ಫಿಫಾ ವಿಶ್ವಕಪ್ 2026; ಎಂಬಪ್ಪೆ ಜಾದುಗೆ ಇರಾಕ್ ಧೂಳೀಪಟ: ವಿಶ್ವಕಪ್ ಇತಿಹಾಸದ ದಾಖಲೆ ಪುಟ ಸೇರಿದ ಕಿಲಿಯನ್! ನಾಕೌಟ್​ಗೆ ಲಗ್ಗೆ ಇಟ್ಟ ಫ್ರಾನ್ಸ್! Kylian Mbappe

ಫಿಫಾ ವಿಶ್ವಕಪ್ 2026; ಎಂಬಪ್ಪೆ ಜಾದುಗೆ ಇರಾಕ್ ಧೂಳೀಪಟ: ವಿಶ್ವಕಪ್ ಇತಿಹಾಸದ ದಾಖಲೆ ಪುಟ ಸೇರಿದ ಕಿಲಿಯನ್! ನಾಕೌಟ್​ಗೆ ಲಗ್ಗೆ ಇಟ್ಟ ಫ್ರಾನ್ಸ್!
ಫಿಫಾ ವಿಶ್ವಕಪ್ 2026; ಎಂಬಪ್ಪೆ ಜಾದುಗೆ ಇರಾಕ್ ಧೂಳೀಪಟ: ವಿಶ್ವಕಪ್ ಇತಿಹಾಸದ ದಾಖಲೆ ಪುಟ ಸೇರಿದ ಕಿಲಿಯನ್! ನಾಕೌಟ್​ಗೆ ಲಗ್ಗೆ ಇಟ್ಟ ಫ್ರಾನ್ಸ್!
Published on
ಫಿಲಡೆಲ್ಫಿಯಾ: ವಿಶ್ವಕಪ್ ಫುಟ್‌ಬಾಲ್ ಇತಿಹಾಸದ ಅತ್ಯಂತ ಅಪಾಯಕಾರಿ ಸ್ಟ್ರೈಕರ್ ಕಿಲಿಯನ್ ಎಂಬಪ್ಪೆ (Kylian Mbappe) ತಮ್ಮ ವೃತ್ತಿಜೀವನದ 100ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅಮೆರಿಕದ ಫಿಲಡೆಲ್ಫಿಯಾದಲ್ಲಿ ಮಂಗಳವಾರ ನಡೆದ ಫಿಫಾ ವಿಶ್ವಕಪ್ 2026ರ ಗ್ರೂಪ್ ಹಂತದ ಪಂದ್ಯದಲ್ಲಿ ಎಂಬಪ್ಪೆ ಸಿಡಿಸಿದ ಆಕರ್ಷಕ ಎರಡು ಗೋಲುಗಳ ಬಲದಿಂದ ಫ್ರಾನ್ಸ್ ತಂಡವು ಇರಾಕ್ ವಿರುದ್ಧ 3-0 ಗೋಲುಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಮಾಜಿ ಚಾಂಪಿಯನ್ ಫ್ರಾನ್ಸ್ ಟೂರ್ನಿಯ ನಾಕೌಟ್ ಹಂತಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ.
ಈ ಪಂದ್ಯದಲ್ಲಿ ಎರಡು ಗೋಲು ಬಾರಿಸುವ ಮೂಲಕ 27 ವರ್ಷದ ಎಂಬಪ್ಪೆ ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 16 ಗೋಲುಗಳನ್ನು ಪೂರೈಸಿದ್ದಾರೆ. ಈ ಮೂಲಕ ಜರ್ಮನಿಯ ದಂತಕಥೆ ಮಿರೋಸ್ಲಾವ್ ಕ್ಲೋಸ್ ಅವರ ಸಾರ್ವಕಾಲಿಕ 16 ಗೋಲುಗಳ ದಾಖಲೆಯನ್ನು ಎಂಬಪ್ಪೆ ಸಮಗಟ್ಟಿದ್ದಾರೆ. ಪ್ರಸ್ತುತ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಇತಿಹಾಸದಲ್ಲಿ ಎಂಬಪ್ಪೆಗಿಂತ ಮುಂದೆ ಇರುವುದು ಅರ್ಜೆಂಟೀನಾದ ದಿಗ್ಗಜ ಲಿಯೋನೆಲ್ ಮೆಸ್ಸಿ (18 ಗೋಲು) ಮಾತ್ರ.

ಮಳೆ-ಸಿಡಿಲಿನ ಹೈಡ್ರಾಮಾ, ಅಡ್ಡಿಯಾದ ವರುಣ!

ಪಂದ್ಯದ ಆರಂಭದಿಂದಲೇ ಫ್ರಾನ್ಸ್ ಆಟಗಾರರು ಇರಾಕ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಪಂದ್ಯದ 14ನೇ ನಿಮಿಷದಲ್ಲೇ ಸಿಕ್ಕ ಅವಕಾಶವನ್ನು ಬಳಸಿಕೊಂಡ ಎಂಬಪ್ಪೆ, ಇರಾಕ್‌ನ ಗೋಲ್‌ಕೀಪರ್ ಅಹಮದ್ ಬಾಸಿಲ್ ಅವರನ್ನು ವಂಚಿಸಿ ಎಡಗಾಲಿನಿಂದ ಅದ್ಭುತ ಗೋಲು ಸಿಡಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಆದರೆ ಮೊದಲಾರ್ಧ ಮುಗಿಯುತ್ತಿದ್ದಂತೆ ಕ್ರೀಡಾಂಗಣದಲ್ಲಿ ಭಾರಿ ಗಾಳಿ-ಮಳೆ ಹಾಗೂ ಸಿಡಿಲು ಆರಂಭವಾಯಿತು. ಇದರಿಂದಾಗಿ ಪಂದ್ಯವನ್ನು ಬರೋಬ್ಬರಿ ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಬೇಕಾಯಿತು. ಮಳೆಯ ತೀವ್ರತೆ ಹೆಚ್ಚಾಗಿದ್ದರಿಂದ ಕ್ರೀಡಾಂಗಣದಲ್ಲಿದ್ದ ಸಹಸ್ರಾರು ಅಭಿಮಾನಿಗಳಿಗೆ ಸುರಕ್ಷಿತವಾಗಿ ಮೇಲ್ಛಾವಣಿ ಇರುವ ಜಾಗಗಳಲ್ಲಿ ಆಶ್ರಯ ಪಡೆಯುವಂತೆ ಮೈಕ್ ಮೂಲಕ ಸೂಚನೆ ನೀಡಲಾಯಿತು.

ದ್ವಿತೀಯಾರ್ಧದಲ್ಲಿ ಎಂಬಪ್ಪೆ, ಡೆಂಬೆಲೆ ಅಬ್ಬರ!

ದೀರ್ಘ ವಿರಾಮದ ಬಳಿಕ ಮಳೆ ನಿಂತು ಪಂದ್ಯ ಆರಂಭವಾದಾಗ ಫ್ರಾನ್ಸ್ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪಂದ್ಯದ 54ನೇ ನಿಮಿಷದಲ್ಲಿ ಇರಾಕ್ ಡಿಫೆಂಡರ್ ಜೈದ್ ತಹಸೀನ್ ತಮ್ಮದೇ ಕೀಪರ್‌ಗೆ ಬ್ಯಾಕ್ ಪಾಸ್ ನೀಡುವಲ್ಲಿ ತಪ್ಪು ಮಾಡಿದರು. ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದ ಎಂಬಪ್ಪೆ ತಕ್ಷಣವೇ ಚೆಂಡನ್ನು ಸೀದಾ ಗೋಲು ಪೆಟ್ಟಿಗೆಗೆ ತಳ್ಳುವ ಮೂಲಕ ಪಂದ್ಯದಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದರು. ಇದಾದ ಬಳಿಕ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ಉಸ್ಮಾನೆ ಡೆಂಬೆಲೆ ಪಂದ್ಯದ ಕೊನೆಯ ಅವಧಿಯಲ್ಲಿ ಫ್ರಾನ್ಸ್ ಪರ ಮೂರನೇ ಗೋಲು ಬಾರಿಸಿ ಇರಾಕ್ ತಂಡದ ಸೋಲನ್ನು ಖಚಿತಪಡಿಸಿದರು.

ವಿಶ್ವಕಪ್ ಇತಿಹಾಸದಲ್ಲಿ ಹೊಸ ದಾಖಲೆ

ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿದ ವಿಶ್ವದ 4ನೇ ಆಟಗಾರ ಎಂಬ ಹೆಗ್ಗಳಿಕೆಗೆ ಎಂಬಪ್ಪೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಹಂಗೇರಿಯ ಸ್ಯಾಂಡರ್ ಕೊಸಿಸ್, 1930ರಲ್ಲಿ ಅರ್ಜೆಂಟೀನಾದ ಗಿಲ್ಲೆರ್ಮೊ ಸ್ಟೇಬೈಲ್ ಮತ್ತು ಇತ್ತೀಚೆಗೆ ಲಿಯೋನೆಲ್ ಮೆಸ್ಸಿ ಈ ಸಾಧನೆ ಮಾಡಿದ್ದರು. ಇದೇ ಜೂನ್ 22ರ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರಿಯಾ ವಿರುದ್ಧ ಮೆಸ್ಸಿ ಎರಡು ಗೋಲು ಗಳಿಸಿ ವಿಶ್ವಕಪ್‌ನಲ್ಲಿ ಒಟ್ಟು 18 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಗ್ರೂಪ್ ‘ಐ’ನಲ್ಲಿ ಅಗ್ರಸ್ಥಾನದಲ್ಲಿ ಫ್ರಾನ್ಸ್!

ಸತತ ಎರಡನೇ ಗೆಲುವು ದಾಖಲಿಸಿರುವ ಫ್ರಾನ್ಸ್ ತಂಡವು ಈಗ ಒಟ್ಟು 6 ಅಂಕಗಳೊಂದಿಗೆ ಗ್ರೂಪ್ 'ಐ'ನಲ್ಲಿ ಮೊದಲ ಸ್ಥಾನದಲ್ಲಿದೆ. ತನ್ನ ಮೊದಲ ಪಂದ್ಯದಲ್ಲಿ ನಾರ್ವೆ ವಿರುದ್ಧ 4-1 ಅಂತರದಲ್ಲಿ ಸೋತಿದ್ದ ಇರಾಕ್, ಈಗ ಫ್ರಾನ್ಸ್ ವಿರುದ್ಧವೂ ಸೋತು ಟೂರ್ನಿಯಿಂದ ಹೊರಬೀಳುವ ಹಂತ ತಲುಪಿದೆ. ಫ್ರಾನ್ಸ್ ತಂಡವು ತನ್ನ ಮುಂದಿನ ಹಾಗೂ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ನಾರ್ವೆ ತಂಡವನ್ನು ಎದುರಿಸಲಿದ್ದು, ಗ್ರೂಪ್‌ನಲ್ಲಿ ನಂ.1 ಸ್ಥಾನಕ್ಕಾಗಿ ಉಭಯ ತಂಡಗಳ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ನಾರ್ವೆ ಕೂಡ ಸೆನೆಗಲ್ ವಿರುದ್ಧ 3-2 ಗೋಲುಗಳಿಂದ ಗೆದ್ದು ನಾಕೌಟ್ ಹಂತ ತಲುಪಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net