ನಿಮ್ಮ ಸುತ್ತಲು ಇರೋ ಶಾರ್ಕ್​ಗಳ ಬಗ್ಗೆ ಎಚ್ಚರಿಕೆಯಿಂದಿರಿ...ಗೋಲ್ಡನ್​ ಡಕ್​ ಆಗ್ತಿದ್ದಂತೆ ವೈಭವ್​ಗೆ ಬಂತು ವಾರ್ನಿಂಗ್! Vaibhav Sooryavanshi

ನಿಮ್ಮ ಸುತ್ತಲು ಇರೋ ಶಾರ್ಕ್​ಗಳ ಬಗ್ಗೆ ಎಚ್ಚರಿಕೆಯಿಂದಿರಿ...ಗೋಲ್ಡನ್​ ಡಕ್​ ಆಗ್ತಿದ್ದಂತೆ ವೈಭವ್​ಗೆ ಬಂತು ಎಚ್ಚರಿಕೆ! Vaibhav Sooryavanshi
ನಿಮ್ಮ ಸುತ್ತಲು ಇರೋ ಶಾರ್ಕ್​ಗಳ ಬಗ್ಗೆ ಎಚ್ಚರಿಕೆಯಿಂದಿರಿ...ಗೋಲ್ಡನ್​ ಡಕ್​ ಆಗ್ತಿದ್ದಂತೆ ವೈಭವ್​ಗೆ ಬಂತು ಎಚ್ಚರಿಕೆ! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ವೈಭವ್​ ಸೂರ್ಯವಂಶಿಯ ಬಗ್ಗೆ ಭಾರತೀಯರಿಗೆ ವಿಶೇಷವಾಗಿ ಹೇಳಬೇಕಿಲ್ಲ
  • ಕೇವಲ 15ನೇ ವಯಸ್ಸಿನಲ್ಲಿ ವಿಶ್ವ ಕ್ರಿಕೆಟ್​ ಬೆರಗಾಗುವಂತೆ ಮಾಡಿರುವ ವಿಶೇಷ ಪ್ರತಿಭೆ ಈತ
  • ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ರನ್​ ಮಳೆ ಹರಿಸುತ್ತಿದ್ದಾರೆ
  • ನಿನ್ನೆ ಶೂನ್ಯಕ್ಕೆ ಔಟಾದ ಬೆನ್ನಲ್ಲೇ ನ್ಯೂಜಿಲೆಂಡ್​ನ ಮಾಜಿ ಆಟಗಾರ ಸೈಮನ್​ ಡೌಲ್​ ಎಚ್ಚರಿಕೆ ನೀಡಿದ್ದಾರೆ
Vaibhav Sooryavanshi : ವೈಭವ್​ ಸೂರ್ಯವಂಶಿಯ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಕೇವಲ 15ನೇ ವಯಸ್ಸಿನಲ್ಲಿ ವಿಶ್ವ ಕ್ರಿಕೆಟ್​ ಬೆರಗಾಗುವಂತೆ ಮಾಡಿರುವ ವಿಶೇಷ ಪ್ರತಿಭೆ ಈತ. ತನ್ನ ಅಬ್ಬರದ ಬ್ಯಾಟಿಂಗ್​ ಮೂಲಕ ವಿಶ್ವದರ್ಜೆಯ ಬೌಲರ್​ಗಳಿಗೆ ಬೆವರಿಳಿಸುತ್ತಿರುವ ಯುವ ಸೆನ್ಸೇಷನ್​ ಈ ವೈಭವ್​. ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ಪರ ರನ್​ ಮಳೆ ಹರಿಸುವ ಮೂಲಕ ಆರೇಂಜ್​ ಕ್ಯಾಪ್ ಅನ್ನು ಕಸಿದುಕೊಂಡಿದ್ದಾನೆ. ಇಂತಹ ಪ್ರತಿಭಾವಂತ ಆಟಗಾರ ನಿನ್ನೆ ಸನ್ ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ​ ಶೂನ್ಯಕ್ಕೆ ಔಟಾದನು. ಎಸ್​ಆರ್​ಎಚ್​ ಪರ ಪಾದರ್ಪಣೆ ಮಾಡಿದ ವೇಗಿ ಪ್ರಫುಲ್​ ಹಿಂಗೆ ಬೌಲಿಂಗ್​ನಲ್ಲಿ ಮೊದಲ ಎಸೆತದಲ್ಲೇ ಕ್ಯಾಚಿತ್ತು ನಿರ್ಗಮಿಸಿದರು. ಈ ಸೀಸನ್​ನಲ್ಲಿ ವೈಭವ್​, ಮೊದಲ ಬಾರಿಗೆ ಶೂನ್ಯಕ್ಕೆ ಔಟಾದ ಬೆನ್ನಲ್ಲೇ ನ್ಯೂಜಿಲೆಂಡ್​ನ ಮಾಜಿ ಆಟಗಾರ ಸೈಮನ್​ ಡೌಲ್​, ರಾಜಸ್ಥಾನದ ಯುವ ಆಟಗಾರನಿಗೆ ಒಂದು ಪ್ರಮುಖ ಸಲಹೆಯನ್ನು ನೀಡಿದ್ದಾರೆ.
ವೈಭವ್​ಗೆ ಸಿಕ್ಕಿರುವ​ ಜನಪ್ರಿಯತೆಯಿಂದಾಗಿ ಹಲವಾರು ಮ್ಯಾನೇಜ್‌ಮೆಂಟ್ ಕಂಪನಿಗಳು ಆತನ ಹಿಂದೆ ಬಿದ್ದು ಆಕರ್ಷಕ ಒಪ್ಪಂದಗಳನ್ನು ನೀಡಲು ಪ್ರಯತ್ನಿಸುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಆತ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ ಎಂದು ಸೈಮನ್​ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ, ನಿರ್ವಹಣಾ ಕಂಪನಿಗಳು ಮತ್ತು ಮ್ಯಾನೇಜರ್‌ಗಳು ಕಲಾವಿದರ ಅಥವಾ ಆಟಗಾರರ ಹಿತದೃಷ್ಟಿಯನ್ನು ಕಾಯಲು ಇರುತ್ತಾರೆ. ಅಂದರೆ, ಅವರ ಬೆಳವಣಿಗೆಗೆ ಶ್ರಮಿಸುವುದು ಅವರ ಕೆಲಸವಾಗಿದೆ. ಆದರೆ, ಇಂದು ಬಹಳಷ್ಟು ಕಂಪನಿಗಳು ಕೇವಲ ತಮ್ಮ ಸ್ವಾರ್ಥವನ್ನು ಮಾತ್ರ ನೋಡುತ್ತಿವೆ ಎಂದು ಸೈಮನ್​ ಬೇಸರ ವ್ಯಕ್ತಪಡಿಸಿದ್ದಾರೆ. ಈ ಯುವಕನಿಂದ ನಮಗೆ ಎಷ್ಟು ಹಣ ಸಿಗಬಹುದು? ಅಥವಾ ನಮ್ಮ ಕಂಪನಿಗೆ ಇವನಿಂದ ಎಷ್ಟು ಲಾಭವಾಗಬಹುದು? ಎಂಬ ಲೆಕ್ಕಾಚಾರವೇ ತುಂಬಿ ಹೋಗಿದೆ. ಇಲ್ಲಿನ ಹಣದ ಆಸೆಯೇ ಮ್ಯಾನೇಜಮೆಂಟ್​ಗಳ ಮೊದಲ ಆದ್ಯತೆಯಾಗಿದೆ. ಮ್ಯಾನೇಜ್‌ಮೆಂಟ್‌ಗಳು ಜನರ ಏಳಿಗೆಗಾಗಿ ಕೆಲಸ ಮಾಡುವ ಬದಲು, ಜನರನ್ನು ಕೇವಲ ಹಣ ಮಾಡುವ ವಸ್ತುಗಳಂತೆ ನೋಡುತ್ತಿರುವುದು ಇಂದಿನ ದೊಡ್ಡ ಸಮಸ್ಯೆಯಾಗಿದೆ ಎಂದು ಸೈಮನ್​ ಅವರು ಹೇಳಿದ್ದಾರೆ. 
ಇನ್ನೂ ಸೈಮನ್ ಡೌಲ್ ಅವರು 15 ವರ್ಷದ ವೈಭವ್ ಅವರ ಕ್ರಿಕೆಟ್ ಜೀವನದ ಈ ಆರಂಭಿಕ ಹಂತದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಲಾಭಕ್ಕಾಗಿ ಮಾತ್ರ ಕೆಲಸ ಮಾಡುವ ಮತ್ತು ಆಟಗಾರನ ಬೆಳವಣಿಗೆಯನ್ನು ನಿರ್ಲಕ್ಷಿಸುವ ತಪ್ಪು ಮ್ಯಾನೇಜರ್‌ಗಳ ಬಗ್ಗೆ ವೈಭವ್​ ಅವರು ಎಚ್ಚರಿಕೆ ಹೆಜ್ಜೆ ಇಡಬೇಕು ಎಂದಿದ್ದಾರೆ. ಮ್ಯಾನೇಜರ್‌ಗಳು ಹೆಚ್ಚಾಗಿ ತಮ್ಮ ಸ್ವಂತ ಗಳಿಕೆಯ ಬಗ್ಗೆ ಯೋಚಿಸುತ್ತಾರೆಯೇ ಹೊರತು, ಯುವ ಆಟಗಾರನ ವೃತ್ತಿಜೀವನದ ಸುದೀರ್ಘ ಭವಿಷ್ಯ ಅಥವಾ ಅವರ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸೈಮನ್​ ಹೇಳಿದ್ದಾರೆ. ವೈಭವ್ ಈಗಿನಿಂದಲೇ ಅತಿಯಾದ ಒತ್ತಡಕ್ಕೆ ಒಳಗಾಗಬಾರದು ಎಂದು ಸೂಚಿಸಿರುವ ಸೈಮನ್​, ಒಂದು ವೇಳೆ ಆಟಗಾರನ ಪ್ರದರ್ಶನ ಕುಸಿದರೆ ಮ್ಯಾನೇಜರ್‌ಗಳು ಮತ್ತೊಬ್ಬರ ಹಿಂದೆ ಹೋಗುತ್ತಾರೆ ಆದ್ದರಿಂದ, ವೃತ್ತಿಜೀವನದ ದೀರ್ಘಾಯುಷ್ಯಕ್ಕೆ ಆದ್ಯತೆ ನೀಡುವ ಮ್ಯಾನೇಜರ್‌ಗಳ ಅಗತ್ಯವಿದೆ ಎಂದು ಸೈಮನ್​ ಅಭಿಪ್ರಾಯಪಟ್ಟಿದ್ದಾರೆ.
ಅಂತಿಮವಾಗಿ ನಿಮ್ಮ ಸುತ್ತಲೂ ಇರುವವರ ಬಗ್ಗೆ ತುಂಬಾ ಎಚ್ಚರಿಯಿಂದ ಇರಿ ಎಂದು ಸೈಮನ್​ ವೈಭವ್​ಗೆ ಸಲಹೆ ನೀಡಿದ್ದಾರೆ. ಒಬ್ಬ ವ್ಯಕ್ತಿಯು ಉತ್ತಮ ಕುಟುಂಬದ ಹಿನ್ನೆಲೆ ಮತ್ತು ಸಂಸ್ಕಾರವನ್ನು ಹೊಂದಿದ್ದರೆ, ಆತ ಸಾಮಾನ್ಯವಾಗಿ ಒಳ್ಳೆಯವನಾಗಿರುತ್ತಾನೆ ಮತ್ತು ಅವನ ನಡವಳಿಕೆಯೂ ಸರಿಯಾಗಿರುತ್ತದೆ. ಆದರೆ, ಸಮಾಜದಲ್ಲಿ ಸ್ವಾರ್ಥಕ್ಕಾಗಿ ಅಥವಾ ಮೋಸ ಮಾಡಲು ಹೊಂಚು ಹಾಕುವ 'ಶಾರ್ಕ್'ಗಳಂತಹ (ಅಪಾಯಕಾರಿ) ಜನರ ಬಗ್ಗೆ ಸದಾ ಜಾಗರೂಕರಾಗಿರುವುದು ಅವಶ್ಯಕ ಎಂದು ಸೈಮನ್​ ತಿಳಿಸಿದ್ದಾರೆ. ಒಟ್ಟಾರೆಯಾಗಿ, ವ್ಯಕ್ತಿಯ ಹಿನ್ನೆಲೆಯನ್ನು ಗಮನಿಸುವುದು ಮತ್ತು ಕೆಟ್ಟ ಜನರ ಸಹವಾಸದಿಂದ ದೂರವಿರುವುದು ಮುಖ್ಯ ಎಂಬುದು ಸೈಮನ್​ ಮಾತಿನ ಅರ್ಥವಾಗಿದೆ. ಇಂದು ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ವೈಭವ್​ಗೆ ಈ ಸಲಹೆ ನಿಜಕ್ಕೂ ಅರ್ಥಪೂರ್ಣವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net