‘ಘರ್‌ ವಾಪಸಿ’ಗೆ ಹಾರ್ದಿಕ್‌ ಪಾಂಡ್ಯ ಸ್ಕೆಚ್? ಗುಜರಾತ್‌ ಟೈಟನ್ಸ್‌ ಸೇರಲು ಮುಂದಾದ ಮಾಜಿ ನಾಯಕ? Hardik Pandya

ಗುಜರಾತ್​ ಟೈಟಾನ್ಸ್​ ಸೇರಲು ಬಯಸಿರುವ ಹಾರ್ದಿಕ್​ ಪಾಂಡ್ಯ
ಗುಜರಾತ್​ ಟೈಟಾನ್ಸ್​ ಸೇರಲು ಬಯಸಿರುವ ಹಾರ್ದಿಕ್​ ಪಾಂಡ್ಯ
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾದ ಹಾರ್ದಿಕ್​ ಪಾಂಡ್ಯ
  • ಗುಜರಾತ್​ ಟೈಟಾನ್ಸ್​ ಸೇರಲು ಬಯಸಿರುವ ಮಾಜಿ ನಾಯಕ
  • ಹಾರ್ದಿಕ್​ ತಂಡಕ್ಕೆ ಮರಳಿದರೆ ಸಂತೋಷ: ಶುಭಮನ್​ ಗಿಲ್​
ಮುಂಬೈ: ಭಾರತದಲ್ಲಿ ಕ್ರಿಕೆಟ್​​ ಅನ್ನು ಕೇವಲ ಒಂದು ಕ್ರೀಡೆಯನ್ನಾಗಲ್ಲ, ಬದಲಿಗೆ ಒಂದು ಎಮೊಷನ್​ ರೀತಿಯಲ್ಲಿ ನೋಡಲಾಗುತ್ತದೆ. ಕ್ರಿಕೆಟ್​ ಆಟಗಾರರನ್ನು ತಮ್ಮ ಮನೆ ಮಗ, ಆರಾಧ್ಯ ದೈವವೆಂಬಂತೆ ಬಿಂಬಿಸಲಾಗುತ್ತದೆ. ಅದರಲ್ಲೂ ಈ ಐಪಿಎಲ್​ ಎಂದರೆ ಭಾರತದಲ್ಲಿ ನಡೆಯುವ ಕ್ರಿಕೆಟ್​ ಉತ್ಸವವೆಂದೇ ಬಣ್ಣಿಸಲಾಗುತ್ತದೆ.
2027 ರಲ್ಲಿ ನಡೆಯಲಿರುವ 20 ನೇ ಆವೃತ್ತಿಯ ಐಪಿಎಲ್​ ಪ್ರಾರಂಭಕ್ಕೆ ಇನ್ನೂ ಬಹಳ ಸಮಯವಿದ್ದರೂ ಕೂಡ ಈಗಲೇ ಆಟಗಾರರ ಅದಲಿ-ಬದಲಿ ಬಗ್ಗೆ ಸುದ್ದಿ ಜೋರಾಗಿದೆ. ಅದರಲ್ಲೂ 2026 ರ ಐಪಿಎಲ್​​ ಮುಗಿದ ದಿನದಿಂದಲೇ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ (Hardik Pandya) ಅವರ ಚರ್ಚೆ ಸ್ವಲ್ಪ ಮಟ್ಟಿಗೆ ಹೆಚ್ಚೆ ಸೌಂಡ್​ ಮಾಡುತ್ತಿದೆ.

ಗುಜರಾತ್​​ ಮರಳಲಿದ್ದಾರಾ ಹಾರ್ದಿಕ್​?

2026 ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​​ ತಂಡದ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್​, ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ವಿಫಲವಾಗಿದ್ದರು. ಇದು ತಂಡದ ಆಟಗಾರರ ಜೊತೆಗೆ ಅಭಿಮಾನಿಗಳಿಗೆ ಕೂಡ ಬೇಸರ ತರಿಸಿತ್ತು. ಹೀಗಾಗಿ 2027 ರಲ್ಲಿ ಪಾಂಡ್ಯ ಮುಂಬೈ ತೊರೆಯಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಈಗ ಈ ವದಂತಿ ಸಾಲಿಗೆ ಇನ್ನೊಂದು ತಂಡ ಸೇರ್ಪಡೆಯಗಿದ್ದು, ಈ ಹಿಂದೆ ಯಾವ ತಂಡಕ್ಕೆ ಚೊಚ್ಚಲ ಐಪಿಎಲ್​ ಟ್ರೋಫಿ ತಂದುಕೊಟ್ಟಿದ್ದನೋ ಅದೇ ತಂಡಕ್ಕೆ ಹಾರ್ದಿಕ್​ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. 2022 ರಲ್ಲಿ ಗುಜರಾತ್​ ಟೈಟಾನ್ಸ್​ ತಂಡ ಸೇರ್ಪಡೆಯಾದಾಗ ಹಾರ್ದಿಕ್​ ಪಾಂಡ್ಯ ಈ ತಂಡದ ನಾಯಕತ್ವ ನಿರ್ವಹಿಸಿ ಮೊದಲ ಸೀಸನ್​ನಲ್ಲಿಯೇ ಕಪ್​ ಎತ್ತಿದ್ದರು.

ಈಗ, ಮುಂಬೈ ತಂಡವನ್ನು ಬಿಟ್ಟು ಬೇರೆಡೆ ಹೋಗಲು ಮುಂದಾದರೆ ಗುಜರಾತ್​ ಟೈಟನ್ಸ್​​ ಪಾಂಡ್ಯನ ಮೊದಲ ಆದ್ಯತೆ ಆಗಿರಲಿದೆ ಎಂದು ಹೇಳಲಾಗುತ್ತಿದೆ.


ಗಿಲ್​ ಹೇಳಿಕೆ ವೈರಲ್​!

ಸದ್ಯ ಟೀಂ ಇಂಡಿಯಾದ ಏಕದಿನ ತಂಡದ ನಾಯಕ ಹಾಗೂ ಹಾಲಿ ಗುಜರಾತ್ ಟೈಟಾನ್ಸ್​​ ತಂಡದ ನಾಯಕನಾಗಿರುವ ಶುಭಮನ್​ ಗಿಲ್​ ಕೂಡ, ಹಾರ್ದಿಕ್​ ನಮ್ಮ ತಂಡವನ್ನು ಸೇರಿದ್ದರೆ ಚೆನ್ನಾಗಿರುತ್ತದೆ. ಅವರು ತಮ್ಮ ಹಳೆಯ ತಂಡಕ್ಕೆ ಮರಳಿದರೆ ಯಾರಿಗೂ ಏನು ತೊಂದರೆಯಿಲ್ಲ ಎಂದು ಹೇಳಿದ್ದಾರೆಂದು ಗುಪ್ತ ಮಾಹಿತಿ ಲಭ್ಯವಾಗಿದೆ.

ಹಾರ್ದಿಕ್​ ಪಡೆಯಲು ಹರಸಾಹಸ!

ಹಾರ್ದಿಕ್​ ತಂಡದ ನಾಯಕತ್ವ ವಹಿಸಿಕೊಂಡ ವರ್ಷದಿಂದ ಮುಂಬೈ ತಂಡದ ಪ್ರದರ್ಶನ ಕಳಪೆಯಾಗುತ್ತಿರುವುದು ಇದಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಆದ್ದರಿಂದ 2027 ರ ಐಪಿಎಲ್​​ನಲ್ಲಿ ಹಾರ್ದಿಕ್​ ಪಾಂಡ್ಯ ಬೇರೆ ತಂಡವನ್ನು ಸೇರಲಿದ್ದಾರೆಂದು ಹೇಳಲಾಗುತ್ತಿದೆ.
ಮಾಹಿತಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್​​, ಲಕ್ನೋ ಸೂಪರ್​ ಜೈಂಟ್ಸ್​​, ರಾಜಸ್ಥಾನ್​ ರಾಯಲ್ಸ್​, ಚೆನ್ನೈ ಸೂಪರ್​ ಕಿಂಗ್ಸ್​​ ಹಾಗೂ ಕೊಲ್ಕತ್ತಾ ನೈಟ್​​ ರೈಡರ್ಸ್​​ ತಂಡಗಳು ಹಾರ್ದಿಕ್​ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸುತ್ತಿವೆ ಎಂದು ತಿಳಿದು ಬಂದಿದೆ.

ಯಾರ್ಯಾರ ಆಫರ್​​ ಏನಿದೆ?

ಮಾಹಿತಿ ಪ್ರಕಾರ, ಹಾರ್ದಿಕ್​ ಪಾಂಡ್ಯನನ್ನು ಹರಾಜಿನಲ್ಲಿ ಖರೀದಿಸಲು ಮುಂದಾದರೆ ಭಾರಿ ಮೊತ್ತ ಖರ್ಚಾಗುವ ಕಾರಣ ತಮ್ಮಲ್ಲಿರುವ ಒಬ್ಬ ಆಟಗಾರನನ್ನು ಮುಂಬೈ ಇಂಡಿಯನ್ಸ್​​ ತಂಡಕ್ಕೆ ಕೊಟ್ಟು, ಅಲ್ಲಿಂದ ಹಾರ್ದಿಕ್​ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೆಲ ತಂಡಗಳು ಮುಂದಾಗಿವೆ ಎಂದು ಹೇಳಲಾಗುತ್ತಿದೆ.

ಮೊದಲಿಗೆ ಡೆಲ್ಲಿ ಕ್ಯಾಪಿಟಲ್ಸ್​​ ತಂಡವು ತಮ್ಮ ತಂಡದಲ್ಲಿರುವ ಆಲ್​-ರೌಂಡರ್​ ಆಟಗಾರ ಅಕ್ಷರ್​ ಪಟೇಲ್​ನನ್ನು ಎಂಐ ಗೆ ನೀಡಿ ಹಾರ್ದಿಕ್​ನನ್ನು ಪಡೆಯಲು ಮುಂದಾದರೆ, ಲಕ್ನೋ ತಂಡ ನಿಕೊಲಸ್​ ಪೂರನ್​ ಬದಲಿಗೆ ಹಾರ್ದಿಕ್​ನನ್ನು ಪಡೆಯಲು ಯೋಜನೆ ರೂಪಿಸುತ್ತಿದ್ದರೆ, ಕೆಕೆಆರ್ ಕೆಮರಾನ್​ ಗ್ರಿನ್​ನನ್ನು ಮುಂಬೈಗೆ ನೀಡಿ ಪಾಂಡ್ಯನನ್ನು ಪಡೆಯಲು ಪ್ಲಾನ್​ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಸಿಎಸ್​ಕೆ ಮತ್ತು ರಾಜಸ್ಥಾನ್​ ತಂಡಗಳು ಕೂಡ ಇದೇ ತಂತ್ರಕ್ಕೆ ಮುಂದಾಗಿದ್ದು, ಚೆನ್ನೈ ಶಿವಂ ದುಬೆ, ಆಯುಶ್​ ಮಾತ್ರೆ ಹಾಗೂ ಬ್ರೆವಿಸ್​​ ಈ ಮೂವರಲ್ಲಿ ಒಬ್ಬರನ್ನು ಮುಂಬೈಗೆ ನೀಡಲು ಮುಂದಾಗಿದ್ದರೆ, ರಾಜಸ್ಥಾನ್​ ತನ್ನ ತಂಡದ ಓಪನರ್​ ಯಶಸ್ವಿ ಜೈಸ್ವಾಲ್​​ನನ್ನು ಮುಂಬೈ ತಂಡಕ್ಕೆ ನೀಡಿ ಹಾರ್ದಿಕ್​ನನ್ನು ತನ್ನದಾಗಿಸಿಕೊಳ್ಳಲು ಮ್ಯಾನೆಜ್​ಮೆಂಟ್​ ಜೊತೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net