ಮದುವೆ ವೇಳೆ ಬೆಳ್ಳಿ ಕಾಲುಂಗುರ, ಕಾಲ್ಗೆಜ್ಜೆ ಧರಿಸಿದ್ದೇಕೆ ಆಮೀರ್​ ಖಾನ್​? ಭಾರಿ ಚರ್ಚೆಗೀಡಾದ ಮಿಸ್ಟರ್ ಪರ್ಫೆಕ್ಟ್‌ ವಿವಾಹ! Aamir Khan

ಮದುವೆ ವೇಳೆ ಬೆಳ್ಳಿ ಕಾಲುಂಗುರ, ಕಾಲ್ಗೆಜ್ಜೆ ಧರಿಸಿದ್ದೇಕೆ ಆಮೀರ್​ ಖಾನ್​? ಭಾರಿ ಚರ್ಚೆಗೀಡಾದ ಮಿಸ್ಟರ್ ಪರ್ಫೆಕ್ಟ್‌ ವಿವಾಹ! Aamir Khan
ಮದುವೆ ವೇಳೆ ಬೆಳ್ಳಿ ಕಾಲುಂಗುರ, ಕಾಲ್ಗೆಜ್ಜೆ ಧರಿಸಿದ್ದೇಕೆ ಆಮೀರ್​ ಖಾನ್​? ಭಾರಿ ಚರ್ಚೆಗೀಡಾದ ಮಿಸ್ಟರ್ ಪರ್ಫೆಕ್ಟ್‌ ವಿವಾಹ! Aamir Khan
Published on

ಪ್ರಮುಖ ಮುಖ್ಯಾಂಶಗಳು

  • ಆಮೀರ್ ಖಾನ್ ಮದುವೆ ಲುಕ್ ಸಖತ್ ವೈರಲ್
  • ಈ ಬಾರಿ ಕಾಲಿಗೆ ಭಾರಿ ಬೆಳ್ಳಿ ಸರ ಧರಿಸಿದ ಆಮೀರ್
  • ಮುಂಬೈ ನಿವಾಸದಲ್ಲಿ ಆಮೀರ್ ಖಾನ್-ಗೌರಿ ಸ್ಪ್ರ್ಯಾಟ್ ಸರಳ ವಿವಾಹ
  • ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಮೀರ್ ಖಾ
ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ( Aamir Khan ) ಮತ್ತು ಗೌರಿ ಸ್ಪ್ರ್ಯಾಟ್ ( Gauri Spratt ) ಜುಲೈ 5 ರಂದು ಮುಂಬೈನ ತಮ್ಮ ನಿವಾಸದಲ್ಲಿ ಅತ್ಯಂತ ಸರಳ ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಕ್ಷಣಕ್ಕಾಗಿ ನವಜೋಡಿ ಧರಿಸಿದ್ದ ಸುಂದರ ಹಾಗೂ ಸಾಂಪ್ರದಾಯಿಕ ಉಡುಪುಗಳು ಎಲ್ಲರ ಗಮನ ಸೆಳೆದವು. ಅದರಲ್ಲೂ ವಿಶೇಷವಾಗಿ ಆಮೀರ್ ಖಾನ್ ಅವರ ಅಪರೂಪದ ಜ್ಯುವೆಲ್ಲರಿ ಸ್ಟೈಲ್ ನೆಟ್ಟಿಗರ ಗಮನ ಸೆಳೆಯಿತು.
ಹೌದು, ಈ ಬಾರಿ ಯಾವುದೇ ಕಿವಿಯೋಲೆ, ಸರ ಅಥವಾ ಮೂಗುತಿಯಲ್ಲ, ಬದಲಿಗೆ ತಮ್ಮ ಧೋತಿ ಲುಕ್ ಜೊತೆಗೆ ಅವರು ಕಾಲಿಗೆ ಧರಿಸಿದ್ದ ಭಾರವಾದ ಬೆಳ್ಳಿಯ ಕಾಲುಂಗುರ ಅಥವಾ ಕಾಲಿನ ಸರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
61 ವರ್ಷದ ನವ ವರ ಆಮೀರ್ ಖಾನ್ ತಮ್ಮ ಸಾಂಪ್ರದಾಯಿಕ ಧೋತಿ ಶೈಲಿಯನ್ನು ಈ ಮದುವೆಯಲ್ಲೂ ಮುಂದುವರಿಸಿದ್ದರು. ಕ್ಲಾಸಿಕ್ ಬಿಳಿ ಬಣ್ಣದ ಧೋತಿಯ ಜೊತೆಗೆ ಸರಳ ಕುರ್ತಾ ಧರಿಸಿದ್ದ ಅವರು, ಅದಕ್ಕೆ ಆಕರ್ಷಕ ಬ್ರೋಚ್ ಧರಿಸಿ ಮಿಂಚಿದರು. ಆದರೆ, ಈ ಎಲ್ಲದರ ನಡುವೆ ಅವರು ಕಾಲಿಗೆ ಧರಿಸಿದ್ದ ಬೆಳ್ಳಿಯ ಭಾರಿ ಕಾಲುಂಗುರ ಅಥವಾ ಕಾಲಿನ ಸರವೇ ಇಡೀ ಮದುವೆಯ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನ ಕವರಿಯಿತು.
ಮತ್ತೊಂದೆಡೆ ವಧು ಗೌರಿ ಸ್ಪ್ರ್ಯಾಟ್ ಹೆವಿ ಚೋಕರ್, ಸಾಂಪ್ರದಾಯಿಕ ಲೇಯರ್ಡ್ ನೆಕ್ಲೇಸ್ ಮತ್ತು ಅದಕ್ಕೆ ಹೊಂದುವ ಕಿವಿಯೋಲೆಗಳೊಂದಿಗೆ ಅತ್ಯಂತ ಸುಂದರವಾಗಿ ಕಂಗೊಳಿಸಿದರು. ಬೇಬಿ ಬ್ರೆತ್ ಹೂವುಗಳಿಂದ ಅಲಂಕರಿಸಲ್ಪಟ್ಟ ಜಡೆ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.
ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರ ಈ ಆಪ್ತ ವಿವಾಹ ಮಹೋತ್ಸವದಲ್ಲಿ ಕೇವಲ 150 ಕ್ಕೂ ಹೆಚ್ಚು ಗಣ್ಯರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಈ ಸಂಭ್ರಮಕ್ಕೆ ಆಮೀರ್ ಖಾನ್ ಅವರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಸಾಕ್ಷಿಯಾದರೆ, ಗೌರಿ ಅವರ ಪುತ್ರ ಕೂಡ ವಿವಾಹದ ವಿಧಿವಿಧಾನಗಳಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿದ್ದನು. ಚಿತ್ರರಂಗ, ರಾಜಕೀಯ ಮತ್ತು ಉದ್ಯಮ ರಂಗದ ಪ್ರಮುಖ ಗಣ್ಯರಾದ ಮುಕೇಶ್ ಅಂಬಾನಿ, ರಾಜ್ ಠಾಕ್ರೆ, ಅಶುತೋಷ್ ಗೋವಾರಿಕರ್ ಮತ್ತು ವೀರ್ ದಾಸ್ ಸೇರಿದಂತೆ ಹಲವರು ಈ ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಹರಸಿದರು.
ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರ ಪರಿಚಯ ಇಂದಿನದಲ್ಲ, ಬರೋಬ್ಬರಿ 25 ವರ್ಷಗಳಷ್ಟು ಹಳೆಯದು! ಆದರೆ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿ, ಡೇಟಿಂಗ್ ಆರಂಭವಾಗಿದ್ದು ಮಾತ್ರ ಕೇವಲ ಎರಡು ವರ್ಷಗಳ ಹಿಂದೆಯಷ್ಟೇ. ಹಳೆಯ ಸ್ನೇಹವು ಕಾಲಕ್ರಮೇಣ ಗಟ್ಟಿಯಾದ ಪ್ರೇಮವಾಗಿ ಬದಲಾಗಿ, ಈಗ ಮುಂಬೈನ ಬಾಂದ್ರಾದಲ್ಲಿರುವ ಆಮೀರ್ ಖಾನ್ ನಿವಾಸದಲ್ಲಿ ರಿಜಿಸ್ಟರ್ ಮದುವೆಯ ಮೂಲಕ ಇಬ್ಬರೂ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಮೀರ್ ಖಾನ್ ಅವರಿಗೆ ಇದು ಮೂರನೇ ವಿವಾಹವಾಗಿದೆ. ಈ ಹಿಂದೆ ಅವರು ನಿರ್ಮಾಪಕಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು, ಈ ದಂಪತಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ತದನಂತರ 2005ರಲ್ಲಿ ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರನ್ನು ಕೈಹಿಡಿದ ಅಮೀರ್, 2021ರಲ್ಲಿ ಅವರಿಂದ ಬೇರ್ಪಟ್ಟರು. ಆದಾಗ್ಯೂ, ಇಬ್ಬರೂ ತಮ್ಮ ಮಗ ಆಜಾದ್‌ನ ಪೋಷಣೆಯನ್ನು ಜಂಟಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ವಧು ಗೌರಿ ಸ್ಪ್ರ್ಯಾಟ್ ಅವರಿಗೂ ಇದು ಎರಡನೇ ಮದುವೆಯಾಗಿದ್ದು, ಅವರ ಮೊದಲ ವಿವಾಹದಿಂದ ಏಳು ವರ್ಷದ ಒಬ್ಬ ಮಗನಿದ್ದಾನೆ. ಸದ್ಯ ಈ ಇಬ್ಬರೂ ತಮ್ಮ ಹಳೆಯ ಕಹಿ ನೆನಪುಗಳನ್ನು ಮರೆತು ಹೊಸ ಜೀವನದ ಸುಂದರ ಅಧ್ಯಾಯವನ್ನು ಆರಂಭಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net