ಕಂಪ್ಲಿಯಲ್ಲಿ ಕಡಿಮೆ ವೆಚ್ಚದಲ್ಲಿ ಸಾವಯವ ಭತ್ತ

ಸಾವಯವ ಕೃಷಿಯಲ್ಲಿ ಬೆಳೆದ ಭತ್ತ ಬೆಳೆ.
ಸಾವಯವ ಕೃಷಿಯಲ್ಲಿ ಬೆಳೆದ ಭತ್ತ ಬೆಳೆ.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಯೋಗ ಮಾಡಿ ಯಶಸ್ಸು ಕಂಡ ಬಸವರಾಜ
  • ಒಂದು ಎಕರೆ ಕೇವಲ 18 ಸಾವಿರ ರೂ. ವೆಚ್ಚ
  • ರಸಗೊಬ್ಬರ ಬಳಸದೆ 45 ದಿನ ಸಸಿಮಡಿಯಲ್ಲಿ ಸಸಿ ಬೆಳೆಸಿ
ಕಂಪ್ಲಿ: ಕಳೆದ ಐದು ವರ್ಷಗಳಿಂದ ಒಂದು ಎಕರೆಯಲ್ಲಿ ಸಾವಯವ ಕೃಷಿ ಕೈಗೊಂಡು ಯಶಸ್ಸಿನತ್ತ ಸಾಗುತ್ತಿರುವ ಕೃಷಿಕ ಎಂ.ಎಂ.ಬಸವರಾಜ ಸಮೀಪದ ಬಳ್ಳಾಪುರದಲ್ಲಿ ಕಾಣಸಿಗುತ್ತಾರೆ. ಒಂದು ಎಕರೆಯಲ್ಲಿ ಸಾವಯವ ಭತ್ತ ಕೃಷಿ ಜತೆ, ಎಂಟತ್ತು ತೆಂಗು, ನಿಂಬೆ, ನುಗ್ಗೆ ಮರಗಳನ್ನು ಬೆಳೆಸಿ ಫಲ ಪಡೆಯುತ್ತಿದ್ದಾರೆ.
ರಸಗೊಬ್ಬರ ಬಳಸದೆ 45 ದಿನ ಸಸಿಮಡಿಯಲ್ಲಿ ಸಸಿ ಬೆಳೆಸಿ, ಆಗಸ್ಟ್ನಲ್ಲಿ ಭತ್ತ ಸಸಿ ನಾಟಿ ಮಾಡಿದ್ದಾರೆ. ಇನ್ನೇನು ಹತ್ತು-ಹನ್ನೆರೆಡು ದಿನಗಳಲ್ಲಿ ಕೊಯ್ಲಿಗೆ ಬರಲಿದೆ. ಸಸಿಮಡಿ, ಕೃಷಿ ನಿರ್ವಹಣೆ ಸೇರಿ ಕೇವಲ 18 ಸಾವಿರ ರೂ. ವ್ಯಯಿಸಿದ್ದಾರೆ. ಇದು ಈ ಭಾಗದಲ್ಲಿನ ಕಡಿಮೆ ವೆಚ್ಚದ ಭತ್ತ ಕೃಷಿಯಾಗಿದೆ. ಇವರು ಎರಡು ಆಕಳು, ಎರಡು ಹೋರಿ ಕರುಗಳನ್ನು ಸಾಕಿದ್ದು ಅದರಿಂದ ಬರುವ ಸೆಗಣಿ, ಮೂತ್ರ ಬಳಸಿಕೊಂಡು ಒಂದು ಎಕರೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೆಲ ರೈತರಿಗೆ ಸ್ವತಃ ಸಾವಯವ ಗೊಬ್ಬರ, ಔಷಧ ತಯಾರಿಸಿ ಒದಗಿಸಿದ್ದಾರೆ.
ಒಂದು ಎಕರೆಗೆ ಎರಡು ಬ್ಯಾರಲ್ ಜೀವಾಮೃತ (400 ಲೀಟರ್), ಮೆಂತ್ಯೆ ರಸಾಯನ 400 ಲೀಟರ್, ಬಯೋ ಡೈಜಸ್ಟರ್ 400 ಲೀಟರ್, ವೇಸ್ಟ್ ಡಿ ಕಾಂಪೋಜರ್ 200 ಲೀಟರ್‌ನ್ನು ನೀರಿನೊಂದಿಗೆ ಹರಿಸಲಾಗಿದೆ. ಹತ್ತು-ಹನ್ನೆರೆಡು ದಿನಗಳಿಗೊಮ್ಮೆ ಗೋ ಕೃಪಾಮೃತವನ್ನು ಐದು ಬಾರಿ ಸಿಂಪಡಿಸಿದ್ದಾರೆ.
ಮಣ್ಣಿನ ಫಲವತ್ತತೆಗೆ ಎರಡು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರಕ್ಕೆ ಗೋ ಕೃಪಾಮೃತ, ಜೀವಾಮೃತವನ್ನು ಮಣ್ಣಿಗೆ ಕೊಟ್ಟಿದ್ದಾರೆ. ಸ್ವತಃ ಸಾವಯವ ಯೂರಿಯಾ ತಯಾರಿಸಿಕೊಳ್ಳಲು 220 ಲೀಟರ್ ಡ್ರಮ್‌ನಲ್ಲಿನ ಶೇ.60 ಮರಳಿಗೆ ಐದಾರು ಕೊಡ ಗೋಮೂತ್ರ ಸೇರಿಸಿ ಮೂರು ತಿಂಗಳು ಬಿಟ್ಟ ನಂತರ ತಯಾರಾದ ಸಾವಯವ ಯೂರಿಯಾ ಹರಳನ್ನು ಭತ್ತಕ್ಕೆ ಎರಚಿದ್ದಾರೆ.
200 ಲೀಟರ್‌ಗೆ ಒಂದು ಕೆ.ಜಿ. ವ್ಯರ್ಥ ಹಿಟ್ಟು ಹಾಕಿ ಗರಗರ ತಿರುಗಿಸಿ ವಾಸನೆ ಬರುವಂತೆ ಕೊಳಸಿಟ್ಟು ಪ್ಯೊಟ್ಯಾಷ್ ತಯಾರಿಸಿ ನೀರಿಗೆ ಸೇರಿಸಿದ್ದಾರೆ. ಇದರ ಜತೆ ಖರೀದಿಸಿದ 50 ಕೆ.ಜಿ. ಬೇವಿನಹಿಂಡಿಯಲ್ಲಿ ಎರಡು ಬಾರಿ, ಒಮ್ಮೆ 10 ಕೆ.ಜಿ. ಶೇಂಗಾ ಹಿಂಡಿ ಹಾಕಿದ್ದಾರೆ. ಮೂರು ಬಾರಿ ಕಳೆಯನ್ನು ಕೈಯಿಂದ ಕೀಳಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆದ ರಾಸಾಯನಿಕ ಮುಕ್ತ ಭತ್ತ ಬೆಳೆ ಸಮೃದ್ಧ ತೆನೆಗಳೊಂದಿಗೆ ಕೊಯ್ಲಿಗೆ ಸಿದ್ಧವಾಗಿದೆ.
ಕಳೆದ ಬಾರಿ 75 ಕೆ.ಜಿ.ಯ 25 ಚೀಲ ಇಳುವರಿ ಬಂದಿದ್ದು, ಈ ಬಾರಿ 28 ಚೀಲ ಇಳುವರಿ ನಿರೀಕ್ಷೆಯಿದೆ. ಸದ್ಯ ಒಂದು ಚೀಲ ಭತ್ತದ ಮಾರಾಟ ದರ 2,500 ರೂ. ಇದೆ. ಸುಮಾರು 40 ಸಾವಿರ ರೂ. ಗಳ ಲಾಭದ ನಿರೀಕ್ಷೆಯಿದೆ. ಎಂ.ಎಂ.ಬಸವರಾಜ ದ್ವಿತೀಯ ಪಿಯುಸಿ ಕಲಾ ಶಿಕ್ಷಣದ ಜತೆ ಒಂದು ವರ್ಷದ ದೂರಶಿಕ್ಷಣದ ಕೃಷಿ ಡಿಪ್ಲೊಮಾಗಳಿಸಿದ್ದಾರೆ.
ಕುರುಗೋಡಿನ ರೈತ ಸಂಪರ್ಕ ಕೇಂದ್ರದಲ್ಲಿ ಎಂಟು ವರ್ಷ ಅನುಗಾರನಾಗಿ ಕೆಲಸ ಮಾಡಿದ ಅನುಭವ ಅವರನ್ನು ಸಾವಯವ ಕೃಷಿಕನನ್ನಾಗಿಸಿದೆ. ಮಹಾರಾಷ್ಟ್ರದ ಕನ್ನೇರಿ ಮಠದಲ್ಲಿ ನಾಲ್ಕು ದಿನಗಳ ಸಾವಯವ ಕೃಷಿ ಮಾಹಿತಿ ಪಡೆದುಕೊಂಡಿದ್ದಾರೆ. ಕೃಷಿ ಉತ್ಸವ, ಕೃಷಿ ಮೇಳಗಳಲ್ಲಿ ಪಾಲ್ಗೊಂಡು ಸಾವಯವ ಕೃಷಿ ಮಾಹಿತಿ ಸಂಗ್ರಹಿಸುತ್ತಾರೆ.
ಸದ್ಯ ಈ ಭಾಗದಲ್ಲಿ ಸಾವಯವ ಸಂಪನ್ಮೂಲ ವ್ಯಕ್ತಿಯಾಗಿ ರೈತರಿಗೆ ಸಾವಯವ ಕೃಷಿ ಕುರಿತು ಮಾಹಿತಿ ನೀಡುತ್ತಿದ್ದ್ತಾರೆ. ಇವರಿಂದ ಪ್ರೇರಣೆಗೊಂಡ ಕೆಲ ರೈತರು ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ. ತಾಲೂಕಿನಲ್ಲಿ ಸುಮಾರು 20 ಎಕರೆಗಳಲ್ಲಿ ನಾಲ್ಕೈದು ಜನ ರೈತರು ಸಾವಯವ ಕೃಷಿ ನಿರತರಾಗಿದ್ದಾರೆ.

ಆಕಳು ಸಾಕದಿದ್ದರೆ ಸಾವಯವ ಕೃಷಿಕನೇ ಅಲ್ಲ. ಸಾವಯವ ಕೃಷಿಯಿಂದ ಮಾತ್ರ ರಾಸಾಯನಿಕಮುಕ್ತ ಆಹಾರ ಉತ್ಪಾದನೆ ಸಾಧ್ಯ. ಸರ್ಕಾರ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಜತೆ ಕಡ್ಡಾಯಗೊಳಿಸಬೇಕಿದೆ. ರೈತರು ರಸಗೊಬ್ಬರ ಬಳಕೆ ಬಿಟ್ಟು ಕ್ರಮೇಣ ಸಾವಯವ ಕೃಷಿಗಾಗಿ ಎತ್ತು, ಆಕಳು, ಎಮ್ಮೆ ಸಾಕಿ ಮಿಶ್ರ ಬೇಸಾಯಕ್ಕೆ ಮರಳಬೇಕಿದೆ.

ಸಾವಯವ ಕೃಷಿಯನ್ನು ರೈತರಲ್ಲಿ ಉತ್ತೇಜಿಸಲು ತಾಲೂಕಿನ ರಾಮಸಾಗರ, ಎಮ್ಮಿಗನೂರು, ಉಪ್ಪಾರಹಳ್ಳಿಗಳಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆ ಜಾರಿಗೊಳಿಸಿದೆ. ಈ ಮೂರು ಗ್ರಾಮಗಳ ತಲಾ 125 ರೈತರನ್ನು ಯೋಜನೆಗೆ ಒಳಪಡಿಸಲು ಗುರಿ ಹೊಂದಿದೆ. ತರಬೇತಿ ನೀಡಿ, ಎಕರೆಗೆ ವರ್ಷಕ್ಕೆ 4,000 ರೂ. ಗಳ ಪ್ರೋತ್ಸಾಹ ಧನ ನೀಡಲಾಗುವುದು. ಮೂರು ಗ್ರಾಮಗಳ ಆಸಕ್ತ ರೈತರು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net