ಸೂಪರ್​ ಹಿಟ್​ ಗಾಡ್ಜಿಲ್ಲಾ ವರ್ಸಸ್ ಕಾಂಗ್ ಸಿನಿಮಾ ಖ್ಯಾತಿಯ ಬಾಲನಟಿ ಕೈಲಿ ಹಾಟಲ್ 18ನೇ ವಯಸ್ಸಿಗೆ ದುರಂತ ಸಾವು! Kaylee Hottle

ಸೂಪರ್​ ಹಿಟ್​ ಗಾಡ್ಜಿಲ್ಲಾ ವರ್ಸಸ್ ಕಾಂಗ್ ಸಿನಿಮಾ ಖ್ಯಾತಿಯ ಬಾಲನಟಿ ಕೈಲಿ ಹಾಟಲ್ 18ನೇ ವಯಸ್ಸಿಗೆ ದುರಂತ ಸಾವು! Kaylee Hottle
ಸೂಪರ್​ ಹಿಟ್​ ಗಾಡ್ಜಿಲ್ಲಾ ವರ್ಸಸ್ ಕಾಂಗ್ ಸಿನಿಮಾ ಖ್ಯಾತಿಯ ಬಾಲನಟಿ ಕೈಲಿ ಹಾಟಲ್ 18ನೇ ವಯಸ್ಸಿಗೆ ದುರಂತ ಸಾವು! Kaylee Hottle
Published on

ಪ್ರಮುಖ ಮುಖ್ಯಾಂಶಗಳು

  • ಭೀಕರ ಕಾರು ಅಪಘಾತದಲ್ಲಿ ಗಾಡ್ಜಿಲ್ಲಾ ವರ್ಸಸ್ ಕಾಂಗ್ ಸಿನಿಮಾ ನಟಿ ಕೈಲಿ ಹಾಟಲ್ ಸಾವು
  • ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 18 ವರ್ಷದ ಹಾಲಿವುಡ್ ನಟಿ ಕೈಲಿ ಹಾಟಲ್ ನಿಧನ
  • ಫೇಸ್ ಬುಕ್ ಲೈವ್ ನಲ್ಲಿ ಮಗಳ ಸಾವಿನ ಸುದ್ದಿ ಹಂಚಿಕೊಂಡ ತಂದೆ ಜೋಶುವಾ ಹಾಟಲ್
  • ತೀವ್ರ ವೇಗವೇ ಅಪಘಾತಕ್ಕೆ ಕಾರಣ ಎಂದ ಮೇರಿಲ್ಯಾಂಡ್ ಶರೀಫ್ ಕಚೇರಿಯ ತನಿಖಾಧಿಕಾರಿಗಳು
Kaylee Hottle : ಸೂಪರ್​ ಹಿಟ್​ ಗಾಡ್ಜಿಲ್ಲಾ ವರ್ಸಸ್ ಕಾಂಗ್ (2021) ಸಿನಿಮಾದಲ್ಲಿ ಕಾಂಗ್ ಜೊತೆ ಸೈನ್ ಲ್ಯಾಂಗ್ವೇಜ್ (ಸಂಕೇತ ಭಾಷೆ) ಮೂಲಕ ವಿಶೇಷ ಬಾಂಧವ್ಯ ಹೊಂದಿದ್ದ ಮೂಕ ಹುಡುಗಿಯ ಪಾತ್ರದಲ್ಲಿ ನಟಿಸಿ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಯುವ ನಟಿ ಕೈಲಿ ಹಾಟಲ್ (18), ಮಂಗಳವಾರ ರಾತ್ರಿ ಅಮೆರಿಕದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ.
ಅಧಿಕಾರಿಗಳ ಮಾಹಿತಿಯ ಪ್ರಕಾರ, ಶ್ರವಣದೋಷ ಹೊಂದಿದ್ದ ನಟಿ ಕೈಲಿ ಹಾಟಲ್ ಅವರು ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದ ವೇಳೆ ಕಾರಿನಲ್ಲಿದ್ದಂತಹ ಪ್ರಯಾಣಿಕರಲ್ಲಿ ಒಬ್ಬರಾಗಿದ್ದರು. 19 ವರ್ಷದ ಯುವಕ ಚಲಾಯಿಸುತ್ತಿದ್ದ ಹೊಂಡಾ ಅಕಾರ್ಡ್ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯ ಚರಂಡಿಯ ಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಕಾರು ತೀವ್ರ ವೇಗದಲ್ಲಿದ್ದದ್ದೇ ಈ ದುರಂತಕ್ಕೆ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದು, ಅಪಘಾತದ ತೀವ್ರತೆಗೆ ಚಾಲಕ ಒಳಗಡೆಯೇ ಸಿಲುಕಿಕೊಂಡಿದ್ದನು. ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಕೈಲಿ ಹಾಟಲ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಚಾಲಕನಿಗೆ ಪ್ರಾಣಾಪಾಯವಿಲ್ಲದ ಗಾಯಗಳಾಗಿವೆ.
ಕೈಲಿ ಹಾಟಲ್ ಅವರ ಹಠಾತ್ ನಿಧನದ ದುಃಖದ ಸುದ್ದಿಯನ್ನು ಮೊದಲಿಗೆ ಅವರ ತಂದೆ ಜೋಶುವಾ ಹಾಟಲ್ ಅವರು ಫೇಸ್‌ಬುಕ್ ಲೈವ್ ಮೂಲಕ ಹಂಚಿಕೊಂಡರು. ನಂತರ ಆಸ್ಟಿನ್‌ನಲ್ಲಿರುವ 'ಟೆಕ್ಸಾಸ್ ಸ್ಕೂಲ್ ಫಾರ್ ದಿ ಡೆಫ್' ಈ ವಿಷಯವನ್ನು ಅಧಿಕೃತವಾಗಿ ದೃಢಪಡಿಸಿದೆ. ಯುವ ನಟಿಯ ಅಗಲಿಕೆಗೆ ಸಂತಾಪ ಸೂಚಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ 'ಟೆಕ್ಸಾಸ್ ಸ್ಕೂಲ್ ಫಾರ್ ದಿ ಡೆಫ್' ಸಂಸ್ಥೆಯು, "ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿನಿ ಕೈಲಿ ಹಾಟಲ್ ಅವರು ಮೇರಿಲ್ಯಾಂಡ್‌ನ ಫ್ರೆಡೆರಿಕ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದುರಂತವಾಗಿ ಕೊನೆಯುಸಿರೆಳೆದಿದ್ದಾರೆ ಎಂಬ ಹೃದಯವಿದ್ರಾವಕ ಸುದ್ದಿಯನ್ನು ಹಂಚಿಕೊಳ್ಳಲು ತೀವ್ರ ವಿಷಾದವಾಗುತ್ತಿದೆ. ಈ ಅತ್ಯಂತ ಕಷ್ಟದ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಕೈಲಿ ಕುಟುಂಬ, ಸ್ನೇಹಿತರು ಮತ್ತು ಅವರ ಸಹಪಾಠಿಗಳ ಜೊತೆಗಿವೆ. ಪ್ರಸ್ತುತ ನಮಗೆ ಅತ್ಯಂತ ಸೀಮಿತ ಮಾಹಿತಿ ಮಾತ್ರ ಲಭ್ಯವಿದ್ದು, ಈ ಸಮಯದಲ್ಲಿ ಅವರ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕಾಗಿ ವಿನಂತಿಸುತ್ತೇವೆ ಎಂದು ಭಾವನಾತ್ಮಕವಾಗಿ ತಿಳಿಸಿದೆ.
ಇನ್ನೂ ಮೇರಿಲ್ಯಾಂಡ್‌ನ ಫ್ರೆಡೆರಿಕ್ ಕೌಂಟಿ ಶರೀಫ್ ಕಚೇರಿಯ ವರದಿಯ ಪ್ರಕಾರ, ಐಜಮ್ಸ್‌ವಿಲ್‌ನ ವಿಂಡ್ಸರ್‌ ರಸ್ತೆಯಲ್ಲಿ ತಡರಾತ್ರಿ 2.52 ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಂದಹಾಗೆ, 2007 ರಲ್ಲಿ ಜನಿಸಿದ ಕೈಲಿ ಹಾಟಲ್ ಅವರು ಜಾಹೀರಾತುಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಕಾನ್ವೋ ವಿಡಿಯೋ ರಿಲೇ ಸರ್ವಿಸ್' ಆ್ಯಪ್‌ನ ಜಾಹೀರಾತಿನಲ್ಲಿ ನಟಿಸಿದ್ದ ಅವರ ಪ್ರತಿಭೆಯನ್ನು ಗಮನಿಸಿದ ಪ್ರಸಿದ್ಧ ಕ್ಯಾಸ್ಟಿಂಗ್ ಡೈರೆಕ್ಟರ್ ಸಾರಾ ಹ್ಯಾಲಿ ಫಿನ್, ಗಾಡ್ಜಿಲ್ಲಾ ಸರಣಿಯ ಸಿನಿಮಾಗಳಲ್ಲಿ 'ಜಿಯಾ' ಪಾತ್ರ ಸಿಗುವಂತೆ ಮಾಡಿದರು. 2024 ರಲ್ಲಿ 'ಕ್ರಾನ್' ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹಂಚಿಕೊಂಡಿದ್ದ ಕೈಲಿ, "ಪಾತ್ರಕ್ಕೆ ನಾನು ಸೂಕ್ತವಾಗಿದ್ದೆ ಎಂಬ ಕಾರಣಕ್ಕೆ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದ್ದರು. ಅವರು ಪ್ರತಿ ದೃಶ್ಯವನ್ನು ನನಗೆ ವಿವರಿಸಿದರೆ, ನನ್ನ ಹೆತ್ತವರು ಚಿತ್ರಕಥೆಯನ್ನು ಅರ್ಥಮಾಡಿಕೊಳ್ಳಲು ನೆರವಾದರು ಎಂದು ತಿಳಿಸಿದ್ದರು.
2021 ರ ಪ್ರಸಿದ್ಧ 'ಗಾಡ್ಜಿಲ್ಲಾ ವರ್ಸಸ್ ಕಾಂಗ್' ಚಿತ್ರದ ಜೊತೆಗೆ ಕೈಲಿ ಹಾಟಲ್ ಅವರು 2024 ರಲ್ಲಿ ತೆರೆಕಂಡ 'ಗಾಡ್ಜಿಲ್ಲಾ x ಕಾಂಗ್: ದಿ ನ್ಯೂ ಎಂಪೈರ್' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಹೊರತಾಗಿ, ಅವರು ಪ್ರೈಮ್ ವಿಡಿಯೋದ ಜನಪ್ರಿಯ 'ಮ್ಯಾಗ್ನಮ್ ಪಿ.ಐ.' (Magnum P.I.) ವೆಬ್ ಸರಣಿಯಲ್ಲೂ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net