ಐಪಿಎಲ್​ನಲ್ಲಿ ಸಿಕ್ಸರ್​ಗಳ ಸುನಾಮಿ ಸೃಷ್ಟಿಸುತ್ತಿರುವ ವೈಭವ್​ ಸೂರ್ಯವಂಶಿಯ ಯಶಸ್ಸಿನ ರಹಸ್ಯ ಬಯಲು..! Vaibhav Sooryavanshi

ಐಪಿಎಲ್​ನಲ್ಲಿ ಸಿಕ್ಸರ್​ಗಳ ಸುನಾಮಿ ಸೃಷ್ಟಿಸುತ್ತಿರುವ ವೈಭವ್​ ಸೂರ್ಯವಂಶಿಯ ಯಶಸ್ಸಿನ ರಹಸ್ಯ ಬಯಲು..! Vaibhav Sooryavanshi
ಐಪಿಎಲ್​ನಲ್ಲಿ ಸಿಕ್ಸರ್​ಗಳ ಸುನಾಮಿ ಸೃಷ್ಟಿಸುತ್ತಿರುವ ವೈಭವ್​ ಸೂರ್ಯವಂಶಿಯ ಯಶಸ್ಸಿನ ರಹಸ್ಯ ಬಯಲು..! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲಿ ಕೇಳಿದರೂ ಕೇವಲ ಒಂದೇ ಹೆಸರು ಮಾರ್ದನಿಸುತ್ತಿದೆ, ಅದೇ ವೈಭವ್ ಸೂರ್ಯವಂಶಿ
  • 15 ವರ್ಷದ ಈ ಅದ್ಭುತ ಬಾಲಕ ಮೈದಾನಕ್ಕಿಳಿದರೆ ನಿರೀಕ್ಷೆಗಳನ್ನೆಲ್ಲ ಮೀರಿ ರನ್‌ಗಳ ಸುರಿಮಳೆಗೈಯುತ್ತಿದ್ದಾನೆ
  • ತಾನು ಸುದೀರ್ಘ ಕಾಲ ಕ್ರಿಕೆಟ್ ಆಳಲು ಬಂದ ಮಹಾ ಕುದುರೆ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದ್ದಾನೆ
  • ಬ್ಯಾಟಿಂಗ್​ನಲ್ಲಿ ಸತತವಾಗಿ ಅಬ್ಬರಿಸುತ್ತಿರುವ ವೈಭವ್​ ಯಶಸ್ಸಿನ ಹಿಂದೆ ಕೆಲವೊಂದಿಷ್ಟು ಪ್ರಮುಖ ಅಂಶಗಳಿವೆ
Vaibhav Sooryavanshi : ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲಿ ಕೇಳಿದರೂ ಕೇವಲ ಒಂದೇ ಹೆಸರು ಮಾರ್ದನಿಸುತ್ತಿದೆ, ಅದೇ ವೈಭವ್ ಸೂರ್ಯವಂಶಿ! ಕೇವಲ 15 ವರ್ಷದ ಈ ಅದ್ಭುತ ಬಾಲಕ ಮೈದಾನಕ್ಕಿಳಿದರೆ ಸಾಕು, ನಿರೀಕ್ಷೆಗಳನ್ನೆಲ್ಲ ಮೀರಿ ರನ್‌ಗಳ ಸುರಿಮಳೆಗೈಯುತ್ತಿದ್ದಾನೆ. ವಿಶ್ವದ ಘಟಾನುಘಟಿ ಬೌಲರ್‌ಗಳನ್ನು ಸಹ ಬೆಂಡೆತ್ತುತ್ತಿದ್ದಾನೆ. ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ಗಳನ್ನು ಅಟ್ಟುತ್ತಿರುವ ಈ ಬಿಹಾರಿ ಹುಡುಗನ ಅಬ್ಬರ ನಿನ್ನೆ ಮೊನ್ನೆಯದ್ದಲ್ಲ. 2025ರ 18ನೇ ಆವೃತ್ತಿಯಲ್ಲೇ ಬಿರುಗಾಳಿಯ ಬ್ಯಾಟಿಂಗ್​ ಮುನ್ಸೂಚನೆ ನೀಡಿದ್ದ ಈ ಯುವ ಪ್ರತಿಭೆ, ತನ್ನ ರನ್ ಹಸಿವು ಹಾಗೂ ಕ್ಲಾಸ್ ಬ್ಯಾಟಿಂಗ್ ಕೇವಲ ಒಂದು ಸೀಸನ್‌ಗೆ ಸೀಮಿತವಲ್ಲ, ತಾನು ಸುದೀರ್ಘ ಕಾಲ ಕ್ರಿಕೆಟ್ ಆಳಲು ಬಂದ ಮಹಾ ಕುದುರೆ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದ್ದಾನೆ.
ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಕೇವಲ 14ನೇ ವಯಸ್ಸಿಗೆ ಪಾದಾರ್ಪಣೆ ಮಾಡಿ ಎಲ್ಲರನ್ನೂ ಆಶ್ಚರ್ಯಚಕಿತರಾಗಿಸಿದ್ದ ವೈಭವ್ ಸೂರ್ಯವಂಶಿ, ಆ ಬಳಿಕ ಭಾರತ-ಎ ತಂಡದ ಪರ ಭರ್ಜರಿ ಪ್ರದರ್ಶನ ನೀಡಿದ್ದಲ್ಲದೆ ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸಕ್ತ 2026ರ ಐಪಿಎಲ್‌ನಲ್ಲೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ವೈಭವ್​, ಇತ್ತೀಚೆಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿ ಅಬ್ಬರಿಸಿದ್ದಾರೆ.
ಈ ಸೀಸನ್‌ನಲ್ಲಿ ಇದುವರೆಗೆ ಆಡಿರುವ 15 ಪಂದ್ಯಗಳಿಂದ 45.33 ರ ಸರಾಸರಿ ಹಾಗೂ 242.82 ರ ಭೀಕರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 680 ರನ್ ಕಲೆಹಾಕಿರುವ 15 ವರ್ಷದ ಈ ರನ್ ಮಷೀನ್, ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಬ್ಯಾಟಿಂಗ್​ನಲ್ಲಿ ಸತತವಾಗಿ ಅಬ್ಬರಿಸುತ್ತಿರುವ ವೈಭವ್​ ಸೂರ್ಯವಂಶಿಯ ಯಶಸ್ಸಿನ ಹಿಂದೆ ಕೆಲವೊಂದಿಷ್ಟು ಪ್ರಮುಖ ಅಂಶಗಳಿವೆ. ಆತನ ಯಶಸ್ಸಿನ ರಹಸ್ಯ ಏನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಭಯವಿಲ್ಲದ ಆಟ

ವೈಭವ್ ಅವರ ಯಶಸ್ಸಿಗೆ ಮುಖ್ಯ ಕಾರಣವೆಂದರೆ, ಬೌಲರ್ ಎಷ್ಟೇ ಶ್ರೇಷ್ಠನಾಗಿದ್ದರೂ ಆ ಬೌಲರ್‌ನ ಮಟ್ಟಕ್ಕೆ ಹೆದರದೆ ಅವರು ತಮ್ಮ ಸ್ವಾಭಾವಿಕ ಆಟವನ್ನು ಆಡುತ್ತಾರೆ. ಬೌಲರ್ ಯಾರೆಂಬುದು ತನಗೆ ಮುಖ್ಯವಲ್ಲ, ತನಗೆ ಕೇವಲ ಚೆಂಡು ಮಾತ್ರ ಮುಖ್ಯ ಎಂದು ವೈಭವ್ ಈಗಾಗಲೇ ಹೇಳಿದ್ದಾರೆ.

ನಿರಂತರ ಅಭ್ಯಾಸ

ತಮ್ಮ ವಯಸ್ಸಿನ ಮಕ್ಕಳು ಆಟವಾಡಿ ಆನಂದಿಸುತ್ತಿರುವಾಗ, ವೈಭವ್ ಕಠಿಣವಾಗಿ ಅಭ್ಯಾಸ ಮಾಡುತ್ತಾರೆ. ಅವರು ನೆಟ್ಸ್‌ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಅವರು ಬ್ಯಾಟಿಂಗ್ ಅನ್ನು ಒಂದು ಜವಾಬ್ದಾರಿ ಎಂದು ಪರಿಗಣಿಸುವುದಿಲ್ಲ, ಬದಲಿಗೆ ತಮ್ಮ ಜೀವನ ಎಂದು ಭಾವಿಸುತ್ತಾರೆ. ತಾನು ಎಷ್ಟು ಸಮಯ ಬ್ಯಾಟಿಂಗ್ ಮಾಡಬೇಕೋ ಅಷ್ಟು ಸಮಯ ಬ್ಯಾಟಿಂಗ್ ಮಾಡುವುದಾಗಿ ವೈಭವ್ ಹೇಳಿದ್ದಾರೆ.

ಮಾನಸಿಕ ಸ್ಥಿರತೆ

ಆಟಗಾರ ಎಷ್ಟೇ ಅನುಭವಿಯಾಗಿದ್ದರೂ, ಪಂದ್ಯಕ್ಕೆ ಪ್ರವೇಶಿಸಿದ ನಂತರ ಮೊದಲ ಚೆಂಡನ್ನು ತಾಳ್ಮೆಯಿಂದ ಆಡುತ್ತಾನೆ. ಆದರೆ, ವೈಭವ್ ಹಾಗಲ್ಲ. ಅವರು ಮೊದಲ ಎಸೆತದಿಂದಲೇ ಅಬ್ಬರದ ಬ್ಯಾಟಿಂಗ್ ಮಾಡಲು ಪ್ರಾರಂಭಿಸುತ್ತಾರೆ. ಅವರ ಆಟದಲ್ಲಿ ಯಾವುದೇ ಭಯವಿರುವುದಿಲ್ಲ. ಮೊದಲ ಚೆಂಡಿನಲ್ಲೇ ಔಟ್ ಆಗುವ ಭಯವೂ ಅವರಿಗಿಲ್ಲ. ಒಂದು ವೇಳೆ ಔಟ್ ಆದರೂ ಅವರು ಧೃತಿಗೆಡುವುದಿಲ್ಲ. ಅವರಿಗೆ ತಮ್ಮ ಮೇಲೆ ಅಪಾರ ನಂಬಿಕೆಯಿದೆ. ತಾನು ಕ್ರೀಸ್‌ನಲ್ಲಿ ಎಷ್ಟು ಸಮಯ ಇರುತ್ತೇನೋ, ಅಷ್ಟು ಸಮಯ ಪಂದ್ಯದ ಮೇಲಿನ ತನ್ನ ಪ್ರಾಬಲ್ಯ ಹೆಚ್ಚುತ್ತದೆ ಎಂದು ಅವರು ಹೇಳುವುದೇ ಇದಕ್ಕೆ ಉದಾಹರಣೆಯಾಗಿದೆ.

ಶ್ರೇಷ್ಠ ಬೌಲರ್‌ಗಳಿಗೆ ಗೌರವ

ವೈಭವ್​ ಅವರು ತಮಗಿಂತ ನುರಿತ ಬೌಲರ್‌ಗಳಿಗೆ ಗೌರವ ನೀಡುತ್ತಾರೆ. ಆದರೆ, ಒಮ್ಮೆ ಪಂದ್ಯಕ್ಕೆ ಪ್ರವೇಶಿಸಿದರೆ, ಅದೆಲ್ಲವನ್ನೂ ಬದಿಗಿಡುತ್ತಾರೆ. ಚೆಂಡು ಯಾವಾಗ ತನ್ನ ಆರ್ಕ್ (ಬ್ಯಾಟಿಂಗ್ ವ್ಯಾಪ್ತಿ) ಗೆ ಬರುತ್ತದೆ ಎಂಬುದು ತನಗೆ ಚೆನ್ನಾಗಿ ಗೊತ್ತು ಎಂದು ವೈಭವ್​ ಹೇಳುತ್ತಾರೆ. ಶ್ರೇಷ್ಠ ಬೌಲರ್‌ಗಳನ್ನು ಎದುರಿಸಲು ಸಿದ್ಧರಾಗಲು ಪಂದ್ಯದ ಮೊದಲು ಅವರ ವಿಡಿಯೋಗಳನ್ನು ನೋಡುವುದಾಗಿ ವೈಭವ್ ಹೇಳುತ್ತಾರೆ.

ಪಂದ್ಯದ ಪೂರ್ವ ಸಿದ್ಧತೆ

ವೈಭವ್​ ಅವರು ಪಂದ್ಯದ ಮೊದಲು ಹೆಚ್ಚು ಯೋಚಿಸುವುದಿಲ್ಲ. ಅವರು ಶಾಂತವಾಗಿರುತ್ತಾರೆ. ಹಿಂದಿನ ದಿನವೇ ಮೈದಾನದ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಪಡೆದುಕೊಳ್ಳುತ್ತಾರೆ. ಬೌಂಡರಿ ಲೈನ್ ಎಷ್ಟು ದೂರದಲ್ಲಿದೆ? ಯಾವ ಕಡೆ ಕಡಿಮೆ ದೂರವಿದೆ? ಯಾವ ಕಡೆ ಅತಿ ಹೆಚ್ಚು ದೂರವಿದೆ? ಇಂತಹ ವಿಷಯಗಳ ಬಗ್ಗೆ ಅವರು ಸಂಪೂರ್ಣ ತಿಳುವಳಿಕೆಯನ್ನು ಪಡೆದುಕೊಳ್ಳುತ್ತಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net