ನಿಮ್ಮ ಮೌಲ್ಯಗಳೇ ನನ್ನ ಪರಂಪರೆ: ತಂದೆಯ ಅಗಲಿಕೆಗೆ ಸಿದ್ಧಾರ್ಥ್ ಮಲ್ಹೋತ್ರಾ ಕಂಬನಿ; ಹೃದಯಸ್ಪರ್ಶಿ ಪತ್ರ ವೈರಲ್.. Sidharth Malhotra

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ  (ಚಿತ್ರ Instagram)
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (ಚಿತ್ರ Instagram)
Published on
Sidharth Malhotra: ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ತಂದೆಯನ್ನು ಕಳೆದುಕೊಂಡ ನಂತರ ಶೋಕ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಅತ್ಯಂತ ಭಾವುಕರಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಅವರಿಗೆ ಸಂತಾಪ ಸೂಚಿಸಿದ್ದಾರೆ.

ತಂದೆಗೆ ಭಾವಪೂರ್ಣ ವಿದಾಯ

ನಟ ಮಂಗಳವಾರ ಸಂಜೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಂದೆಯ ನಿಧನದ ಸುದ್ದಿಯನ್ನು ದೃಢಪಡಿಸಿದರು. ಈ ವೇಳೆ ತಂದೆಯೊಂದಿಗೆ ಕಳೆದ ನೆನಪುಗಳನ್ನು ಮೆಲಕು ಹಾಕುವ ಸಲುವಾಗಿ, ಕೆಲವೊಂದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲನೆಯ ಚಿತ್ರದಲ್ಲಿ ಸಿದ್ಧಾರ್ಥ್ ಸುನಿಲ್‌ನ ತೋಳುಗಳಲ್ಲಿ ಕಾಣಿಸಿಕೊಂಡರೆ, ಎರಡನೇ ಚಿತ್ರದಲ್ಲಿ ಸಿದ್ಧಾರ್ಥ್ ತನ್ನ ಸಹೋದರ ಹರ್ಷದ್ ಜೊತೆ ಒಟ್ಟಿಗೆ ಪೋಸ್ ನೀಡುತ್ತಿರುವುದನ್ನು ನೋಡಬಹುದು.
ಫೋಟೋ ಶೀರ್ಷಿಕೆಯಲ್ಲಿ, ಅವರು ಅಪರೂಪದ ಪ್ರಾಮಾಣಿಕತೆ, ಸಮಗ್ರತೆ ಮತ್ತು ಸಂಸ್ಕೃತಿಯ ವ್ಯಕ್ತಿ. ತಮ್ಮ ಜೀವನದುದ್ದಕ್ಕೂ ಎಂದಿಗೂ ಬಾಗದ ಮೌಲ್ಯಗಳಿಗೆ ಬದ್ಧರಾಗಿ ಬದುಕಿದವರು. ಅವರ ಜೀವನದಲ್ಲಿ ಕಠಿಣತೆ ಇಲ್ಲದ ಶಿಸ್ತಿತ್ತು ಮತ್ತು ಅಹಂಕಾರವಿಲ್ಲದ ಶಕ್ತಿಯಿತ್ತು. ಜೀವನವು ಅವರನ್ನು ಅಳೆಯಲಾಗದಷ್ಟು ಪರೀಕ್ಷಿಸಿದಾಗಲೂ ಅವರು ಎಂದಿಗೂ ತಮ್ಮ ಸಕಾರಾತ್ಮಕತೆಯನ್ನು ಬಿಟ್ಟುಕೊಡಲಿಲ್ಲ.
ಮರ್ಚೆಂಟ್ ನೇವಿ ಕ್ಯಾಪ್ಟನ್ ಆಗಿ ವಿಶಾಲ ಸಮುದ್ರಗಳನ್ನು ಆಜ್ಞಾಪಿಸುವುದರಿಂದ ಹಿಡಿದು, ಅನಾರೋಗ್ಯವನ್ನು ಶಾಂತ ಧೈರ್ಯದಿಂದ ಎದುರಿಸುವವರೆಗೆ ಎಲ್ಲಿಯೂ ಅವರು ರಾಜಿ ಮಾಡಿಕೊಳ್ಳಲಿಲ್ಲ. ಪಾರ್ಶ್ವವಾಯು ಅವರನ್ನು ವೀಲ್​ಚೇರ್​ಗೆ ಸೀಮಿತಗೊಳಿಸಿದಾಗಲೂ ಅವರ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ ಎಂದು ಬರೆದಿದ್ದಾರೆ.

ನೀವು ಬಿಟ್ಟುಹೋಗುವ ಜಾಗ ಅಪಾರ

ಅಪ್ಪಾ, ನಿಮ್ಮ ಸಮಗ್ರತೆ ನನ್ನ ಪರಂಪರೆ. ನಿಮ್ಮ ಶಕ್ತಿ ನನಗೆ ಪ್ರತಿದಿನ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಚಿರ ನಿದ್ರೆಯಲ್ಲಿ ಜಾರಿದ್ದೀರಿ. ಆದರೆ, ನಿಮ್ಮ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಹಾಗೆಯೇ ನಿಮ್ಮ ಮೌಲ್ಯಗಳು ಮತ್ತು ನಿಮ್ಮ ಬೆಳಕನ್ನು ಹಿಡಿದು ನಾನು ಮುಂದಕ್ಕೆ ಸಾಗುತ್ತೇನೆ ಅಪ್ಪಾ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
ಸಿದ್ಧಾರ್ಥ್ ಕೊನೆಯ ಬಾರಿಗೆ ಪರಮ ಸುಂದರಿ ಚಿತ್ರದಲ್ಲಿ ಕಾಣಿಸಿಕೊಂಡರು. ಸಿದ್ಧಾರ್ಥ್ ಮತ್ತು ಕಿಯಾರಾ ಜುಲೈ 15, 2025 ರಂದು ಮುಂಬೈನ ರಿಲಯನ್ಸ್ ಆಸ್ಪತ್ರೆಯಲ್ಲಿ ತಮ್ಮ ಮೊದಲ ಮಗಳಾದ ಸರಾಯ ಮಲ್ಹೋತ್ರಾ ಅವರನ್ನು ಬರಮಾಡಿಕೊಂಡರು. ನವೆಂಬರ್ ನಂತರ ತಮ್ಮ ಮಗಳ ಹೆಸರನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ಹೆಣ್ಣು ಮಗುವನ್ನು "ನಮ್ಮ ರಾಜಕುಮಾರಿ" ಮತ್ತು "ನಮ್ಮ ದೈವಿಕ ಆಶೀರ್ವಾದ" ಎಂದು ಕರೆದಿದ್ದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net