ಕ್ರಿಕೆಟರ್ ಅಂತ ಕೈಮುಗಿದ್ರೂ ಬಿಡಲಿಲ್ಲ..ರಸ್ತೆಯಲ್ಲೇ ಎಳೆದಾಡಿ ಮನಬಂದಂತೆ ಹೊಡೆದರು; ಪೊಲೀಸರ ಅಟ್ಟಹಾಸಕ್ಕೆ ಕಣ್ಣೀರಿಟ್ಟ ಸ್ಪಿನ್ನರ್ ನಯೀಮ್ ಹಸನ್! Cricketer Nayeem Hasan

ಬಾಂಗ್ಲಾದೇಶ ಕ್ರಿಕೆಟರ್ ನಯೀಮ್ ಹಸನ್ ಮೇಲೆ ಪೊಲೀಸರಿಂದ ಹಲ್ಲೆ!
ಬಾಂಗ್ಲಾದೇಶ ಕ್ರಿಕೆಟರ್ ನಯೀಮ್ ಹಸನ್ ಮೇಲೆ ಪೊಲೀಸರಿಂದ ಹಲ್ಲೆ!
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶ ಕ್ರಿಕೆಟರ್ ನಯೀಮ್ ಹಸನ್ ಮೇಲೆ ಪೊಲೀಸರಿಂದ ಹಲ್ಲೆ!
  • ಮ್ಯಾಚ್ ಮುಗಿಸಿ ಬರುವಾಗ ರಸ್ತೆಯಲ್ಲೇ ಎಳೆದಾಡಿ ಹೊಡೆದ ಖಾಕಿ ಪಡೆ
  • ಕಣ್ಣೀರಿಟ್ಟ ಆಟಗಾರನ ನೆರವಿಗೆ ಧಾವಿಸಿದ BCB ಅಧ್ಯಕ್ಷ ತಮೀಮ್ ಇಕ್ಬಾಲ್
ಬಾಂಗ್ಲಾದೇಶ: ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ತಂಡದ ಬೌಲರ್ ಒಬ್ಬನ ಮೇಲೆ ಪೊಲೀಸರು ಮೃಗೀಯವಾಗಿ ಹಲ್ಲೆ ನಡೆಸಿರುವ ಘಟನೆ ಬಾಂಗ್ಲಾದೇಶದಲ್ಲಿ ವರದಿಯಾಗಿದೆ.

ಮ್ಯಾಚ್ ಮುಗಿಸಿ ಮನೆಗೆ ಮರಳುವಾಗ ಬಿದ್ದ ಏಟು!

ಬಾಂಗ್ಲಾದೇಶ ತಂಡದ ಯುವ ಆಫ್-ಸ್ಪಿನ್ನರ್ ನಯೀಮ್ ಹಸನ್ (Cricketer Nayeem Hasan), ಶುಕ್ರವಾರ (ಜೂ.12) ಸಂಜೆ ದೇಶೀಯ ಪಂದ್ಯವೊಂದರಲ್ಲಿ ಆಡಿದ್ದ ನಯೀಮ್ ಹಸನ್, ಪಂದ್ಯ ಮುಗಿಸಿಕೊಂಡು ಆಟೋರಿಕ್ಷಾದಲ್ಲಿ ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ ರಸ್ತೆಬದಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸರು ಆಟೋವನ್ನು ಹಠಾತ್ತನೆ ತಡೆದಿದ್ದಾರೆ.
ಆರಂಭದಿಂದಲೇ ಪೊಲೀಸರು ಉದ್ಧಟತನ ಮತ್ತು ಆಕ್ರಮಣಕಾರಿ ವರ್ತನೆ ತೋರಿದ್ದಾರೆ. ಈ ಬಗ್ಗೆ ಸ್ವತಃ ಕಣ್ಣೀರಿಡುತ್ತಾ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿರುವ ನಯೀಮ್ ಹಸನ್, ನಾನು ದೇಶವನ್ನು ಪ್ರತಿನಿಧಿಸುವ ರಾಷ್ಟ್ರೀಯ ತಂಡದ ಕ್ರಿಕೆಟರ್, ನನ್ನ ಹೆಸರು ನಯೀಮ್ ಹಸನ್ ಎಂದು ಪೊಲೀಸರಿಗೆ ಪದೇ ಪದೇ ಕೈಮುಗಿದು ಹೇಳಿದೆ.
ಆದರೆ ಅವರು ನನ್ನ ಯಾವುದೇ ಮಾತನ್ನು ಕೇಳಲು ನಿರಾಕರಿಸಿದರು. ಅಷ್ಟೇ ಅಲ್ಲದೇ, ನನ್ನನ್ನು ರಸ್ತೆಯಲ್ಲೇ ಎಳೆದಾಡಿ ದೊಣ್ಣೆ ಮತ್ತು ಪ್ಲಾಸ್ಟಿಕ್ ಪೈಪ್‌ಗಳಿಂದ ಮನಬಂದಂತೆ ಹೊಡೆದರು ಎಂದು ನೆರೆದಿದ್ದ ವರದಿಗಾರರ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ರಂಗಪ್ರವೇಶ ಮಾಡಿದ ಅಧ್ಯಕ್ಷ ತಮೀಮ್ ಇಕ್ಬಾಲ್!

ಶನಿವಾರ (ಜೂ.13) ಬೆಳಿಗ್ಗೆ ನಯೀಮ್ ಹಸನ್ ಅವರನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದ್ದು, ಸದ್ಯ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ತಮೀಮ್ ಇಕ್ಬಾಲ್ ತಕ್ಷಣವೇ ರಂಗಪ್ರವೇಶ ಮಾಡಿದ್ದಾರೆ.
ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ತಮೀಮ್ ಇಕ್ಬಾಲ್, ನಿನ್ನೆ ರಾತ್ರಿ ನಮ್ಮ ರಾಷ್ಟ್ರೀಯ ಆಟಗಾರ ನಯೀಮ್ ಹಸನ್‌ಗೆ ಜೊತೆ ನಡೆದ ಘಟನೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ರಾತ್ರಿ ನಯೀಮ್ ನನಗೆ ಕರೆ ಮಾಡಿ ಕಣ್ಣೀರಿಟ್ಟ ತಕ್ಷಣ, ನಾನು ಮತ್ತು ಮಂಡಳಿಯ ಇತರ ಅಧಿಕಾರಿಗಳು ಅಲರ್ಟ್ ಆಗಿ ಆತನ ಸಹಾಯಕ್ಕೆ ಧಾವಿಸಿದೆವು. ನಯೀಮ್ ಮತ್ತು ಆತನ ಕುಟುಂಬಕ್ಕೆ ಕ್ರಿಕೆಟ್ ಮಂಡಳಿಯಿಂದ ಸಂಪೂರ್ಣ ಕಾನೂನು ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಲೆ ತಗ್ಗಿಸಿದ ಪೊಲೀಸ್ ಇಲಾಖೆ: ತನಿಖೆಗೆ ಆದೇಶ!

ಕ್ರಿಕೆಟರ್ ಮೇಲೆ ಪೊಲೀಸರು ಪೈಪ್‌ಗಳಿಂದ ಹಲ್ಲೆ ನಡೆಸಿದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದಂತೆ ಇಡೀ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಖಾಕಿ ಪಡೆಯ ವಿರುದ್ಧ ತಿರುಗಿಬಿದ್ದಿದ್ದಾರೆ.
ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಚಟ್ಟೋಗ್ರಾಮ್ ಮೆಟ್ರೋಪಾಲಿಟನ್ ಪೊಲೀಸ್ ಉಪ ಆಯುಕ್ತ ಅಮಿರುಲ್ ಇಸ್ಲಾಂ, ಮೇಲ್ನೋಟಕ್ಕೆ ಕಾರ್ಯಾಚರಣೆಯ ಸಮಯದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಸರಿಯಾದ ನಿಯಮಗಳನ್ನು ಪಾಲಿಸಿಲ್ಲ ಎನ್ನುವುದು ಸ್ಪಷ್ಟವಾಗಿದೆ. ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಇಲಾಖಾ ತನಿಖೆ ಆರಂಭಿಸಲಾಗಿದ್ದು, ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net