ರಣವೀರ್​ ಸಿಂಗ್​ರಿಂದ ದೈವ ಪಾತ್ರದ ಅನುಕರಣೆ: ಕೊನೆಗೂ ಮೌನ ಮುರಿದ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ! Rishab Shetty

ಹಾಗೂ ನಿರ್ದೇಶಕ ರಿಷಬ್​ ಶೆಟ್ಟಿ ಹಾಗೂ ಬಾಲಿವುಡ್​ ನಟ ರಣವೀರ್​ ಸಿಂಗ್​
ಹಾಗೂ ನಿರ್ದೇಶಕ ರಿಷಬ್​ ಶೆಟ್ಟಿ ಹಾಗೂ ಬಾಲಿವುಡ್​ ನಟ ರಣವೀರ್​ ಸಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ಕಾಂತಾರ ಸಿನಿಮಾದ ದೈವ ಪಾತ್ರಗಳ ಅನುಕರಣೆ ವಿವಾದ
  • ಈ ಹಿಂದೆ ಬಾಲಿವುಡ್​ ನಟ ರಣವೀರ್​ ಸಿಂಗ್​ ಮಿಮಿಕ್ರಿ
  • ವಿವಾದದ ಕುರಿತು ಕೊನೆಗೂ ಮೌನ ಮುರಿದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ
ಚೆನ್ನೈ: ಬ್ಲಾಕ್​ಬಸ್ಟರ್​ ಕಾಂತಾರ ಸಿನಿಮಾದಲ್ಲಿ ಸೆರೆಹಿಡಿರುವ ತುಳು ನಾಡಿನ ಪವಿತ್ರ ಆಚರಣೆಗಳನ್ನು ಬಾಲಿವುಡ್​ ನಟ ರಣವೀರ್​ ಸಿಂಗ್​ ಸೇರಿದಂತೆ ಅನೇಕ ಮಂದಿ ಅನುಕರಣೆ ಮಾಡುತ್ತಿರುವ ವಿವಾದದ ಕುರಿತು ನಟ ಹಾಗೂ ನಿರ್ದೇಶಕ ರಿಷಬ್​ ಶೆಟ್ಟಿ ( Rishab Shetty ) ಕೊನೆಗೂ ಮೌನ ಮುರಿದಿದ್ದಾರೆ. ದೈವವನ್ನು ಎಲ್ಲರು ಅನುಕರಿಸುತ್ತಿರುವುದನ್ನು ನೋಡಿದಾಗ ನನಗೆ ತುಂಬಾ ಮುಜಗರವಾಗುತ್ತದೆ ಎಂದು ಡಿವೈನ್​ ಸ್ಟಾರ್​ ಹೇಳಿದ್ದಾರೆ.
ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಕಾಂತಾರ ಚಾಪ್ಟರ್ 1 ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಎಲ್ಲ ಭಾಷೆಗಳಲ್ಲಿ 800ಕ್ಕೂ ಅಧಿಕ ಕೋಟಿ ರೂ. ಗಳಿಸಿತು. ಆದರೆ, ಚಿತ್ರದಲ್ಲಿ ನಟ ರಿಷಬ್ ಮಾಡಿದ ದೈವದ ಪಾತ್ರವನ್ನು ಅನೇಕ ಮಂದಿ ಅನುಕರಣೆ ಮಾಡಿದರು. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ​ ಹರಿದಾಡಿತು. ಇದೊಂದು ವಿವಾದವೇ ಆಗಿ, ಅನೇಕ ಮಂದಿ ಕಾಂತಾರ ಚಿತ್ರತಂಡದ ಮೇಲೆ ಕಿಡಿಕಾರಿದರು.

ವಿವಾದಕ್ಕೆ ತುಪ್ಪ ಸುರಿದ ರಣವೀರ್​ ಸಿಂಗ್​

ಇದು ಸಾಲದು ಎಂಬಂತೆ ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ವೇಳೆ ವೇದಿಕೆಯ ಮೇಲೆ ಮಾತನಾಡುವಾಗ ಕಾಂತಾರ ಚಿತ್ರದ ಬಗ್ಗೆ ರಣವೀರ್ ಸಿಂಗ್ ಮಾಡಿದ ಕಾಮೆಂಟ್‌ಗಳು ಭಾರಿ ವಿವಾದದ ಸ್ವರೂಪ ಪಡೆದುಕೊಂಡಿತು. ಪಂಜುರ್ಲಿ ದೇವತೆ ಅಥವಾ ರಿಷಭ್​ ಮೈಮೇಲೆ ಬರುವ ಚಾಮುಂಡಿಯ ಪಾತ್ರವನ್ನು ಅನುಕರಣೆ ಮಾಡಿ ತೋರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅನುಕರಣೆ ಮಾಡಿದ್ದು ಅಲ್ಲದೆ, ರಣವೀರ್​ ಆಡಿದ ಮಾತುಗಳು ಕೂಡ ಕನ್ನಡಿಗರನ್ನು ಕೆರಳಿಸಿತು. ಕಾಂತಾರ ಸಿನಿಮಾದಲ್ಲಿ ರಿಷಬ್​​ ಮೈ ಮೇಲೆ ಬರುವ ಚಾಮುಂಡಿ ದೇವಿಯನ್ನು ರಣವೀರ್​ ಫೀಮೇಲ್​ ಘೋಸ್ಟ್​ ಎಂದು ಕರೆದರು. ಘೋಸ್ಟ್​ ಎಂದರೆ ದೆವ್ವ ಎಂದರ್ಥ. ಹೀಗಾಗಿ ರಣವೀರ್​ ಸಿಂಗ್​​ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದರು. ಚಾಮುಂಡಿ ತಾಯಿ ಕರ್ನಾಟಕದ ನಾಡದೇವತೆ. ನಿಮಗೆ ದೈವಕ್ಕೂ ದೆವ್ವಕ್ಕೂ ವ್ಯತ್ಯಾಸವೇ ಗೊತ್ತಿಲ್ವಾ ಎಂದು ರಣವೀರ್​ ವಿರುದ್ಧ ಆಕ್ರೋಶದ ಸುರಿಮಳೆಗೈದರು. ಕೊನೆಗೆ ಕನ್ನಡಿಗರ ಆಕ್ರೋಶಕ್ಕೆ ಮಣಿದ ರಣವೀರ್​ ಸಿಂಗ್​ ಅಂತಿಮವಾಗಿ ಕ್ಷಮೆ ಕೋರುವ ಮೂಲಕ ವಿವಾದಕ್ಕೆ ತೆರೆಎಳೆಯುವ ಪ್ರಯತ್ನ ಮಾಡಿದರು. ಇದೇ ಸಂದರ್ಭದಲ್ಲಿ ಅನೇಕ ಮಂದಿ ರಿಷಬ್​ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ತಮ್ಮ ಮುಂದೆಯೇ ಓರ್ವ ಖ್ಯಾತ ಸೆಲೆಬ್ರಿಟಿ ಅನುಕರಣೆ ಮಾಡುತ್ತಿರುವಾಗ ಅದನ್ನು ತಡೆಯದೇ ಸುಮ್ಮನೇ ನಗುತ್ತಾ ಕುಳಿತಿದ್ದು ಸರಿಯಲ್ಲ ಎಂದು ರಿಷಬ್ ವಿರುದ್ಧ ಕಿಡಿಕಾರಿದರು.
ಕೊನೆಗೂ ಮೌನ ಮುರಿದ ರಿಷಬ್​
ಇತ್ತೀಚೆಗೆ ಚೆನ್ನೈನಲ್ಲಿ ಬಿಹೈಂಡ್​ವುಡ್ಸ್​ ಮಾಧ್ಯಮದಿಂದ ನಡೆದ ಕಾರ್ಯಕ್ರಮದಲ್ಲಿ ರಿಷಬ್​ ಅವರು ಈ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೇರವಾಗಿ ರಣವೀರ್​ ಸಿಂಗ್​ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ಮಾತನಾಡಿದ್ದಾರೆ. ಎಲ್ಲ ಅನುಕರಣೆಗಳು ನನ್ನನ್ನು ಮುಜಗರಕ್ಕೀಡುಮಾಡಿದವು. ಕಾಂತಾರ ಸಿನಿಮಾದ ಬಹುಪಾಲು ಭಾಗ ಸಿನಿಮಾ ಮತ್ತು ಅಭಿನಯವಾಗಿದ್ದರೆ, ದೈವದ ಅಂಶವು ಬಹಳ ಸೂಕ್ಷ್ಮ ಮತ್ತು ಪವಿತ್ರವಾಗಿದೆ. ಇದನ್ನು ವೇದಿಕೆ ಮೇಲೆ ಪ್ರದರ್ಶಿಸುವುದಾಗಲಿ ಅಥವಾ ಅನುಕರಣೆ ಮಾಡುವುದಾಗಲಿ ಮಾಡಬೇಡಿ ಎಂದು ನಾನು ಎಲ್ಲಿಯೇ ಹೋದರು ಕೇಳಿಕೊಳ್ಳುತ್ತೇನೆ. ಈ ದೈವ ಪಾತ್ರ ನಮ್ಮೊಳಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ ಎಂದು ರಿಷಬ್​ ಹೇಳಿದ್ದಾರೆ.
ಸ್ಥಳೀಯ ಆಚರಣೆಗಳಿಗೆ ಎಲ್ಲಿಯೂ ಧಕ್ಕೆಯಾಗದಂತೆ ನೋಡಿಕೊಳ್ಳಲು ನಮ್ಮ ಚಿತ್ರತಂಡವು ಸಾಕಷ್ಟು ಸಂಶೋಧನೆಗಳನ್ನು ನಡೆಸಿದೆ. ಅಲ್ಲದೆ, ಶೂಟಿಂಗ್​ ಸಮಯದಲ್ಲಿ ತುಂಬಾ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ ಎಂದು ರಿಷಬ್​ ಇದೇ ಸಂದರ್ಭದಲ್ಲಿ ತಿಳಿಸಿದರು. ಅಲ್ಲದೆ, ಈ ಆಚರಣೆಗಳು ಎಷ್ಟು ಮುಖ್ಯವಾಗಿದೆ ಮತ್ತು ಅವು ಹೊಂದಿರುವ ಮಹತ್ವವನ್ನು ಪ್ರೇಕ್ಷಕರು ಅರ್ಥಮಾಡಿಕೊಳ್ಳದೇ ಇರುವುದರಿಂದ ಈ ರೀತಿಯ ಅನುಕರಣೆಗಳು ನಡೆಯುತ್ತಿವೆ ಎಂದು ರಿಷಬ್​ ಬೇಸರ ಹೊರಹಾಕಿದರು.

ರಣವೀರ್​ ಸಿಂಗ್​ ಕ್ಷಮೆಯಾಚನೆ

ತಮ್ಮ ಅನುಕರಣೆ ಹಾಗೂ ಮಾತುಗಳು ವಿವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಣವೀರ್​ ಸಿಂಗ್​, ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಪಷ್ಟನೆ ನೀಡಿದರು. ಈ ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಅಂತಹ ಪಾತ್ರಗಳನ್ನು ನಿರ್ವಹಿಸುವುದು ಎಷ್ಟು ಸವಾಲಿನದ್ದು ಎಂಬುದು ಓರ್ವ ನಟನಾಗಿ ನನಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ, ರಿಷಬ್​ ಅವರು ಅತ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರದೇ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ರಣವೀರ್ ಬರೆದುಕೊಂಡಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net