಆಧಾರಿತ ಮತ್ತು ಆಯ್ದ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಹೇಳಿಕೊಂಡಿದ್ದು, ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗೆ ಸಂಬಂಧಿಸಿದ ಏಳು ಶಿಬಿರಗಳನ್ನು ಗುರಿಯಾಗಿಸಿಕೊಂಡಿದೆ. ಟಿಟಿಪಿ ಪಾಕಿಸ್ತಾನಿ ಉಗ್ರಗಾಮಿ ಗುಂಪಾಗಿದ್ದು, ದೇಶದಲ್ಲಿ ನಡೆದ ಅನೇಕ ದಾಳಿಗಳಿಗೆ ಹೊಣೆ ಹೊತ್ತುಕೊಂಡಿದೆ.

ಪಾಕ್​ನ​ ಈ ಕೃತ್ಯಕ್ಕೆ ಕಾರಣವೇನು..?

ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ನಡೆದ ಮಾರಕ ಆತ್ಮಾಹುತಿ ಬಾಂಬ್ ದಾಳಿಯ ಕೆಲವೇ ದಿನಗಳ ಬಳಿಕ ಈ ವೈಮಾನಿಕ ದಾಳಿ ನಡೆದಿದ್ದು, ದಾಳಿಕೋರ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಭದ್ರತಾ ಠಾಣೆಯೊಳಗೆ ನುಗ್ಗಿಸಿ 11 ಸೈನಿಕರು ಮತ್ತು ಒಂದು ಮಗುವಿನ ಸಾವಿಗೆ ಕಾರಣನಾಗಿದ್ದ, ಅಧಿಕಾರಿಗಳು ದಾಳಿಕೋರ ಅಫ್ಘಾನ್ ಪ್ರಜೆ ಎಂದು ಗುರುತಿಸಿದ್ದರು.
ಬನ್ನು ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ, ಮತ್ತೊಂದು ಆತ್ಮಹತ್ಯಾ ಬಾಂಬರ್ ಭದ್ರತಾ ಪಡೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಒಬ್ಬ ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಇಬ್ಬರು ಸೈನಿಕರು ಸಾವನ್ನಪ್ಪಿದರು. ಈ ದಾಳಿಗೆ ಕಾರಣರಾದವರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪಾಕಿಸ್ತಾನ ಸೇನೆ ಎಚ್ಚರಿಕೆ ನೀಡಿತ್ತು.
ಇಸ್ಲಾಮಾಬಾದ್‌ನ ಶಿಯಾ ಮಸೀದಿಯಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 31 ಭಕ್ತರು ಸಾವನ್ನಪ್ಪಿದ್ದು ಸೇರಿದಂತೆ ಇತ್ತೀಚಿನ ದಾಳಿಗಳನ್ನು ಅಫ್ಘಾನಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿಗಳು ಯೋಜಿಸಿದ್ದಾರೆ ಎಂಬುದಕ್ಕೆ ಪಾಕಿಸ್ತಾನದ ಬಳಿ ಸ್ಪಷ್ಟ ಪುರಾವೆಗಳಿವೆ ಎಂದು ಸಚಿವ ತರಾರ್ ಹೇಳಿದ್ದಾರೆ.
2021 ರಲ್ಲಿ ತಾಲಿಬಾನ್ ಅಧಿಕಾರಿಗಳು ಕಾಬೂಲ್‌ನಲ್ಲಿ ನಿಯಂತ್ರಣವನ್ನು ಮರಳಿ ಪಡೆದಾಗಿನಿಂದ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಅಫ್ಘಾನ್ ಮಣ್ಣನ್ನು ಭಯೋತ್ಪಾದಕರಿಗೆ ಆಶ್ರಯ ನೀಡಲು ಬಳಸುತ್ತಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net