ಐಪಿಎಲ್​ನಲ್ಲಿ ಅಬ್ಬರಿಸಿದ 15ರ ಹರೆಯದ ವೈಭವ್ ಮೇಲೆ 3 ತಿಂಗಳು ಅಧ್ಯಯನ ಮಾಡಲಿದೆ ಐಐಎಂ! ಕಾರಣ ಹೀಗಿದೆ...Vaibhav Sooryavanshi

ಐಪಿಎಲ್​ನಲ್ಲಿ ಅಬ್ಬರಿಸಿದ 15ರ ಹರೆಯದ ವೈಭವ್ ಮೇಲೆ 3 ತಿಂಗಳು ಅಧ್ಯಯನ ಮಾಡಲಿದೆ ಐಐಎಂ! ಕಾರಣ ಹೀಗಿದೆ...Vaibhav Sooryavanshi
ಐಪಿಎಲ್​ನಲ್ಲಿ ಅಬ್ಬರಿಸಿದ 15ರ ಹರೆಯದ ವೈಭವ್ ಮೇಲೆ 3 ತಿಂಗಳು ಅಧ್ಯಯನ ಮಾಡಲಿದೆ ಐಐಎಂ! ಕಾರಣ ಹೀಗಿದೆ...Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಕ್ರಿಕೆಟ್‌ನ ವಿಸ್ಮಯ ಬಾಲಕ ಎಂದೇ ಗುರುತಿಸಿಕೊಂಡಿರುವ 15 ವರ್ಷದ ವೈಭವ್ ಸೂರ್ಯವಂಶಿ
  • ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದಲೇ ಜಗತ್ತಿನ ಗಮನ ಸೆಳೆದಿರುವ ವಂಡರ್​ ಕಿಡ್​ ವೈಭವ್​
  • ಐಪಿಎಲ್​ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ ಬರೊಬ್ಬರಿ 237.30ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಚಚ್ಚಿದ ವೈಭವ್​
  • ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಐಐಎಂ ಇಂದೋರ್‌ನ ಸಂಶೋಧನಾ ವಿಷಯವಾಗಿ ಆಯ್ಕೆಯಾದ ಸೂರ್ಯವಂಶಿ
Vaibhav Sooryavanshi : ಐಪಿಎಲ್ 2026ರಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಮುರಿದು ಸಂಚಲನ ಮೂಡಿಸಿರುವ 15 ವರ್ಷದ ಯುವ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ ಅವರ ಯಶೋಗಾಥೆ ಇದೀಗ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಐಐಎಂ (IIM) ಇಂದೋರ್‌ನ ಸಂಶೋಧನಾ ವಿಷಯವಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಅಪರೂಪದ ಗೌರವಕ್ಕೆ ಪಾತ್ರವಾಗಿದೆ.
ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಿಗುವ ಅಪಾರ ಜನಪ್ರಿಯತೆ, ಯಶಸ್ಸು ಮತ್ತು ಸಾರ್ವಜನಿಕರ ಭಾರಿ ನಿರೀಕ್ಷೆಗಳು ಯುವ ಪ್ರತಿಭೆಗಳ ವ್ಯಕ್ತಿತ್ವ, ಮಾನಸಿಕ ಬೆಳವಣಿಗೆ, ಸಾಮಾಜಿಕ ಜೀವನ ಹಾಗೂ ವೃತ್ತಿಪರ ವಿಕಸನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡುವುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದ್ದು, ಸುಮಾರು ಮೂರು ತಿಂಗಳ ಕಾಲ ನಡೆಯಲಿರುವ ಈ ಸಂಶೋಧನೆಯ ಫಲಿತಾಂಶಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಜೊತೆಗೂ ಹಂಚಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಐಐಎಂ ಇಂದೋರ್‌ನ ನಿರ್ದೇಶಕರಾದ ಹಿಮಾಂಶು ರೈ ಅವರು ವೈಭವ್ ಅವರ ಈ ಅಸಾಧಾರಣ ಯಶಸ್ಸಿನ ಹಿಂದಿನ ಆಳವಾದ ಕಾರಣಗಳನ್ನು ಅಧ್ಯಯನ ಮಾಡಲು ನಿರ್ಧರಿಸಿದ್ದು, ಕುಟುಂಬದ ಬೆಂಬಲ, ಕೋಚಿಂಗ್ ಶೈಲಿ, ನಿರಂತರ ಅಭ್ಯಾಸ, ವ್ಯಕ್ತಿತ್ವದ ಗುಣಲಕ್ಷಣಗಳು ಮತ್ತು ಸಾಮಾಜಿಕ ಪರಿಸರವು ಒಬ್ಬ ಯುವ ಪ್ರತಿಭೆಯನ್ನು ಹೇಗೆ ಉನ್ನತ ಮಟ್ಟಕ್ಕೆ ಕೊಂಡೊಯ್ಯಬಲ್ಲದು ಎಂಬುದನ್ನು ಪತ್ತೆಹಚ್ಚುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಐಪಿಎಲ್ 2026ರಲ್ಲಿ ಜಾಗತಿಕ ಕ್ರಿಕೆಟ್ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ, 16 ಇನ್ನಿಂಗ್ಸ್‌ಗಳಲ್ಲಿ ಬರೊಬ್ಬರಿ 237.30ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಚಚ್ಚಿದರು ಇದರಲ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳು ಸೇರಿದ್ದು, ಒಟ್ಟು 72 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಪ್ರತಿಷ್ಠಿತ 'ಆರೆಂಜ್ ಕ್ಯಾಪ್' ಹಾಗೂ 'ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್' (MVP) ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಸಾಧಕನಾಗಿದ್ದಾರೆ.
ಈ ಅಧ್ಯಯನವು ಕೇವಲ ಕ್ರಿಕೆಟ್ ಅಂಕಿ-ಅಂಶಗಳಿಗೆ ಸೀಮಿತವಾಗಿರದೆ, ಚಿಕ್ಕ ವಯಸ್ಸಿನಲ್ಲೇ ಸಿಗುವ ಕೀರ್ತಿ, ಸಾಮಾಜಿಕ ಜಾಲತಾಣಗಳ ಪ್ರಭಾವ, ಸಾರ್ವಜನಿಕರ ಹೆಚ್ಚುತ್ತಿರುವ ನಿರೀಕ್ಷೆಗಳು ಮತ್ತು ಆರ್ಥಿಕ ಬದಲಾವಣೆಗಳು ಯುವ ಆಟಗಾರರ ಮಾನಸಿಕ ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಶೀಲಿಸಲಿದೆ. ವಿಶೇಷವಾಗಿ ಯುವ ಪ್ರತಿಭೆಗಳು ಯಶಸ್ಸನ್ನು ಸಾಧಿಸುವುದು ಮಾತ್ರವಲ್ಲದೆ, ಅದರ ಜೊತೆಯಲ್ಲೇ ಬರುವ ಭಾರಿ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಕಡೆಗೆ ಇಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ಯುವ ಆಟಗಾರರು ಹೆಚ್ಚು ಸಾರ್ವಜನಿಕ ಗಮನವನ್ನು ಎದುರಿಸುವುದರಿಂದಲೇ ವೈಭವ್ ಅವರನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿರುವ ಐಐಎಂ ನಿರ್ದೇಶಕ ಹಿಮಾಂಶು ರೈ, ತಮ್ಮ ಚೊಚ್ಚಲ ಐಪಿಎಲ್ ಸೀಸನ್‌ನಲ್ಲೇ ವಿಶ್ವದರ್ಜೆಯ ಬೌಲರ್‌ಗಳನ್ನು ಧೈರ್ಯವಾಗಿ ಎದುರಿಸಿ ಅದ್ಭುತ ಯಶಸ್ಸು ಸಾಧಿಸಿದ ವೈಭವ್ ಅವರ ಮನೋಬಲವೇ ಅವರನ್ನು ಈ ವಿಶೇಷ ಸಂಶೋಧನೆಗೆ ಸೂಕ್ತ ವ್ಯಕ್ತಿಯನ್ನಾಗಿ ಮಾಡಿದೆ ಎಂದಿದ್ದಾರೆ.
ಮನೋವಿಜ್ಞಾನ, ಸಮಾಜಶಾಸ್ತ್ರ, ಮಾನವ ಸಂಪನ್ಮೂಲ, ಸಂವಹನ ಹಾಗೂ ನಡವಳಿಕೆ ವಿಜ್ಞಾನದ ತಜ್ಞರು ಪಾಲ್ಗೊಳ್ಳಲಿರುವ ಈ ವಿಶಿಷ್ಟ ಸಂಶೋಧನೆಯು ಭವಿಷ್ಯದ ಯುವ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ, ಮಾನಸಿಕ ಬೆಂಬಲ ಮತ್ತು ವಿಕಸನದ ಅವಕಾಶಗಳನ್ನು ಒದಗಿಸಲು ಶಿಫಾರಸುಗಳನ್ನು ರೂಪಿಸುವಲ್ಲಿ ಅತ್ಯಂತ ಉಪಯುಕ್ತವಾಗಲಿದೆ ಎಂದು ಐಐಎಂ ಇಂದೋರ್ ಆಶಿಸಿದೆ.
ಈ ಅಧ್ಯಯನದ ವರದಿ ಸಂಪೂರ್ಣಗೊಂಡ ಬಳಿಕ ಅದನ್ನು ಬಿಸಿಸಿಐ (BCCI) ಜೊತೆ ಹಂಚಿಕೊಳ್ಳುವುದರ ಜೊತೆಗೆ ಅಂತಾರಾಷ್ಟ್ರೀಯ ಸಂಶೋಧನಾ ಜರ್ನಲ್‌ಗಳಲ್ಲೂ ಪ್ರಕಟಿಸಲಾಗುವುದು. ಇದು ಕೇವಲ ಕ್ರಿಕೆಟ್ ಮಾತ್ರವಲ್ಲದೆ ಗಣಿತ, ವಿಜ್ಞಾನ, ಸಂಗೀತ ಮತ್ತು ಕಲೆಯಂತಹ ಇತರ ಕ್ಷೇತ್ರಗಳ ಯುವ ಸಾಧಕರಿಗೂ ಒಂದು ಕೈದೀವಿಗೆಯಾಗಲಿದ್ದು, ಕ್ರಿಕೆಟ್ ಮೈದಾನದಲ್ಲಿ ದಾಖಲೆ ಬರೆದ ವೈಭವ್ ಸೂರ್ಯವಂಶಿ ಅವರ ಯಶೋಗಾಥೆ ಇದೀಗ ಸಂಶೋಧನಾ ಪ್ರಪಂಚದ ಒಂದು ಕುತೂಹಲಕಾರಿ ಅಧ್ಯಾಯವಾಗಿ ಮಾರ್ಪಟ್ಟು, ಮುಂದಿನ ದಿನಗಳಲ್ಲಿ ಅಸಂಖ್ಯಾತ ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗುವ ನಿರೀಕ್ಷೆಯಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net