ಸ್ವರ್ಣಯುಗದ ಚಕ್ರವರ್ತಿ ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ ಸುದೀಪ್: ದೇವರಾಯ ಚಿತ್ರದ ರಿಲೀಸ್​ ಡೇಟ್ ಕೂಡ ಅನೌನ್ಸ್​! Kichcha Sudeepa

ಸ್ವರ್ಣಯುಗದ ಚಕ್ರವರ್ತಿ ಶ್ರೀ ಕೃಷ್ಣದೇವಾರಾಯನಾಗಿ ಕಿಚ್ಚ ಸುದೀಪ್: ದೇವರಾಯ ಚಿತ್ರದ ರಿಲೀಸ್​ ಡೇಟ್ ಕೂಡ ಅನೌನ್ಸ್​! Kichcha Sudeepa ​
ಸ್ವರ್ಣಯುಗದ ಚಕ್ರವರ್ತಿ ಶ್ರೀ ಕೃಷ್ಣದೇವಾರಾಯನಾಗಿ ಕಿಚ್ಚ ಸುದೀಪ್: ದೇವರಾಯ ಚಿತ್ರದ ರಿಲೀಸ್​ ಡೇಟ್ ಕೂಡ ಅನೌನ್ಸ್​! Kichcha Sudeepa ​
Published on: 

ಪ್ರಮುಖ ಮುಖ್ಯಾಂಶಗಳು

  • ಸ್ವರ್ಣಯುಗದ ಚಕ್ರವರ್ತಿ ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ ಸುದೀಪ್ ಅಬ್ಬರ
  • ಹುಟ್ಟುಹಬ್ಬದ ಸಂಭ್ರಮದಲ್ಲಿ ದೇವಾರಾಯ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ
  • 2027ರ ಡಿಸೆಂಬರ್‌ನಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ ಈ ಐತಿಹಾಸಿಕ ಸಿನಿಮಾ
  • ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ಅದ್ಧೂರಿಯಾಗಿ ಮೂಡಿಬರಲಿರುವ ಕಥೆ
  • ಬಹುದಿನಗಳ ಅಭಿಮಾನಿಗಳ ಕನಸು ನನಸಾಗಿಸಿದ ಅಭಿನಯ ಚಕ್ರವರ್ತಿ ಸುದೀಪ್
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ( Kichcha Sudeepa ​) ಇಂದು 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಸ್ಯಾಂಡಲ್​ವುಡ್ ಸೇರಿದಂತೆ ಇಡೀ ಚಿತ್ರರಂಗದ ಅಂಗಳದಲ್ಲಿ ಸಂಭ್ರಮ ಮನೆಮಾಡಿದೆ. ಮೂರು ದಶಕಗಳಿಗೂ ಅಧಿಕ ಕಾಲದಿಂದ ತಮ್ಮ ವಿಭಿನ್ನ ನಟನಾ ಶೈಲಿ, ಸ್ಟೈಲ್​, ಗತ್ತು ಮತ್ತು ಬೇಸ್​ ವಾಯ್ಸ್​ನಿಂದಲೇ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಕಿಚ್ಚ, ಬಾದ್‌ಷಾ ಎಂದೇ ಖ್ಯಾತರಾಗಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ಕ್ರಿಕೆಟಿಗ, ಗಾಯಕ ಹಾಗೂ ಅತ್ಯುತ್ತಮ ಬಾಣಸಿಗ... ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಹುಮುಖ ಪ್ರತಿಭೆಯಾಗಿರುವ ಸುದೀಪ್​ ತಮ್ಮ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ತಮ್ಮ ಜನ್ಮದಿನದ ವಿಶೇಷವೆಂಬಂತೆ ನಟ ಸುದೀಪ್ ಅವರ ಹೊಸ ಸಿನಿಮಾಗಳು ಅಧಿಕೃತವಾಗಿ ಅನೌನ್ಸ್ ಆಗಿದ್ದು, ಸಿನಿರಂಗದಲ್ಲಿ ತೀವ್ರ ಕುತೂಹಲ ಮೂಡಿಸಿವೆ. ಎಂದಿನಂತೆ ತಮ್ಮ ಭಿನ್ನ ಕಥಾಹಂದರಗಳು ಮತ್ತು ಮಾಸ್ ಹಾಗೂ ಕ್ಲಾಸ್ ಅವತಾರಗಳ ಮೂಲಕ ಮತ್ತೊಮ್ಮೆ ರಂಗೇರಿಸಲು ಕಿಚ್ಚ ಸಜ್ಜಾಗುತ್ತಿದ್ದಾರೆ. ಈ ಬಾರಿ ವಿಶೇಷವೆಂದರೆ, ಅಭಿಮಾನಿಗಳ ಬಹುದಿನಗಳ ಕನಸಾಗಿರುವ ಐತಿಹಾಸಿಕ ಪಾತ್ರದಲ್ಲಿ ಕಿಚ್ಚ ಬಣ್ಣ ಹಚ್ಚಲಿದ್ದಾರೆ. ಹೌದು, ಕರ್ನಾಟಕದ ಶ್ರೇಷ್ಠ ರಾಜರುಗಳಲ್ಲಿ ಒಬ್ಬರಾಗಿರುವ ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ನಟ ಕಿಚ್ಚ ಸುದೀಪ್​ ಮಿಂಚಲಿದ್ದಾರೆ. ಈ ಸಿನಿಮಾದ ಕಾನ್ಸೆಪ್ಟ್​ ವಿಡಿಯೋ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಡಬಲ್​ ಮನರಂಜನೆಯನ್ನು ನೀಡಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಲಾಂಛನದಲ್ಲಿ ಅದ್ಧೂರಿಯಾಗಿ ಮೂಡಿಬರಲಿರುವ ದೇವಾರಾಯ (Devaraaya) ಸಿನಿಮಾದ ಅಧಿಕೃತ ಟೈಟಲ್ ಅನೌನ್ಸ್​ಮೆಂಟ್​ ಟೀಸರ್ ಬಿಡುಗಡೆಗೊಂಡಿದೆ. ಇತಿಹಾಸವನ್ನು ರೂಪಿಸಿದ ಸಾಮ್ರಾಜ್ಯ, ಒಂದು ಯುಗವನ್ನು ವ್ಯಾಖ್ಯಾನಿಸಿದ ರಾಜ ಹಾಗೂ ಕಾಲವನ್ನು ಮೀರಿದ ದಂತಕಥೆಯ ಪರಿಕಲ್ಪನೆಯೊಂದಿಗೆ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಸ್ಯಾಂಡಲ್‌ವುಡ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಈ ಬ್ರಹ್ಮಾಂಡದ ಕಥೆಯಲ್ಲಿ ಕಿಚ್ಚ ಸುದೀಪ್ ಅವರು ಚಕ್ರವರ್ತಿ ಶ್ರೀ ಕೃಷ್ಣ ದೇವರಾಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಗೌರಹರಿ ಸಂಗೀತ ಸಂಯೋಜನೆ ನೀಡಿದ್ದಾರೆ. ಪರಾಕ್ರಮ, ವೈಭವ ಮತ್ತು ಐತಿಹಾಸಿಕ ಪರಂಪರೆಯ ದೃಶ್ಯ ವೈಭವವನ್ನು ಬಿಂಬಿಸುವ ಈ ಚಿತ್ರವು 2027ರ ಡಿಸೆಂಬರ್‌ನಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಸುದೀಪ್​ ಅವರನ್ನು ಒಮ್ಮೆಯಾದರೂ ಐತಿಹಾಸಿಪಾತ್ರದಲ್ಲಿ ನೋಡಬೇಕೆಂದು ಅಭಿಮಾನಿಗಳು ಬಯಸಿದ್ದರು. ಬಹುದಿನಗ ಆ ಬಯಕ ಇದೀಗ ನನಸಾಗಿದೆ. ಐತಿಹಾಸಿಕ ಪಾತ್ರ ಮಾಡುತ್ತಿರುವುದಾಗಿ ಸ್ವತಃ ಸುದೀಪ್​ ಕೂಡ ಈ ಹಿಂದೆ ಹೇಳಿದ್ದರು. ಕೊನೆಗೂ ಆ ಐತಿಹಾಸಿಕ ಪಾತ್ರದ ಝಲಕ್ ಅನಾವರಣಗೊಂಡಿದೆ. ಅಭಿಮಾನಿಗಳಿಗೆ ಹುಟ್ಟುಹಬ್ಬದ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ.​
ಅಂದಹಾಗೆ, ದಕ್ಷಿಣ ಭಾರತದ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಪ್ರಭಾವಿ ಸಾಮ್ರಾಜ್ಯವೆನಿಸಿದ ವಿಜಯನಗರ ಸಾಮ್ರಾಜ್ಯದ ಅತ್ಯಂತ ಕೀರ್ತಿಶಾಲಿ ಚಕ್ರವರ್ತಿಯಾಗಿ ಶ್ರೀ ಕೃಷ್ಣದೇವರಾಯ ಅವರು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಕ್ರಿ.ಶ. 1509 ರಿಂದ 1529 ರವರೆಗೆ ಆಳ್ವಿಕೆ ನಡೆಸಿದ ಇವರ ಕಾಲವನ್ನು ವಿಜಯನಗರ ಸಾಮ್ರಾಜ್ಯದ 'ಸ್ವರ್ಣಯುಗ' ಎಂದು ಕರೆಯಲಾಗುತ್ತದೆ. ಇವರು ಕೇವಲ ಒಬ್ಬ ಪರಾಕ್ರಮಿ ದೊರೆಯಷ್ಟೇ ಅಲ್ಲದೆ, ಅತ್ಯುತ್ತಮ ಆಡಳಿತಗಾರ, ಕಲಾಪೋಷಕ ಮತ್ತು ಸಾಹಿತ್ಯ ಪ್ರೇಮಿಯಾಗಿದ್ದರು. ಇವರ ಆಳ್ವಿಕೆಯಲ್ಲಿ ವಿಜಯನಗರ ಸಾಮ್ರಾಜ್ಯವು ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಉತ್ತುಂಗಕ್ಕೇರಿತ್ತು. ತೆಲುಗು ಭಾಷೆಯಲ್ಲಿ 'ಆಮುಕ್ತಮಾಲ್ಯದ' ಎಂಬ ಮಹತ್ವದ ಕೃತಿಯನ್ನು ರಚಿಸಿದ ಕೃಷ್ಣದೇವರಾಯರು, ಕನ್ನಡ ಮತ್ತು ತೆಲುಗು ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಇವರ ರಾಜಸಭೆಯಲ್ಲಿ ಅಷ್ಟದಗ್ಗಜರೆಂಬ ಎಂಟು ದಿಗ್ಗಜ ಕವಿಗಳಿದ್ದರು ಮತ್ತು ಇವರ ಆಸ್ಥಾನದ ವಿದೂಷಕ ತೆನಾಲಿ ರಾಮಕೃಷ್ಣರ ಬುದ್ಧಿವಂತಿಕೆಯ ಕಥೆಗಳು ಇಂದಿಗೂ ಮನೆಮನೆಗಳಲ್ಲಿ ಜನಪ್ರಿಯವಾಗಿವೆ. ಕಲೆ, ಸಾಹಿತ್ಯ, ಸಂಗೀತ ಮತ್ತು ಭವ್ಯ ನಿರ್ಮಾಣಗಳಿಗೆ ಅಪಾರ ಪ್ರೋತ್ಸಾಹ ನೀಡಿದ ಇವರ ಆಡಳಿತ ವೈಖರಿಯು ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಿತ್ತು. ಹೀಗಾಗಿ, ಇತಿಹಾಸದಲ್ಲಿ 'ಆಂಧ್ರ ಭೋಜ', 'ಅಭಿನವ ಭೋಜ' ಮತ್ತು 'ಮೂತರಾಯರ ಗಂಡ' ಎಂಬ ಬಿರುದುಗಳಿಂದ ಖ್ಯಾತರಾಗಿರುವ ಶ್ರೀ ಕೃಷ್ಣದೇವರಾಯರು ಭಾರತೀಯ ಇತಿಹಾಸದ ಅತಿ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬರೆಂದು ಸದಾ ಸ್ಮರಿಸಲ್ಪಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net