ಈ ಕಾಲದಲ್ಲೂ ಹೆಣ್ಣು ಮಕ್ಕಳನ್ನು ಗೌರವಿಸಿ ಅಂತ ಹೇಳೋದು ನಮ್ಮ ದೌರ್ಭಾಗ್ಯ: ಸಪ್ತಮಿ ಅಭಿಯಾನಕ್ಕೆ ಶಿವಣ್ಣ ಸಾಥ್​! Actor Shiva Rajkumar

ಈ ಕಾಲದಲ್ಲೂ ಹೆಣ್ಣು ಮಕ್ಕಳನ್ನು ಗೌರವಿಸಿ ಅಂತ ಹೇಳೋದು ನಮ್ಮ ದೌರ್ಭಾಗ್ಯ: ಸಪ್ತಮಿ ಅಭಿಯಾನಕ್ಕೆ ಶಿವಣ್ಣ ಸಾಥ್​! Actor Shiva Rajkumar
ಈ ಕಾಲದಲ್ಲೂ ಹೆಣ್ಣು ಮಕ್ಕಳನ್ನು ಗೌರವಿಸಿ ಅಂತ ಹೇಳೋದು ನಮ್ಮ ದೌರ್ಭಾಗ್ಯ: ಸಪ್ತಮಿ ಅಭಿಯಾನಕ್ಕೆ ಶಿವಣ್ಣ ಸಾಥ್​! Actor Shiva Rajkumar
Published on

ಪ್ರಮುಖ ಮುಖ್ಯಾಂಶಗಳು

  • ಪಾಪರಾಜಿ ಸಂಸ್ಕೃತಿಯ ವಿರುದ್ಧ ನಟಿ ಸಪ್ತಮಿ ಗೌಡ ಕೆಂಡ
  • ನಟಿಯರು ವಸ್ತುಗಳಲ್ಲ ಎಂದು ಅಭಿಯಾನ ಶುರು ಮಾಡಿದ ಕಾಂತಾರ ಬೆಡಗಿ
  • ಸಪ್ತಮಿ ಗೌಡ ಅಭಿಯಾನಕ್ಕೆ ಕೈಜೋಡಿಸಿದ ನಟ ಶಿವರಾಜ್​ಕುಮಾರ್​
Actor Shiva Rajkumar : ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರ ವೇಳೆ ಕದ್ದುಮುಚ್ಚಿ, ಅಸಭ್ಯ ಆಯಾಮದಲ್ಲಿ ಸೆರೆಹಿಡಿದ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ನಟಿ ಸಪ್ತಮಿ ಗೌಡ ಕಿಡಿಕಾರಿದ ಬೆನ್ನಲ್ಲೇ ಇತರ ನಾಯಕಿಯರು ಕೂಡ ಧ್ವನಿಗೂಡಿಸಿದ್ದಾರೆ. ಇದೀಗ ಧ್ವನಿಗೆ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​ ಧ್ವನಿಗೂಡಿಸಿದ್ದು, ಪಾಪರಾಜಿಗಳ ವಿರುದ್ಧದ ಅಭಿಯಾನಕ್ಕೆ ಒಂದು ಬಲ ಬಂದಿದೆ.
ಪಾಪರಾಜಿ ಸಂಸ್ಕೃತಿ ವಿರುದ್ಧ ನಟಿ ಸಪ್ತಮಿ ಗೌಡ ಧೈರ್ಯದಿಂದ ಧ್ವನಿ ಎತ್ತಿದ್ದಾರೆ. ‘ನಟಿಯರು ವಸ್ತುಗಳಲ್ಲ’ (ಆಕ್ಟರ್ಸ್ ನಾಟ್ ಆಬ್ಜೆಕ್ಟ್ಸ್) ಎಂಬ ಅಭಿಯಾನವನ್ನೂ ಶುರು ಮಾಡಿದ್ದಾರೆ. ಇದರಿಂದಾಗಿ ಈಗ ‘ಪಾಪರಾಜಿ’ಗಳ (ಫೋಟೋಗ್ರಾಫರ್​ಗಳು, ವಿಡಿಯೋಗ್ರಾಫರ್​ಗಳು) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಈ ಅಭಿಯಾನಕ್ಕೆ ನಟ ಶಿವಣ್ಣನು ಕೂಡ ಕೈಜೋಡಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ #ActorsNotObjects ಎಂಬ ಹ್ಯಾಸ್​ಟ್ಯಾಗ್​ ಅಡಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಶಿವಣ್ಣ, ಈ ಕಾಲದಲ್ಲೂ ಹೆಣ್ಣು ಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ. ದಯವಿಟ್ಟು ಆತ್ಮಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಿ. ಹೆಣ್ಣು ಮಕ್ಕಳು ಹಾಗೂ ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದು ಸಂದೇಶ ರವಾನಿಸಿದ್ದಾರೆ.
ಪಾಪರಾಜಿಗಳ ಬಗ್ಗೆ ಸಪ್ತಮಿ ಹೇಳಿದ್ದೇನು?
ಸಿನಿಮಾ ಈವೆಂಟ್ ಅಥವಾ ಶೂಟಿಂಗ್ ವೇಳೆ ಪ್ರಚಾರಕ್ಕಾಗಿ ಫೋಟೋಗ್ರಾಫರ್​ಗಳು ಮತ್ತು ಯೂಟ್ಯೂಬರ್​ಗಳನ್ನು ನಿರ್ಮಾಪಕರು/ನಿರ್ದೇಶಕರು ಕರೆಸುತ್ತಾರೆ. ನಟಿಯರು ಕಾರ್ ಇಳಿಯುವಾಗಿನಿಂದ ಹಿಡಿದು ವಾಪಸ್ ಮನೆಗೆ ಹೋಗುವವರೆಗಿನ ದೃಶ್ಯಗಳನ್ನು ಇವರು ಸೆರೆಹಿಡಿಯುತ್ತಾರೆ. ಅದರಲ್ಲಿ ಕೆಲವು ಅಸಭ್ಯ ಆ್ಯಂಗಲ್​ಗಳೂ ಇರುತ್ತವೆ. ಅದನ್ನೇ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುತ್ತಾರೆ. ಲಕ್ಷಾಂತರ ಜನ ನೋಡಿ ಲೈಕ್ ಒತ್ತುತ್ತಾರೆ. ಆ ಪೈಕಿ ಅರ್ಧದಷ್ಟು ಜನ ಸಿನಿಮಾ ನೋಡಿದರೂ ಆ ಸಿನಿಮಾ ಉದ್ಧಾರವಾಗಿಬಿಡುತ್ತದೆ. ಆದರೆ ಹಾಗಾಗುವುದಿಲ್ಲ. ಇದರಿಂದ ಸಿನಿಮಾಕ್ಕೇನು ಪ್ರಯೋಜನವಾದಂತಾಯಿತು? ಇಂತಹ ಪಾಪರಾಜಿಗಳನ್ನು ಸಿನಿಮಾತಂಡಗಳು ದೂರ ಇಡಬೇಕು. ಇಲ್ಲವೇ ಚಲನಚಿತ್ರ ವಾಣಿಜ್ಯ ಮಂಡಳಿಯವರು ಇದಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಎಂದಿದ್ದಾರೆ.

ಯಾರು ಈ ಪಾಪರಾಜಿಗಳು?

ಪಾಪರಾಜಿಗಳೆಂದರೆ ಪ್ರಸಿದ್ಧ ವ್ಯಕ್ತಿಗಳ ಫೋಟೋ/ವಿಡಿಯೋಗಳನ್ನು ಅವರ ಅನುಮತಿಯಿಲ್ಲದೆ, ರಹಸ್ಯವಾಗಿ ಅಥವಾ ಬೆನ್ನಟ್ಟಿ ತೆಗೆಯುವ ಸ್ವತಂತ್ರ ಛಾಯಾಗ್ರಾಹಕರು. ಇಟಾಲಿಯನ್ ಭಾಷೆಯ ಪಪರಾಜೋ (ಗುಂಯ್ ಎನ್ನುವ ಸೊಳ್ಳೆ) ಎಂಬ ಪದದಿಂದ ಈ ಹೆಸರು ಬಂದಿದೆ. ಇವರು ಯಾವುದೇ ಸುದ್ದಿಸಂಸ್ಥೆಯ ಕಾಯಂ ಉದ್ಯೋಗಿಗಳಲ್ಲ (ಕೆಲವರು ಕಾಯಂ ನೌಕರರೂ ಇರಬಹುದು); ಸೆಲೆಬ್ರಿಟಿಗಳ ಖಾಸಗಿ ಕ್ಷಣಗಳ ವಿಶಿಷ್ಟ ಫೋಟೋ, ವಿಡಿಯೋ ಚಿತ್ರೀಕರಿಸಿ ದೊಡ್ಡ ಮೊತ್ತಕ್ಕೆ ಮಾಧ್ಯಮ ಸಂಸ್ಥೆಗಳಿಗೆ ಅಥವಾ ವೆಬ್​ಸೈಟ್​ಗಳಿಗೆ ಮಾರುತ್ತಾರೆ. ವಿಮಾನ ನಿಲ್ದಾಣ, ಜಿಮ್ ಪಾರ್ಟಿಹಾಲ್​ಗಳ ಹೊರಗೆ ಗಂಟೆಗಟ್ಟಲೆ, ದಿನಗಟ್ಟಲೆ ಕಾಯುತ್ತಾರೆ. ಸೆಲೆಬ್ರಿಟಿಗಳ ಜೀವನದ ಎಕ್ಸ್ ಕ್ಲೂಸಿವ್ ಚಿತ್ರಗಳಿಗಾಗಿ ಸುರಕ್ಷತಾ ನಿಯಮಗಳನ್ನು ಮೀರಿ ವರ್ತಿಸುತ್ತಾರೆ. ಕೆಲವು ಸಲವಂತೂ ತಮ್ಮ ಜೀವವನ್ನೇ ಪಣಕ್ಕಿಟ್ಟಂತೆ ವರ್ತಿಸುತ್ತಾರೆ. ಇದು ವಿವಾದಕ್ಕೆ, ಸಂಘರ್ಷಕ್ಕೆ ಕಾರಣವಾಗಿದ್ದೂ ಇದೆ. ದೆಹಲಿ, ಮುಂಬೈನಂತಹ ನಗರಗಳಲ್ಲಿ ಇವರ ಹಾವಳಿ ಇತ್ತೀಚೆಗೆ ಜಾಸ್ತಿಯಾಗಿದೆ.
ನಟಿ ಸಪ್ತಮಿ ಗೌಡ ಅವರ ಅಭಿಯಾನಕ್ಕೆ ನಟಿ ರುಕ್ಮಿಣಿ ವಸಂತ್ ಹಾಗೂ ಆಶಿಕಾ ರಂಗನಾಥ್​​ ಸೇರಿದಂತೆ ಸ್ಯಾಂಡಲ್​ವುಡ್​ನ ಅನೇಕ ಕಲಾವಿದರು ಕೈ ಜೋಡಿಸಿದ್ದು, ಪಾಪರಾಜಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net