ಮಾಜಿ ಪತಿಯ ಬಗ್ಗೆ ಮೌನ ಮುರಿದ ಮಂಜು ವಾರಿಯರ್; ಇನ್ನೂ ಸಂಪೂರ್ಣ ನ್ಯಾಯ ದೊರೆತಿಲ್ಲ ! | Manju warrier

ಮಂಜು ವಾರಿಯರ್, ನಟ ದಿಲೀಪ್
ಮಂಜು ವಾರಿಯರ್, ನಟ ದಿಲೀಪ್
Published on

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತೀರ್ಪಿನ ನಂತರ ನಟಿ ಮಂಜು ವಾರಿಯರ್ ಮೊದಲ ಪೋಸ್ಟ್
  • ಹೆಸರನ್ನು ಉಲ್ಲೇಖಿಸದೆ ಮಾಜಿ ಪತಿ ವಿರುದ್ಧ ಹರಿಹಾಯ್ದ ನಟಿ
  • ನೀಚ ಕೃತ್ಯ ಯೋಜಿಸುವವರಿಗೆ ಮೊದಲು ಶಿಕ್ಷೆಯಾಗಬೇಕು
Manju warrier : 2017 ರ ಖ್ಯಾತ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತೀರ್ಪಿನ ನಂತರ ನಟಿ ಮಂಜು ವಾರಿಯರ್ (Manju warrier) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ನ್ಯಾಯಾಂಗದ ಬಗ್ಗೆ ಗೌರವ ವ್ಯಕ್ತಪಡಿಸುತ್ತಾ, ಬದುಕುಳಿದವರಿಗೆ ನ್ಯಾಯ ಇನ್ನು ದೊರೆತಿಲ್ಲ ಎಂದು ನಟಿ ಹೇಳಿದ್ದಾರೆ.ಎರ್ನಾಕುಲಂ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯವು ನೀಡಿದ ತೀರ್ಪು,ಮಂಜು ವಾರಿಯರ್ ಅವರ ಮಾಜಿ ಪತಿ, ನಟ-ನಿರ್ಮಾಪಕ ದಿಲೀಪ್ ಅವರನ್ನು ಖುಲಾಸೆಗೊಳಿಸಿ ಪ್ರಮುಖ ಅಪರಾಧಿ ಪಲ್ಸರ್ ಸುನಿ ಸೇರಿದಂತೆ ಇತರ ಆರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ.
ಮಂಜು ವಾರಿಯರ್ ಅವರ ಹೇಳಿಕೆ
ತೀರ್ಪಿನ ಸುಮಾರು ಒಂದು ವಾರದ ನಂತರ, ಮಂಜು ವಾರಿಯರ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ ಒಂದನ್ನು ಹಂಚಿಕೊಂಡಿದ್ದಾರೆ. ಗೌರವಾನ್ವಿತ ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಈ ಪ್ರಕರಣದಲ್ಲಿ, ಬದುಕುಳಿದವರಿಗೆ ನ್ಯಾಯ ಇನ್ನೂ ಅಪೂರ್ಣವಾಗಿದೆ. ಅಪರಾಧ ಮಾಡಿದವರಿಗೆ ಮಾತ್ರ ಶಿಕ್ಷೆಯಾಗಿದೆ. ಈ ಹೇಯ ಕೃತ್ಯವನ್ನು ಯೋಜಿಸಿ ಸಕ್ರಿಯಗೊಳಿಸಿದ ಮನಸ್ಸು, ಅದು ಯಾರೇ ಆಗಿರಲಿ, ಇನ್ನೂ ಮುಕ್ತವಾಗಿ ನಡೆಯಲು ಅನುವು ಮಾಡಿಕೊಟ್ಟಿದ್ದು ಖೇದಕರ. ಈ ಅಪರಾಧದ ಹಿಂದಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿದಾಗ ಮಾತ್ರ ನ್ಯಾಯವು ಪೂರ್ಣಗೊಳ್ಳುತ್ತದೆ. ಇದು ಕೇವಲ ಒಬ್ಬ ಬದುಕುಳಿದವನಿಗೆ ಅಲ್ಲ. ಇದು ಪ್ರತಿಯೊಬ್ಬ ಹುಡುಗಿ, ಪ್ರತಿಯೊಬ್ಬ ಮಹಿಳೆ, ಪ್ರತಿಯೊಬ್ಬ ಮನುಷ್ಯನಿಗೆ, ಧೈರ್ಯದಿಂದ, ತಲೆಯೆತ್ತಿ, ತಮ್ಮ ಕೆಲಸದ ಸ್ಥಳಗಳಲ್ಲಿ, ಬೀದಿಗಳಲ್ಲಿ ಮತ್ತು ಜೀವನದಲ್ಲಿ ಭಯಮುಕ್ತರಾಗ ಬೇಕೆಂದರೆ ಮೊದಲು ನೀಚ ಕೃತ್ಯಗಳನ್ನು ಯೋಜಿಸುವವರಿಗೆ ಮೊದಲು ಶಿಕ್ಷೆಯಾಗಬೇಕು ಎಂದು ಬರದುಕೊಂಡಿದ್ದಾರೆ.
ಆರೋಪಗಳನ್ನು ನಿರಾಕರಿಸಿದ ದಿಲೀಪ್
ಆರೋಪಗಳಿಂದ ಮುಕ್ತನಾದ ನಂತರ, ಮಲಯಾಳಂ ನಟ ದಿಲೀಪ್ ಮಾಧ್ಯಮಗಳನ್ನುದ್ದೇಶಿಸಿ, ಉದ್ದೇಶಪೂರ್ವಕ ಪಿತೂರಿಯ ಭಾಗವಾಗಿ ತನ್ನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿಕೊಂಡರು. ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯಮದದವರು ತಮ್ಮ ವೃತ್ತಿಜೀವನ ಮತ್ತು ಸಾರ್ವಜನಿಕ ಇಮೇಜ್‌ಗೆ ಹಾನಿ ಮಾಡಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ನನ್ನ ವೃತ್ತಿ, ಇಮೇಜ್ ಮತ್ತು ನನ್ನ ಜೀವನವನ್ನು ನಾಶಮಾಡಲು ಇದನ್ನು ಮಾಡಲಾಗಿತ್ತು, ಆದರೆ ನ್ಯಾಯಾಲಯದಲ್ಲಿ ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ ನಾನು ನಿರಪರಾಧಿಯಾಗಿ ಹೊರಹೊಮ್ಮಿದ್ದೆನೆಂದು ಹೇಳಿಕೆ ನೀಡಿದ್ದರು.
ತಮ್ಮ ಮಾಜಿ ಪತ್ನಿ ಮಂಜು ವಾರಿಯರ್ ಅವರನ್ನು ಟೀಕಿಸಿದ ದಿಲೀಪ್, ನನ್ನ ವಿರುದ್ಧ ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ನಡೆದಿದೆ ಎಂದ ದಿಲೀಪ್​, ವ್ಯಕ್ತಿಗಳನ್ನು ಹೆಸರಿಸದೆ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಅವರು ಆಯ್ಕೆ ಮಾಡಿದ ಅಧಿಕಾರಿಗಳ ಗುಂಪು ಪ್ರಮುಖ ಆರೋಪಿಯ ಬೆಂಬಲದೊಂದಿಗೆ ತನ್ನ ವಿರುದ್ಧ ಸುಳ್ಳು ನಿರೂಪಣೆಯನ್ನು ರೂಪಿಸಿದೆ ಎಂದು ಆರೋಪಿಸಿದರು.
ಕೋರ್ಟ್​ ತೀರ್ಪು
ನವೆಂಬರ್ 25 ರಂದು ವಿಚಾರಣೆಗಳನ್ನು ಮುಕ್ತಾಯಗೊಳಿಸಿದ ನಂತರ ಎರ್ನಾಕುಲಂ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸಿತು. ದಿಲೀಪ್ ಮತ್ತು ಇತರ ಮೂವರನ್ನು ಖುಲಾಸೆಗೊಳಿಸಲಾಗಿದ್ದರೂ, ಹಲ್ಲೆಯನ್ನು ನೇರವಾಗಿ ನಡೆಸಿದ ಪ್ರಮುಖ ಆರೋಪಿ ಸುನಿಲ್ ಎನ್ಎಸ್ ಅಥವಾ ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿತು. ಪ್ರಕರಣವು ಫೆಬ್ರವರಿ 17, 2017 ರಂದು ನಡೆದಿದ್ದು, ದುಷ್ಕರ್ಮಿಗಳು ಆಕೆ ಪ್ರಯಾಣಿಸುತ್ತಿದ್ದ ಕಾರನ್ನು ಬಲವಂತವಾಗಿ ಪ್ರವೇಶಿಸಿ ಸುಮಾರು ಎರಡು ಗಂಟೆಗಳ ಕಾಲ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡ ನಂತರ ಬದುಕುಳಿದವರ ಮೇಲೆ ಹಲ್ಲೆ ನಡೆಸಲಾಯಿತು. ಪ್ರಾಸಿಕ್ಯೂಷನ್ ಪ್ರಕಾರ, ಪ್ರಕರಣದಲ್ಲಿ ಹತ್ತು ವ್ಯಕ್ತಿಗಳನ್ನು ಆರೋಪಿಗಳೆಂದು ಪರಿಗಣಿಸಲಾಗಿದೆ, ಘಟನೆಯ ನಂತರ ಬಂಧನಗಳು ಪ್ರಾರಂಭವಾದವು. ಸುನಿಲ್ ಜೈಲಿನಿಂದ ಪತ್ರವನ್ನು ಕಳುಹಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ ನಂತರ, ಹೆಚ್ಚಿನ ತನಿಖೆಯ ನಂತರ ಜುಲೈ 2017 ರಲ್ಲಿ ದಿಲೀಪ್ ಅವರನ್ನು ಬಂಧಿಸಲಾಗಿತ್ತು.


ಪ್ರಕರಣದ ಇತಿಹಾಸ

* ಫೆಬ್ರವರಿ 17, 2017ರಂದು ನಟಿಯ ಮೇಲೆ ಹಲ್ಲೆ ನಡೆಯಿತು. ನಟಿ ಆ ದಿನ ರಾತ್ರಿ ತ್ರಿಸ್ಸೂರ್‌ನಲ್ಲಿರುವ ತನ್ನ ಮನೆಯಿಂದ ಮಾರ್ಟಿನ್ ಹೆಸರಿನ ಚಾಲಕ ಚಲಾಯಿಸುತ್ತಿದ್ದ ಮಹೀಂದ್ರಾ ಎಸ್‌ಯುವಿಯಲ್ಲಿ ಹೊರಟಿದ್ದರು. ಈ ವೇಳೆ ಮಾರ್ಟಿನ್ ಮಾಹಿತಿಯ ಮೇರೆಗೆ, ಪಲ್ಸರ್ ಸುನಿ ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲ್ಲರ್ ಅಂಗಮಾಲಿಯಿಂದ ಅವರನ್ನು ಹಿಂಬಾಲಿಸಿತು. ಮಣಿಕಂಠನ್ ಮತ್ತು ವಿಜೀಶ್ ಎಂಬುವರು ಅದರಲ್ಲಿದ್ದರು. ಟೆಂಪೋ ಟ್ರಾವೆಲ್ಲರ್ ಆಲುವಾದ ಅಥಣಿಯಲ್ಲಿ ನಟಿಯ ವಾಹನಕ್ಕೆ ಡಿಕ್ಕಿ ಹೊಡೆದು ನಕಲಿ ಅಪಘಾತವನ್ನು ಸೃಷ್ಟಿಸಿತು.
* ಬಳಿಕ ಮಾರ್ಟಿನ್ ಕಾರಿನಿಂದ ಕೆಳಗೆ ಇಳಿದು ಜಗಳವಾಡುತ್ತಿರುವಾಗ ಟೆಂಪೋ ಟ್ರಾವೆಲ್ಲರ್​ನಿಂದ ಹೊರಬಂದ ಮಣಿಕಂಠನ್ ಮತ್ತು ವಿಜೀಶ್, ಹಿಂದಿನ ಸೀಟಿಗೆ ನುಗ್ಗಿ, ನಟಿಯ ಕೈಗಳನ್ನು ಹಿಡಿದು ಬಾಯಿ ಮುಚ್ಚಿದರು. ಬಳಿಕ ಅದೇ ವಾಹನದಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಅವರು ಕಲಾಮಸ್ಸೆರಿ ತಲುಪಿದಾಗ, ಪ್ರದೀಪ್ ಕೂಡ ಅವರೊಂದಿಗೆ ಸೇರಿಕೊಂಡನು.
* ಕೆಲವು ಆರೋಪಿಗಳು ಎರಡೂ ವಾಹನಗಳನ್ನು ಸರದಿಯಂತೆ ಚಲಾಯಿಸಿದರು. ಚಾಲಕ ಮಾರ್ಟಿನ್ ಈ ವೇಳೆ ಅಸಹಾಯಕನಂತೆ ನಟಿಸಿದನು. ಅವರು ಮಾರ್ಟಿನ್ ನನ್ನು ಪಳರಿವತ್ತಂ-ವೆನ್ನಾಲ ಮಾರ್ಗದಲ್ಲಿ ಇಳಿಸಿದರು. ಈ ವೇಳೆ ಪಲ್ಸರ್ ಸುನಿ ವಾಹನವನ್ನು ಚಲಾಯಿಸಿದನು. ಸಲೀಂ ಮತ್ತು ಮಣಿಕಂದನ್ ಅವನ ಜೊತೆ ಇದ್ದರು.
* ಕಕ್ಕನಾಡ್‌ನಲ್ಲಿ ಸುನಿ, ನಟಿಯ ಎಡಭಾಗದಲ್ಲಿ ಕುಳಿತು, ಸಲೀಮ್‌ಗೆ ಡ್ರೈವಿಂಗ್​ ಜವಾಬ್ದಾರಿಯನ್ನು ವಹಿಸಿದನು. ತಮ್ಮ ಕೃತ್ಯಕ್ಕೆ ಸಹಕರಿಸದೇ ಹೋದರೆ ಮಾದಕ ದ್ರವ್ಯ ಸೇವಿಸಿ, ದೃಶ್ಯವನ್ನು ರೆಕಾರ್ಡ್ ಮಾಡುವುದಾಗಿ ಬೆದರಿಕೆ ಹಾಕಿದನು. ನಂತರ ಆಕೆಯನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಿದನು ಮತ್ತು ದೃಶ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದನು. ಈ ಕೃತ್ಯಕ್ಕೆ ಸುಪಾರಿ ನೀಡಿದ ವ್ಯಕ್ತಿ ತನಗೆ ಕರೆ ಮಾಡುತ್ತಾನೆ ಎಂದು ಈ ವೇಳೆ ಪಲ್ಸರ್​ ಸುನಿ ಹೇಳಿದನು. ಆದಾಗ್ಯೂ, ನಟ ದಿಲೀಪ್ ಆ ಸಮಯದಲ್ಲಿ ರಾಮಲೀಲಾ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿ, ಆಸ್ಪತ್ರೆಗೆ ದಾಖಲಾಗಿದ್ದರು. ಇದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
* ಸುಮಾರು 2 ಗಂಟೆಗಳ ಕಾಲ ನಟಿಯ ಮೇಲೆ ದೌರ್ಜನ್ಯ ಎಸಗಿದ ಕಿಡಿಗೇಡಿಗಳು, ತಡರಾತ್ರಿ ನಟಿಯನ್ನು ನಿರ್ದೇಶಕ ಲಾಲ್ ಅವರ ಮನೆಯಲ್ಲಿ ಇಳಿಸಿದರು. ಆ ಬಳಿಕ ಈ ಘಟನೆಯ ಬಗ್ಗೆ ಹೊರಜಗತ್ತಿಗೆ ತಿಳಿಯಿತು. ಮುಗ್ಧನಂತೆ ಕಾಣುತ್ತಿದ್ದ ಮಾರ್ಟಿನ್​ನನ್ನು ಫೆಬ್ರವರಿ 18 ರಂದು ವಶಕ್ಕೆ ಪಡೆಯಲಾಯಿತು.
* ಈ ಮಧ್ಯೆ, ಡೀಲ್​ ಮಾಡಿದ ಪ್ರಕಾರ ನಮಗೆ ಹಣ ಸಿಕ್ಕಿಲ್ಲ ಎಂದು ದಿಲೀಪ್‌ಗೆ ಬೆದರಿಕೆ ಹಾಕಲು ಸುನಿ ಹಲವು ಬಾರಿ ಪ್ರಯತ್ನಿಸಿದ್ದ. ದಿಲೀಪ್‌ನ ನಂಬಿಕಸ್ಥರಿಗೆ ತನ್ನ ಫೋನ್‌ ಮೂಲಕ ಸುನಿ ಹಲವಾರು ಬಾರಿ ಕರೆ ಮಾಡಿದ್ದ.
* ಫೆಬ್ರವರಿ 18 ರಂದು ಶಂಕಿತರು ಬಳಸುತ್ತಿದ್ದ ಎರಡು ವಾಹನಗಳು ಪತ್ತೆಯಾದವು ಮತ್ತು ವಿಶೇಷ ಶೋಧ ತಂಡವನ್ನು ರಚಿಸಲಾಯಿತು.
* ಫೆಬ್ರವರಿ 19 ರಂದು, ವಡಿವಾಲ್ ಸಲೀಂ ಮತ್ತು ಪ್ರದೀಪ್ ಅವರನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಯಿತು. ಇದರ ನಡುವೆ ನಟಿಗೆ ನೈತಿಕ ಬಲ ತುಂಬಲು ಕೊಚ್ಚಿಯಲ್ಲಿ ಚಲನಚಿತ್ರ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ನಟ ದಿಲೀಪ್ ಸಮ್ಮುಖದಲ್ಲಿ ಪಿತೂರಿ ನಡೆಸಿದ್ದಾರೆ ಎಂದು ದಿಲೀಪ್​ ಮಾಜಿ ಪತ್ನಿ ಮಂಜು ವಾರಿಯರ್ ಆರೋಪಿಸಿದರು.
* ಫೆಬ್ರವರಿ 20 ರಂದು ಪಾಲಕ್ಕಾಡ್‌ನಲ್ಲಿ ಮಣಿಕಂದನ್​ನನ್ನು ಬಂಧಿಸಲಾಯಿತು.
* ಈ ಪ್ರಕರಣದ ಮೊದಲ ಆರೋಪಿ ಪಲ್ಸರ್ ಸುನಿಯನ್ನು ಫೆಬ್ರವರಿ 23 ರಂದು ಬಂಧಿಸಲಾಯಿತು. ನ್ಯಾಯಾಲಯಕ್ಕೆ ಶರಣಾಗಲು ಬಂದಾಗ ಆತನನ್ನು ಬಂಧಿಸಲಾಯಿತು. ಇದಕ್ಕೂ ಮೊದಲೇ ಅಶ್ಲೀಲ ದೃಶ್ಯಗಳನ್ನು ಒಂದೆಡೆ ಹಸ್ತಾಂತರಿಸಲಾಗಿತ್ತು. ಇದರ ನಡುವೆ ಸುನಿ, ದಿಲೀಪ್‌ನನ್ನು ಭೇಟಿಯಾಗಲು ಸಹ ಪ್ರಯತ್ನಿಸಿದನು.
* ಏಪ್ರಿಲ್ 18 ರಂದು ಅಂಗಮಾಲಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಪಲ್ಸರ್ ಸುನಿ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.
* ಏಪ್ರಿಲ್ 20 ರಂದು ವಿಷ್ಣು ಎಂಬ ವ್ಯಕ್ತಿ ತನಗೆ ಕರೆ ಮಾಡಿ 1.5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂದು ದಿಲೀಪ್ ದೂರು ನೀಡಿದರು.
* ಜೂನ್ 25 ರಂದು ಸುನಿಯ ಸಹ ಆರೋಪಿ ವಿಷ್ಣು ಮತ್ತು ಸನಲ್ ದಿಲೀಪ್ ಅವರನ್ನು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಯಿತು.
* ಜೂನ್ 28 ರಂದು ನಟರಾದ ದಿಲೀಪ್ ಮತ್ತು ನಾದಿರ್​ ಶಾ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು.
* ಜುಲೈ 2ರಂದು ದಿಲೀಪ್ ಅವರ ಸಿನಿಮಾ ಶೂಟಿಂಗ್​ ಸ್ಥಳದಲ್ಲಿ ಪಲ್ಸರ್ ಸುನಿ ಇದ್ದ ಫೋಟೋ ಕಾಣಿಸಿಕೊಂಡಿತು.
* ಜುಲೈ 10 ರಂದು ದಿಲೀಪ್ ಅವರನ್ನು ಬಂಧಿಸಲಾಯಿತು. ನಂತರ ಅವರನ್ನು ಅಲುವಾ ಸಬ್-ಜೈಲಿನಲ್ಲಿ ಇರಿಸಲಾಯಿತು.
* ಜುಲೈ 20 ರಂದು ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಸುನಿ ಅವರ ಮೊದಲ ವಕೀಲ ಪ್ರತೀಶ್ ಚಾಕೊ ಅವರನ್ನು ಬಂಧಿಸಲಾಯಿತು.
* ಪ್ರತಿಶ್ ಚಾಕೊ ಅವರ ಜೂನಿಯರ್ ರಾಜು ಜೋಸೆಫ್ ಅವರನ್ನು ಆಗಸ್ಟ್ 2 ರಂದು ಬಂಧಿಸಲಾಯಿತು.
* ಸೆಪ್ಟೆಂಬರ್ 2 ರಂದು ದಿಲೀಪ್ ಅವರ ತಂದೆಯ ಶ್ರದ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು.
* ಅಕ್ಟೋಬರ್ 3 ರಂದು ಹೈಕೋರ್ಟ್ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದಿಲೀಪ್‌ಗೆ ಜಾಮೀನು ನೀಡಿತು.
* ನವೆಂಬರ್ 21 ರಂದು ದಿಲೀಪ್ ಅವರನ್ನು ವಿದೇಶಕ್ಕೆ ಪ್ರಯಾಣಿಸಲು ಹೈಕೋರ್ಟ್ ಅನುಮತಿ ನೀಡಿತು.
* ನವೆಂಬರ್ 22 ರಂದು ದಿಲೀಪ್ ಅವರನ್ನು ಪೂರಕ ಆರೋಪಪಟ್ಟಿಯಲ್ಲಿ ಎಂಟನೇ ಪ್ರತಿವಾದಿಯನ್ನಾಗಿ ಮಾಡಲಾಯಿತು.
* ಮಾರ್ಚ್ 8, 2018 ರಂದು ಎರ್ನಾಕುಲಂ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಪ್ರಾರಂಭವಾಯಿತು.
* ನವೆಂಬರ್ 29, 2019 ರಂದು, ಸುಪ್ರೀಂ ಕೋರ್ಟ್ ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿತು.
* ಜನವರಿ 30, 2020 ರಂದು ಸಾಕ್ಷ್ಯ ವಿಚಾರಣೆ ಪ್ರಾರಂಭವಾಯಿತು.
* ಡಿಸೆಂಬರ್ 25, 2021 ರಂದು ನಿರ್ದೇಶಕ ಬಾಲಚಂದ್ರ ಕುಮಾರ್ ಅವರು ಕೆಲವು ಪ್ರಮುಖ ಹೇಳಿಕೆಗಳನ್ನು ಬಹಿರಂಗಪಡಿಸಿದರು.
* ಜನವರಿ 4, 2022 ರಂದು ಬಾಲಚಂದ್ರ ಕುಮಾರ್ ಅವರ ಹೇಳಿಕೆಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಲು ಕೋರ್ಟ್​ ಅನುಮತಿ ನೀಡಿತು.
* ಸೆಪ್ಟೆಂಬರ್ 17, 2024 ರಂದು ಪಲ್ಸರ್ ಸುನಿಗೆ ಜಾಮೀನು ನೀಡಲಾಯಿತು.
* ಡಿಸೆಂಬರ್ 11, 2024 ರಂದು ಅಂತಿಮ ವಾದಗಳು ಪ್ರಾರಂಭವಾದವು.
* ಪ್ರತಿವಾದಿಯ ವಾದಗಳು ಏಪ್ರಿಲ್ 9, 2025 ರಂದು ಮುಕ್ತಾಯಗೊಂಡವು.
* 2025, ಡಿಸೆಂಬರ್​ 8ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ ನಟ ದಿಲೀಪ್​ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ, ಉಳಿದ ಆರೋಪಿಗಳನ್ನು ತಪ್ಪಿತಸ್ಥರೆಂದು ಹೇಳಿತು. ಅಲ್ಲದೆ, ಡಿಸೆಂಬರ್​ 12ರಂದು ಶಿಕ್ಷೆ ಪ್ರಕಟಿಸುವುದಾಗಿ ಹೇಳಿತು.
* ಡಿಸೆಂಬರ್​ 12ರಂದು ತೀರ್ಪು ಪ್ರಕಟಿಸಿದ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್, ಆರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿ, 50 ಸಾವಿರ ರೂ. ದಂಡವನ್ನು ಪಾವತಿಸಲು ಸೂಚಿಸಿದೆ. ಪ್ರಕರಣದ ಪ್ರಮುಖ ಆರೋಪಿ ಸುನಿಲ್‌ಗೆ ಐಟಿ ಕಾಯ್ದೆಯಡಿ ಹೆಚ್ಚುವರಿಯಾಗಿ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದು, ಸುನಿ 25 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು.
* ಆರು ಆರೋಪಿಗಳಾದ ಎನ್.ಎಸ್. ಸುನಿಲ್ (ಪಲ್ಸರ್ ಸುನಿ), ಮಾರ್ಟಿನ್ ಆಂಟನಿ, ಬಿ. ಮಣಿಕಂದನ್, ವಿ.ಪಿ. ವಿಜೀಶ್, ಎಚ್. ಸಲೀಂ, ಮತ್ತು ಪ್ರದೀಪ್ 50,000 ರೂ. ದಂಡದ ಜತೆ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಮುಖ್ಯವಾಗಿ, ಆರೋಪಿಗಳ ದಂಡದ ಮೊತ್ತದಿಂದ ಸಂತ್ರಸ್ತ ನಟಿಗೆ 5 ಲಕ್ಷ ರೂ. ಹಣವನ್ನು ನೀಡಲಾಗುವುದು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net