ನಟರಿಗೆ ನೋಟು; ನಟಿಯರಿಗೆ ಚಿಲ್ಲರೆ: ಸಂಭಾವನೆಯಲ್ಲಿ ಏಕೆ ತಾರತಮ್ಯ? ಬಾಲಿವುಡ್​ ಅಘೋಷಿತ ನಿಯಮಗಳ ಬಗ್ಗೆ ಕೃತಿ ಸನೋನ್ ಓಪನ್​ ಟಾಕ್​! Kriti Sanon on Bollywood Pay Gap

ಬಾಲಿವುಡ್​ನ ಸಂಭಾವನೆ ತಾರತಮ್ಯದ ಬಗ್ಗೆ ನಟಿ ಕೃತಿ ಸನೋನ್​ ಓಪನ್​ ಟಾಕ್​
ಬಾಲಿವುಡ್​ನ ಸಂಭಾವನೆ ತಾರತಮ್ಯದ ಬಗ್ಗೆ ನಟಿ ಕೃತಿ ಸನೋನ್​ ಓಪನ್​ ಟಾಕ್​
Published on
ಮುಂಬೈ: ಬಾಲಿವುಡ್ ಅಂದಾಕ್ಷಣ ನಮಗೆ ನೆನಪಾಗುವುದು ಅಲ್ಲಿನ ಗ್ಲಾಮರ್, ಬಣ್ಣದ ಲೋಕ ಮತ್ತು ಕೋಟಿ ಕೋಟಿ ರೂಪಾಯಿ ವ್ಯವಹಾರ. ಆದರೆ ಈ ಹೊಳೆಯುವ ಪರದೆಯ ಹಿಂದೆ ನಟಿಯರು ಅನುಭವಿಸುವ ತಾರತಮ್ಯದ ಕಥೆ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ.
ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ (Kriti Sanon on Bollywood Pay Gap) ಬಾಲಿವುಡ್‌ನಲ್ಲಿನ ಸಂಭಾವನೆ ಅಸಮಾನತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬಜೆಟ್ ಕಡಿಮೆ ಮಾಡಬೇಕೆಂದಾಗ ಮೊದಲು ಕತ್ತರಿ ಬೀಳುವುದು ನಟಿಯರ ಸಂಭಾವನೆಗೇ ಹೊರತು ಹೀರೋಗಳಿಗಲ್ಲ ಎಂದು ಕೃತಿ ಆಕ್ರೋಶ ಹೊರಹಾಕಿದ್ದಾರೆ.

ಬಜೆಟ್ ಟೈಟ್ ಆದ್ರೆ ನಟಿಯರೇ ಬಲಿಪಶು!

ಖಾಸಗಿ ಮ್ಯಾಗಜೀನ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೃತಿ ಸನೋನ್, ಚಿತ್ರರಂಗದ ಪಿತೃಪ್ರಭುತ್ವ(ಪುರುಷ ಪ್ರಧಾನ) ದ ಮುಖವಾಡವನ್ನು ಕಳಚಿದ್ದಾರೆ. ಸಿನಿಮಾದ ಬಜೆಟ್ ಬಿಗಿಯಾದಾಗ ನಿರ್ಮಾಪಕರು ಮೊದಲು ಬಂದು ಕೇಳುವುದು ಮಹಿಳಾ ನಟಿಯರನ್ನು. ನಿಮ್ಮ ಫೀಸ್ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಎಂದು ನಮಗೆ ಹೇಳುತ್ತಾರೆ. ಆದರೆ ಅದೇ ಸಿನಿಮಾದ ಬಜೆಟ್‌ನಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ಪುರುಷ ನಟನ ಜೇಬಿಗೆ ಹೋಗುತ್ತಿರುತ್ತದೆ. ಈ ಅಸಮತೋಲನ ಯಾಕೆ? ಎಂದು ಕೃತಿ ಪ್ರಶ್ನಿಸಿದ್ದಾರೆ.
ಶೂಟಿಂಗ್ ಸೆಟ್‌ನಲ್ಲೂ ತಾರತಮ್ಯದ ವಾಸನೆ
ಕೇವಲ ಹಣದ ವಿಷಯದಲ್ಲಿ ಮಾತ್ರವಲ್ಲ, ಶೂಟಿಂಗ್ ಸೆಟ್‌ನಲ್ಲೂ ನಟಿಯರನ್ನು ನಡೆಸಿಕೊಳ್ಳುವ ರೀತಿ ಬೇರೆ ಇರುತ್ತದೆ ಎಂದು ಕೃತಿ ಬೇಸರ ವ್ಯಕ್ತಪಡಿಸಿದ್ದಾರೆ. ಸೆಟ್‌ನಲ್ಲಿ ಹೀರೋ ಕಾಯಬಾರದು ಎನ್ನುವ ಕಾರಣಕ್ಕೆ ನಟಿಯರನ್ನು ಮೊದಲೇ ಸಿದ್ಧವಾಗಿರಲು ಒತ್ತಾಯಿಸಲಾಗುತ್ತದೆ. ಇದು ಸಣ್ಣ ವಿಷಯ ಎನಿಸಬಹುದು, ಆದರೆ ಇದು ಉದ್ಯಮದಲ್ಲಿ ಬೇರೂರಿರುವ ಲಿಂಗ ತಾರತಮ್ಯವನ್ನು ತೋರಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಆರಂಭದ ದಿನಗಳ ನೋವು

ತೆಲುಗಿನ 1: ನೆನೊಕ್ಕಡಿನೆ ಮತ್ತು ಬಾಲಿವುಡ್‌ನ ಹೀರೋಪಂತಿ ಮೂಲಕ ಕೆರಿಯರ್ ಶುರು ಮಾಡಿದ ಕೃತಿ, ತಮಗೆ ಆದ ಅವಮಾನವೊಂದನ್ನು ನೆನಪಿಸಿಕೊಂಡಿದ್ದಾರೆ. ಆರಂಭದ ದಿನಗಳಲ್ಲಿ ತಮ್ಮಷ್ಟೇ ಸಮಾನ ಸ್ಥಾನದಲ್ಲಿದ್ದ ಪುರುಷ ನಟನಿಗೆ ತಮಗಿಂತ ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಇಲ್ಲಿ ವಿಷಯ ಕಾರು ಅಥವಾ ಹೋಟೆಲ್ ರೂಮಿನ ಬಗ್ಗೆ ಅಲ್ಲ, ಬದಲಿಗೆ ನಮಗೆ ಸಿಗಬೇಕಾದ ಗೌರವದ ಬಗ್ಗೆ. ಆರಂಭದಲ್ಲಿ ಧ್ವನಿ ಎತ್ತುವುದು ಕಷ್ಟವಿತ್ತು, ಆದರೆ ಈಗ ನಾನು ನನ್ನ ಹಕ್ಕಿಗಾಗಿ ಮಾತನಾಡುತ್ತಿದ್ದೇನೆ ಎಂದಿದ್ದಾರೆ.

ಜೂನ್ 19ಕ್ಕೆ ಬರ್ತಿದೆ 'ಕಾಕ್‌ಟೇಲ್ 2'

ಸದ್ಯ ಕೃತಿ ಸನೋನ್ ಕೆರಿಯರ್ ಗ್ರಾಫ್ ಏರುತ್ತಲೇ ಇದೆ. ಹೋಮಿ ಅಡಜಾನಿಯಾ ನಿರ್ದೇಶನದ ಬಹುನಿರೀಕ್ಷಿತ ಕಾಕ್‌ಟೇಲ್ 2 ಚಿತ್ರದಲ್ಲಿ ಕೃತಿ ಮಿಂಚಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ದಕ್ಷಿಣದ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ಚಾಕೊಲೇಟ್ ಹೀರೊ ಶಾಹಿದ್ ಕಪೂರ್ ಕೂಡ ಇದ್ದಾರೆ. ಈ ಸಿನಿಮಾ ಇದೇ ಜೂನ್ 19, 2026 ರಂದು ತೆರೆಕಾಣಲಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net