ಈ ಹಿಂದಿನ ವಿಚಾರಣೆಯಲ್ಲಿ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದ ಪ್ರದೋಶ್, ತಾನು ಎಂಬಿಎ ಫೈನಾನ್ಸ್ ಓದಿದ್ದು, ಇಂಗ್ಲಿಷ್ ಓದಲು ಮತ್ತು ಬರೆಯಲು ಬರುತ್ತದೆ ಎಂದು ಉತ್ತರಿಸಿದ್ದ. ಘಟನೆಗೆ ಮುಂಚೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದ. ತಾನು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ, ಸ್ವಯಂಪ್ರೇರಿತರಾಗಿ ರೇಣುಕಾಸ್ವಾಮಿ ಕೊಲೆಯಲ್ಲಿ ತನ್ನ ಮತ್ತು ಇತರರ ಪಾತ್ರವೇನು ಎಂಬ ಸತ್ಯಾಂಶವನ್ನು ಬಹಿರಂಗಪಡಿಸಲು ಈ ಅರ್ಜಿ ಹಾಕಿದ್ದೇನೆ ಎಂದು ಸ್ಪಷ್ಟಪಡಿಸಿದ್ದ. ಇದಕ್ಕೂ ಮುಂಚೆ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿಯನ್ನು ಪರಿಗಣಿಸದಂತೆ ದರ್ಶನ್ ಪರ ವಕೀಲರು ಕೂಡ ವಾದ ಮಂಡನೆ ಮಾಡಿದ್ದರು. ಆದರೆ, ಅಂತಿಮವಾಗಿ ನ್ಯಾಯಾಲಯ ಪ್ರದೋಶ್ ಅರ್ಜಿಯನ್ನು ಪರಿಗಣಿಸಿದೆ. ಇದರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವ ಸಿಕ್ಕಂತಾಗಿದ್ದು, ದರ್ಶನ್ ಮತ್ತು ಇತರ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ.