ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ​: ತೀರ್ಪು ಬಂದರೂ ಇಂದಿಗೂ ಕಾಡುತ್ತಿವೆ ಈ ಪ್ರಶ್ನೆಗಳು! Actress Attack Case

ಮಲಯಾಳಂ ನಟ ದಿಲೀಪ್​ ಮತ್ತು ಪಲ್ಸರ್​ ಸುನಿ
ಮಲಯಾಳಂ ನಟ ದಿಲೀಪ್​ ಮತ್ತು ಪಲ್ಸರ್​ ಸುನಿ
Published on

ಪ್ರಮುಖ ಮುಖ್ಯಾಂಶಗಳು

  • ಅಂತಿಮ ಘಟ್ಟಕ್ಕೆ ತಲುಪಿದ ಖ್ಯಾತ ನಟಿಯ ಕಿಡ್ನಾಪ್, ಲೈಂಗಿಕ ದೌರ್ಜನ್ಯ ಪ್ರಕರಣ
  • ಈ ಪ್ರಕರಣದಿಂದ ನಟ ದಿಲೀಪ್​ರನ್ನು ಕೋರ್ಟ್​ ಖುಲಾಸೆಗೊಳಿಸಿರುವುದು ಅಚ್ಚರಿ ಮೂಡಿಸಿದೆ
  • ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ
Actress Attack Case : ಸುಮಾರು 8 ವರ್ಷಗಳ ಹಿಂದೆ ಖ್ಯಾತ ನಟಿಯನ್ನು ಕಿಡ್ನಾಪ್​ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಅಂತಿಮ ಘಟ್ಟಕ್ಕೆ ಬಂದಿದೆ. ಈ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಕೂಡ ಕೇಳಿಬಂದಿತು. ಹೀಗಾಗಿ ಅವರನ್ನು ತಪ್ಪಿತಸ್ಥರೆಂದು ಕೋರ್ಟ್​ ತೀರ್ಪು ನೀಡುತ್ತದೆಯೇ ಎಂದು ಕಾಯುತ್ತಿದ್ದರು. ಆದರೆ, ಈ ಪ್ರಕರಣದಿಂದ ದಿಲೀಪ್​ ಅವರನ್ನು ಕೋರ್ಟ್​ ಖುಲಾಸೆಗೊಳಿಸಿರುವುದು ಅಚ್ಚರಿ ಮೂಡಿಸಿದೆ. ಆದರೆ, ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ. ಅತ್ಯಾಚಾರ ಸೇರಿದಂತೆ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ. ಆದ್ದರಿಂದ, ಅವರಿಗೆ ಗರಿಷ್ಠ ಶಿಕ್ಷೆಯಾಗುವ ಸಾಧ್ಯತೆಯಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ಡಿಸೆಂಬರ್ 12ರ ಶುಕ್ರವಾರ ತೀರ್ಪು ಪ್ರಕಟಿಸಲಿದ್ದಾರೆ. ಈ ತೀರ್ಪಿನ ನಂತರವೂ, ಪ್ರಾಸಿಕ್ಯೂಷನ್ ಕೇಳಿದ ಒಂದು ಪ್ರಶ್ನೆ ಮಾತ್ರ ಇನ್ನೂ ಜೀವಂತವಾಗಿಯೇ ಉಳಿದಿದೆ. ಅದೇನೆಂದರೆ, ಈ ಪ್ರಕರಣದ ಮೊದಲ ಆರೋಪಿ ಪಲ್ಸರ್ ಸುನಿ ಇದನೆಲ್ಲ ಯಾರಿಗಾಗಿ ಮಾಡಿದನು? ಎಂಬುದು.
ಎಲ್ಲ ಆರು ಆರೋಪಿಗಳಿಗೂ ಕ್ರಿಮಿನಲ್​ ಬ್ಯಾಗ್ರೌಂಡ್​ ಇದೆ. ಆದರೆ, ಅವರು ನಟಿಯ ಮೇಲೆ ಏಕೆ ದಾಳಿ ಮಾಡಿದರು? ಅವರಿಗೂ ನಟಿಗೂ ಇರುವ ಸಂಬಂಧ ಏನು? ಆ ನಟಿಯನ್ನೇ ಏಕೆ ಗುರಿಯಾಗಿಸಿಕೊಂಡರು? ಇದನೆಲ್ಲ ಅವರು ಯಾರಿಗಾಗಿ ಮಾಡಿದರು?... ತೀರ್ಪಿನ ನಂತರವೂ ಈ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಕ್ಕಿಲ್ಲ ಎಂಬುದು ಸಾರ್ವಜನಿಕರು ಮಾತಾಗಿದೆ. 
ಅಂದಹಾಗೆ, ಇಂದು ನ್ಯಾಯಾಲಯ ಪ್ರಕಟಿಸಿರುವ ತೀರ್ಪು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ತೀರ್ಪು ಹೊರಬಿದ್ದ ಬೆನ್ನಲ್ಲೇ ನಟ ದಿಲೀಪ್​ ಅವರು ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ಅವರ ಅಭಿಮಾನಿಗಳು ಹರ್ಷೋದ್ಗಾರಗಳೊಂದಿಗೆ ಅವರನ್ನು ಸ್ವಾಗತಿಸಿದರು. ನ್ಯಾಯಾಲಯದ ಮುಂದೆ ಲಡ್ಡುಗಳನ್ನು ಸಹ ವಿತರಿಸಿದರು.
ಈ ಪ್ರಕರಣದಲ್ಲಿ ದಿಲೀಪ್ ಸೇರಿದಂತೆ ಹತ್ತು ಆರೋಪಿಗಳಿದ್ದರು. ಪಲ್ಸರ್ ಸುನಿ ಮೊದಲ ಆರೋಪಿ. ಮಾರ್ಟಿನ್ ಆಂಟೋನಿ, ಬಿ ಮಣಿಕಂಠನ್, ವಿಪಿ ವಿಜೀಶ್, ಎಚ್ ಸಲೀಂ (ವಡಿವಾಲ್ ಸಲೀಂ), ಪ್ರದೀಪ್ ಮತ್ತು ಚಾರ್ಲಿ ಥಾಮಸ್ ಕ್ರಮವಾಗಿ ಎರಡರಿಂದ ಏಳನೇ ಆರೋಪಿಗಳು. ನಟ ದಿಲೀಪ್ ಎಂಟನೇ ಆರೋಪಿ ಮತ್ತು ಸನಿಲ್ ಕುಮಾರ್ (ಮೇಷ್ಠಿರಿ ಸನಿಲ್) ಒಂಬತ್ತನೇ ಆರೋಪಿಯಾಗಿದ್ದರು.
ಏಳನೇ ಆರೋಪಿಯಾದ ಚಾರ್ಲಿ, ದಿಲೀಪ್ ಮತ್ತು ಆತನ ಸ್ನೇಹಿತ ಶರತ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ದಿಲೀಪ್ ಪಿತೂರಿ ನಡೆಸಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಉಳಿದ ಆರು ಆರೋಪಿಗಳ ಮೇಲೆ  ಅತ್ಯಾಚಾರ, ಪಿತೂರಿ, ಸ್ತ್ರೀ ಗೌರವಕ್ಕೆ ಅವಮಾನ, ಅಕ್ರಮ ಬಂಧನ, ಬಲಪ್ರಯೋಗ, ಸಾಕ್ಷ್ಯ ನಾಶ ಮತ್ತು ಅಶ್ಲೀಲ ಚಿತ್ರಗಳನ್ನು ಸೆರೆಹಿಡಿಯುವುದು ಮತ್ತು ಅದನ್ನು ವಿತರಿಸಿದ ಆರೋಪಗಳನ್ನು ಹೊರಿಸಲಾಗಿದೆ.
ಅಂದಹಾಗೆ, ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಫೆಬ್ರವರಿ 17, 2017 ರಂದು ನಡೆಯಿತು. ಸಂತ್ರಸ್ತ ನಟಿ ತ್ರಿಸ್ಸೂರ್​ನಿಂದ ಎರ್ನಾಕುಲಂಗೆ ಸಿನಿಮಾ ಚಿತ್ರೀಕರಣಕ್ಕಾಗಿ ಹೋಗುತ್ತಿದ್ದರು. ಈ ವೇಳೆ ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿ, ಆಕ್ಷೇಪಾರ್ಹ ವಿಡಿಯೋವನ್ನು ಸಹ ಚಿತ್ರೀಕರಿಸಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಯಿತು.
ಪಿತೂರಿ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಅವರನ್ನು ಬಂಧಿಸಲಾಯಿತು. ಸಂತ್ರಸ್ತೆಯ ಕೋರಿಕೆಯ ಮೇರೆಗೆ ಹೈಕೋರ್ಟ್ ಮಹಿಳಾ ನ್ಯಾಯಾಧೀಶರನ್ನು ನೇಮಿಸಿತು. ವಿಚಾರಣೆಯನ್ನು ರಹಸ್ಯವಾಗಿ ನಡೆಸಲಾಯಿತು. ನಂತರ, ನಿರ್ದೇಶಕ ಬಾಲಚಂದ್ರ ಕುಮಾರ್ ಅವರ ಹೇಳಿಕೆಯ ಆಧಾರದ ಮೇಲೆ ಅಪರಾಧ ವಿಭಾಗವು ಹೆಚ್ಚಿನ ತನಿಖೆ ನಡೆಸಿ ಎರಡನೇ ಆರೋಪಪಟ್ಟಿಯನ್ನು ಸಲ್ಲಿಸಿತು.
ಅಪರಾಧ ವಿಭಾಗದ ಡಿವೈಎಸ್‌ಪಿ ಬೈಜು ಕೆ. ಪೌಲೋಸ್ ತನಿಖಾಧಿಕಾರಿಯಾಗಿದ್ದರು. ಮೊದಲ ಪಟ್ಟಿಯಲ್ಲಿರುವ ಕೆಲವು ಆರೋಪಿಗಳನ್ನು ಕೈಬಿಡಲಾಯಿತು ಮತ್ತು ಇತರರನ್ನು ಸಾಕ್ಷಿಗಳನ್ನಾಗಿ ಮಾಡಲಾಯಿತು. ಪ್ರಕರಣದಲ್ಲಿ 261 ಸಾಕ್ಷಿಗಳಿದ್ದರು. ಸಾಕ್ಷಿಗಳ ವಿಚಾರಣೆ ಮಾತ್ರ 438 ದಿನಗಳನ್ನು ತೆಗೆದುಕೊಂಡಿತು. ಪ್ರಾಸಿಕ್ಯೂಷನ್ 833 ದಾಖಲೆಗಳನ್ನು ಹಾಜರುಪಡಿಸಿತು. ಇದರಲ್ಲಿ 142 ಪುರಾವೆಗಳಿದ್ದವು. ಅಂತಿಮವಾಗಿ ನ್ಯಾಯಾಲಯ ದಿಲೀಪ್​ ಅವರನ್ನು ಖುಲಾಸೆಗೊಳಿಸಿ, ಉಳಿದ ಆರು ಆರೋಪಿಗಳನ್ನು ತಪ್ಪಿತಸ್ಥರೆಂದು ಇಂದು ತೀರ್ಪು ಪ್ರಕಟಿಸಿದೆ. ಡಿಸೆಂಬರ್ 12ರ ಶುಕ್ರವಾರದಂದು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ಶಿಕ್ಷೆಯನ್ನು ಪ್ರಕಟಿಸಲಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net