ನಟಿ ನುಶ್ರತ್ ಮಹಾಕಾಳೇಶ್ವರ ದರ್ಶನಕ್ಕೆ ಮೌಲಾನಾ ಫತ್ವಾ ಎಚ್ಚರಿಕೆ: 'ಇದು ಇಸ್ಲಾಂ ವಿರೋಧಿ ಕೃತ್ಯ' ಎಂದಿದ್ದಕ್ಕೆ ಸಂತರ ಖಡಕ್ ತಿರುಗೇಟು! Nushrratt Bharuccha

Nushrratt Bharuccha
Nushrratt Bharuccha
Published on: 
ಉಜ್ಜಯಿನಿ: ಬಾಲಿವುಡ್ ನಟಿ ನುಶ್ರತ್ ಭರುಚ್ಚ (Nushrratt Bharuccha) ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿರುವ ಕುರಿತು ಉತ್ತರ ಪ್ರದೇಶದ ಮೌಲಾನಾ ನೀಡಿರುವ ಕಟುವಾದ ಹೇಳಿಕೆಗಳ ನಂತರ ರಾಜಕೀಯ ಮತ್ತು ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ.
ಬರೇಲಿಯಲ್ಲಿ, ಅಖಿಲ ಭಾರತ ಮುಸ್ಲಿಂ ಜಮಾಅತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಅವರು ನಟಿಯನ್ನು ಟೀಕಿಸಿ, ಇಸ್ಲಾಮಿಕ್ ಕಾನೂನಿನ ಪ್ರಕಾರ ಅವರ ದೇವಸ್ಥಾನ ಭೇಟಿ ಗಂಭೀರ ಪಾಪ ಎಂದು ಕರೆದರು. ಭರುಚ್ಚ ಅವರು ಮುಸ್ಲಿಂ ಮಹಿಳೆಯಾಗಿದ್ದು, ಹಿಂದೂ ಆಚರಣೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡಬೇಕು ಎಂದು ಅವರು ಹೇಳಿದ್ದಾರೆ.

ಮೌಲಾನಾ ಅವರ ಹೇಳಿಕೆ

ನುಶ್ರತ್ ಅವರ ಭೇಟಿಗೆ ಪ್ರತಿಕ್ರಿಯಿಸಿದ ಮೌಲಾನಾ ಶಹಾಬುದ್ದೀನ್ ರಜ್ವಿ, ಇಸ್ಲಾಂ ಅಂತಹ ಕೃತ್ಯಗಳನ್ನು ಅನುಮತಿಸುವುದಿಲ್ಲ ಶರಿಯತ್ ಪ್ರಕಾರ, ಭರುಚ್ಚ ದೇವಾಲಯದಲ್ಲಿ ಪೂಜೆಯಲ್ಲಿ ಭಾಗವಹಿಸುವುದು ದೊಡ್ಡ ಪಾಪವಾಗಿದ್ದು, ಅವಳು ಪಶ್ಚಾತ್ತಾಪ ಪಡಬೇಕು, ಮತ್ತು ಕಲ್ಮಾ ಪಠಿಸಬೇಕು ಎಂದು ಅವರು ಹೇಳಿದರು. ಅವಳು ಇಸ್ಲಾಂನ ತತ್ವಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಮತ್ತು ಆದ್ದರಿಂದ ಷರಿಯಾ ವ್ಯಾಪ್ತಿಗೆ ಬರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಮೌಲಾನಾಗೆ ಸಂತರ ತಿರುಗೇಟು

ಮೌಲಾನಾ ಅವರ ಹೇಳಿಕೆಗೆ ಉಜ್ಜಯಿನಿಯಲ್ಲಿ ಸಂತರು ಬಲವಾದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿ, ಯಾರಾದರೂ ಸ್ವಇಚ್ಛೆಯಿಂದ ದೇವಸ್ಥಾನಕ್ಕೆ ಭೇಟಿ ನೀಡಿದರೆ, ಮೌಲಾನಾಗಳು ಮಧ್ಯಪ್ರವೇಶಿಸಬಾರದು ಎಂದು ಮಹಾಂತ್ ವಿಶಾಲ್ ದಾಸ್ ಹೇಳಿದರು. ಭರುಚ್ಚ ಅವರ ಭೇಟಿಯನ್ನು ಭಾರತದ ಗಂಗಾ-ಜಮುನಾ ಸಂಸ್ಕೃತಿಯ ಪ್ರತಿಬಿಂಬ ಎಂದು ಅವರು ವಿವರಿಸಿದರು ಮತ್ತು ಇತರರ ಮೇಲೆ ಧಾರ್ಮಿಕ ದೃಷ್ಟಿಕೋನಗಳನ್ನು ಹೇರುವುದರ ವಿರುದ್ಧ ಎಚ್ಚರಿಕೆ ನೀಡಿದರು. ಅದೇ ರೀತಿ, ಶ್ರೀ ಪಂಚಾಯತಿ ಅಖಾಡ ಬಡಾ ಉದಾಸಿನ್‌ನ ಮಹಂತ್ ಸತ್ಯಾನಂದ್ ಅವರು ಅಂತಹ ಹೇಳಿಕೆಗಳು ಅಥವಾ "ಫತ್ವಾ"ಗಳನ್ನು ನೀಡುವುದು ಸೂಕ್ತವಲ್ಲ ಎಂದು ಹೇಳಿದರು. ನಂಬಿಕೆ ವೈಯಕ್ತಿಕ ಮತ್ತು ಭರುಚ್ಚ ಅವರ ಭೇಟಿ ಸಂಘರ್ಷಕ್ಕಿಂತ ಸಾಮರಸ್ಯವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು.

ನಟಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ

ದಾವೂದಿ ಬೊಹ್ರಾ ಸಮುದಾಯಕ್ಕೆ ಸೇರಿರುವ ನುಶ್ರತ್ ಭರುಚ್ಚಾ ಈ ವಿವಾದಕ್ಕೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋನು ಕೆ ಟಿಟು ಕಿ ಸ್ವೀಟಿ, ಪ್ಯಾರ್ ಕಾ ಪಂಚನಾಮ ಮತ್ತು ಡ್ರೀಮ್ ಗರ್ಲ್ ನಂತಹ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಕ್ಕಾಗಿ ನುಶ್ರತ್ ಹೆಸರುವಾಸಿಯಾಗಿದ್ದಾರೆ.

ವೈರಲ್​ ಆಗಿದ್ದ ಹೊಸ ವರ್ಷದ ಆಚರಣೆ ಕುರಿತಾದ ಮೌಲಾನಾ ಹೇಳಿಕೆ

ಮೌಲಾನಾ ಶಹಾಬುದ್ದೀನ್ ರಜ್ವಿ ಚರ್ಚೆಗೆ ಗ್ರಾಸವಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಮುಸ್ಲಿಮರು ಹೊಸ ವರ್ಷವನ್ನು ಆಚರಿಸದಂತೆ ಒತ್ತಾಯಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ಇದು ಇಸ್ಲಾಮಿಕ್ ವಿರೋಧಿ ಮತ್ತು ವ್ಯರ್ಥ ವೆಚ್ಚ ಎಂದು ಕರೆದರು. ಇಸ್ಲಾಮಿಕ್ ಕ್ಯಾಲೆಂಡರ್ ಮೊಹರಂನಿಂದ ಪ್ರಾರಂಭವಾಗುತ್ತದೆ, ಆದರೆ ಹಿಂದೂ ಕ್ಯಾಲೆಂಡರ್ ಚೈತ್ರದಿಂದ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು ಮತ್ತು ಡಿಸೆಂಬರ್ 31–ಜನವರಿ 1ರ ಆಚರಣೆಗಳು ಯುರೋಪಿಯನ್ ಸಂಸ್ಕೃತಿಯ ಭಾಗವಾಗಿದ್ದು, ಶರಿಯತ್ ಅಡಿಯಲ್ಲಿ ಅನುಮತಿಸದ ಚಟುವಟಿಕೆಗಳನ್ನು ಒಳಗೊಂಡಿವೆ ಎಂದು ವಿವರಿಸಿದ್ದರು,(ಏಜನ್ಸೀಸ್).