ಆ ರಾತ್ರಿ... 'ಧುರಂಧರ್​' ಕೇವಲ ಕಥೆಯಷ್ಟೇ ಅಲ್ಲ! ಇದು ನನ್ನ ಸೇಡಿನ ಸಿನಿಮಾ: ನಟ ಅರ್ಜುನ್ ರಾಂಪಾಲ್​ ಭಾವುಕ

ಧುರಂಧರ್ ಚಿತ್ರದ ನಟ ಅರ್ಜುನ್ ರಾಂಪಾಲ್
ಧುರಂಧರ್ ಚಿತ್ರದ ನಟ ಅರ್ಜುನ್ ರಾಂಪಾಲ್
Published on

ಪ್ರಮುಖ ಮುಖ್ಯಾಂಶಗಳು

  • ಮಾ.19ರಂದು ಜಾಗತಿಕವಾಗಿ ತೆರೆಕಂಡ 'ಧುರಂಧರ್ 2'
  • ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ಸಿನಿಮಾ
  • 2008ರ ಮುಂಬೈ ದಾಳಿ ನೆನೆದ ನಟ ಅರ್ಜುನ್ ರಾಂಪಾಲ್​
  • ಧುರಂಧರ್​ ನನ್ನ ಸೇಡಿನ ಸಿನಿಮಾ ಎಂದ ನಟ
ಬೆಂಗಳೂರು: ಕಳೆದ ವಾರ ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ಸ್ಪೈ-ಥ್ರಿಲ್ಲರ್ 'ಧುರಂಧರ್ 2' (Dhurandhar 2) ಇದೀಗ ಬ್ಲಾಕ್​ಬಸ್ಟರ್​ ​ಹಿಟ್​ ಸಾಲಿಗೆ ಸೇರ್ಪಡೆಗೊಂಡಿದೆ. ಕೇವಲ ಬಾಕ್ಸ್ ಆಫೀಸ್​ನಲ್ಲಿ ಮಾತ್ರ ಅಬ್ಬರಿಸದ ರಣವೀರ್ ಚಿತ್ರ, ಸಿನಿಪ್ರಿಯರ ಕುತೂಹಲವನ್ನು ಭಾಗ 1ಕ್ಕಿಂತ 2ರಲ್ಲಿ ದುಪ್ಪಟ್ಟಾಗಿಸಿದೆ. ರಿಲೀಸ್ ಆದ ನಾಲ್ಕೇ ದಿನಕ್ಕೆ 'ರಿವೆಂಜ್'​ ಕಥೆಯನ್ನೊಳಗೊಂಡ ಈ ಸಿನಿಮಾ ವಿಶ್ವಾದ್ಯಂತ 500 ಕೋಟಿ ರೂ. ಕ್ಲಬ್ ಸೇರಿದೆ. ಇದು ಚಿತ್ರತಂಡಕ್ಕೆ ಅತಿದೊಡ್ಡ ಯಶಸ್ಸನ್ನು ತಂದೊಟ್ಟಿದೆ.
ಈಗಾಗಲೇ ಸಿನಿಮಾ ನೋಡಿರುವ ಪ್ರೇಕ್ಷಕರು ಚಿತ್ರತಂಡದ ಶ್ರಮಕ್ಕೆ, ತೋರಿಸುವ ರೀತಿಗೆ ಮೆಚ್ಚುಗೆ, ಪ್ರಶಂಸೆ ಮತ್ತು ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ, ನಟ ರಣವೀರ್ ಸಿಂಗ್​ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿರುವುದು ಚಿತ್ರದ ಗೆಲುವಿಗೆ ದೊಡ್ಡ ಪ್ಲಸ್​ ಪಾಯಿಂಟ್​ ಆಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೇವಲ ರಣವೀರ್ ಪಾತ್ರ ಮಾತ್ರವಲ್ಲ, ಅವರೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅಕ್ಷಯ್ ಖನ್ನಾ, ಸಾರಾ ಅರ್ಜುನ್​ ಮತ್ತು ಅರ್ಜುನ್ ರಾಂಪಾಲ್​ ಕೂಡ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಧುರಂಧರ್​ 2 ಭರ್ಜರಿ ಯಶಸ್ಸಿನ ಬೆನ್ನಲ್ಲೇ ತಮ್ಮ ಹಳೆಯ ಸೇಡಿನ ಬಗ್ಗೆ ತುಟಿಬಿಚ್ಚಿದ ನಟ ಅರ್ಜುನ್ ರಾಂಪಾಲ್​, ಈ ಚಿತ್ರ ನನ್ನ ದ್ವೇಷದ ಕಿಚ್ಚನ್ನು ತೀರಿಸಿಕೊಳ್ಳಲು ತುಂಬ ಸಹಾಯ ಮಾಡಿತು. ಅದಕ್ಕಾಗಿ, ನಮ್ಮ ನಿರ್ದೇಶಕ ಆದಿತ್ಯ ಧರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. 2008ರಲ್ಲಿ ಪಾಕಿಸ್ತಾನ ಉಗ್ರರು ಮುಂಬೈನ ತಾಜ್​ ಹೋಟೆಲ್​ ಮೇಲೆ ನಡೆಸಿದ ದಾಳಿ ನನ್ನನ್ನು ಮಾನಸಿಕ ಖಿನ್ನತೆಗೆ ದೂಡಿತ್ತು. ಕಾರಣ, ಅಂದು ಆ ದುರಂತ ಸಂಭವಿಸಿದ ನಾನೂ ಅಲ್ಲಿಯೇ ಇದ್ದೆ ಎಂದಿದ್ದಾರೆ.
ಆ ದುರಂತ ಸಂಭವಿಸಿದ ದಿನವೇ ನನ್ನ ಜನ್ಮದಿನ. ಹಾಗಾಗಿ, ಈಗಲೂ ಘಟನೆ ದುಃಖ ಕೊಡುತ್ತೆ. ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆ ಆಚರಿಸಿಕೊಳ್ಳಲು ತಾಜ್​ ಹೋಟೆಲ್​ ಬುಕ್ ಮಾಡಿದ್ದೆ. ಘಟನೆಯ ಹಿಂದಿನ ದಿನ ಅಲ್ಲಿಯೇ ಉಳಿದುಕೊಂಡಿದ್ದೆ. ನನ್ನನ್ನು ಭೇಟಿಯಾಗಲು ಬಂದ ಸ್ನೇಹಿತರನ್ನು ಕರೆದುಕೊಂಡು ಬರಲು ಹೊರಗೆ ಹೋಗಿದ್ದೆ. ನಮ್ಮ ಪುಣ್ಯ, ಅವತ್ತು ನಾವೆಲ್ಲ ಬಾರ್​ನಲ್ಲಿ ಇದ್ದೆವು. ಆರ್ಡರ್​ ಮಾಡಿದ ಕೆಲವೇ ಹೊತ್ತಲ್ಲಿ ಮೊದಲ ಬಾಂಬ್​ ಮಹೀಮ್​ ಸಮೀಪದಲ್ಲಿ ಬ್ಲಾಸ್ಟ್​ ಆಯಿತು. ಜೋರು ಶಬ್ದ ಕೇಳಿ ಒಂದು ನಿಮಿಷ ಮೈಕಂಪಿಸಿತು. ಏನಾಯಿತು ಎಂದು ಗಾಬರಿಗೊಂಡೆವು ಎಂದರು.
ಆರಂಭದಲ್ಲಿ ಇದೊಂದು ಗ್ಯಾಂಗ್ ವಾರ್‌ ಎಂದು ಹಲವರು ಹೇಳಿದರು. ಘಟನೆಯ 10 ನಿಮಿಷಗಳಲ್ಲಿ, ನಮ್ಮ ಫೋನ್‌ಗಳು ಅಲರ್ಟ್​ ಆದವು. ಕೊಲಾಬಾದಲ್ಲಿ ಯಾವುದೋ ಗ್ಯಾಂಗ್ ವಾರ್ ಭುಗಿಲೆದ್ದಿದೆ ಎಂಬ ಸಂದೇಶ ಬಂದಿತು. ನನ್ನ ಹುಟ್ಟುಹಬ್ಬದಂದೇ 26/11 ಭೀಕರ ದಾಳಿಯನ್ನು ನಾನು ನೋಡಿದೆ. ಘಟನೆಯ ಮರುದಿನ ಬೆಳಗ್ಗೆ ನಾನು ಮನೆಗೆ ಹಿಂತಿರುಗುವಾಗ, ನನ್ನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಯಾವಾಗ ನಿರ್ದೇಶಕರು ಚಿತ್ರದಲ್ಲಿ 26/11 ದೃಶ್ಯವನ್ನು ನನಗೆ ವಿವರಿಸಿದರೋ, ಆಗಲೇ ಅಂದುಕೊಂಡೆ ಇದು ನನ್ನ ಸೇಡಿನ ಸಮಯ ಎಂದು. 'ಧುರಂಧರ್'ನಲ್ಲಿ ನಾನು ಮಾಡಿದ್ದು ಅದನ್ನೇ. ಇಲ್ಲಿ ಹೇಳಲು ಬಯಸುವುದು ಒಂದೇ 'ಭಾರತ್ ಮಾತಾ ಕಿ ಜೈ' ಎಂದು ಭಾವುಕರಾದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net