ನಾನು ಆರ್‌ಸಿಬಿಯ ಅಪ್ಪಟ್ಟ ಅಭಿಮಾನಿ... ವಂಡರ್​ ಕಿಡ್​ ವೈಭವ್​ ಸೂರ್ಯವಂಶಿಯಿಂದ ಅಚ್ಚರಿ ಹೇಳಿಕೆ! Vaibhav Sooryavanshi

ನಾನು ಆರ್‌ಸಿಬಿಯ ಅಪ್ಪಟ್ಟ ಅಭಿಮಾನಿ... ವಂಡರ್​ ಕಿಡ್​ ವೈಭವ್​ ಸೂರ್ಯವಂಶಿಯಿಂದ ಅಚ್ಚರಿ ಹೇಳಿಕೆ! Vaibhav Sooryavanshi
ನಾನು ಆರ್‌ಸಿಬಿಯ ಅಪ್ಪಟ್ಟ ಅಭಿಮಾನಿ... ವಂಡರ್​ ಕಿಡ್​ ವೈಭವ್​ ಸೂರ್ಯವಂಶಿಯಿಂದ ಅಚ್ಚರಿ ಹೇಳಿಕೆ! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಕ್ರಿಕೆಟ್ ರಂಗದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ
  • ಕೊಹ್ಲಿ ನೀಡಿದ ಸಲಹೆಗಳೇನು ಎಂಬುದನ್ನು ಬಹಿರಂಗಪಡಿಸಿದ ವಂಡರ್​ ಕಿಡ್​
  • ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಪ್ಪಟ ಅಭಿಮಾನಿಯಾಗಿದ್ದೆ ಎಂದ ವೈಭವ್​
Vaibhav Sooryavanshi : ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ಹಾಗೂ ಪ್ರಸ್ತುತ ಭಾರತ ಕ್ರಿಕೆಟ್ ರಂಗದ ಉದಯೋನ್ಮುಖ ತಾರೆ ಹಾಗೂ ವಂಡರ್​ ಕಿಡ್​ ಎಂದೇ ಖ್ಯಾತಿಯಾಗಿರುವ ವೈಭವ್ ಸೂರ್ಯವಂಶಿ ತಾವೊಬ್ಬ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಮತ್ತು ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಅಪ್ಪಟ ಅಭಿಮಾನಿ ಎಂಬುದನ್ನು ಬಹಿರಂಗಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಐಪಿಎಲ್ 2026ರ ಫೈನಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿದ್ದರು, ಆ ಸಮಯದಲ್ಲಿ ಕೊಹ್ಲಿ ಅವರು ಯುವ ಆಟಗಾರ ವೈಭವ್​ ಅವರ ಹೆಗಲ ಮೇಲೆ ಕೈಹಾಕಿ ಕೆಲವು ಕಿವಿಮಾತುಗಳನ್ನು ಹೇಳುತ್ತಿರುವುದು ಕಂಡುಬಂದಿತ್ತು. ಈ ಅಪರೂಪದ ಕ್ಷಣವನ್ನು ನೆನಪಿಸಿಕೊಂಡಿರುವ ಸೂರ್ಯವಂಶಿ, ವಿರಾಟ್ ಕೊಹ್ಲಿ ಅವರು ತಮ್ಮನ್ನು ಒಬ್ಬ ಸ್ವಂತ ಕಿರಿಯ ಸಹೋದರನಂತೆ ನಡೆಸಿಕೊಂಡಿದ್ದರಿಂದ, ಆ ಇಡೀ ಸನ್ನಿವೇಶ ತಮಗೊಂದು ಸುಂದರ ಕನಸಿನಂತೆ ಭಾಸವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಯೂಟ್ಯೂಬ್ ಚಾನೆಲ್‌ನ ವಿಡಿಯೋವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಸೂರ್ಯವಂಶಿ, ನಾನು ನಿಮಗೆ ನಿಜವನ್ನೇ ಹೇಳುತ್ತೇನೆ. ನಾನು ಕೊಹ್ಲಿ ಅವರ ಅಪ್ಪಟ ಅಭಿಮಾನಿ. ಅಲ್ಲದೆ, ಮೊದಲಿನಿಂದಲೂ ನಾನು ಆರ್‌ಸಿಬಿ ಅಭಿಮಾನಿಯಾಗಿದ್ದೆ. ವಿರಾಟ್ ಭಯ್ಯಾ ನನ್ನ ಹೆಗಲ ಮೇಲೆ ಆ ರೀತಿ ಕೈಹಾಕಿ ಮಾತನಾಡಿಸುತ್ತಿದ್ದಾಗ ನನಗದು ನಿಜಕ್ಕೂ ಒಂದು ಕನಸಿನಂತೆ ಅನಿಸಿತು ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿರುವ ವೈಭವ್​, ಕೊಹ್ಲಿ ಭಯ್ಯಾ ನನ್ನೊಂದಿಗೆ ಮಾತನಾಡಿದ ರೀತಿಯನ್ನು ನೋಡಿದರೆ ಅವರು ಸ್ವತಃ ವಿರಾಟ್ ಕೊಹ್ಲಿ ಇರಬಹುದು ಎಂದು ಅನಿಸಲೇ ಇಲ್ಲ. ಒಬ್ಬ ಹಿರಿಯ ಸಹೋದರನಂತೆ ಅವರು ನನಗೆ ಎಲ್ಲವನ್ನೂ ಅರ್ಥ ಮಾಡಿಸಿದರು. ನಾನು ಪ್ರಸ್ತುತ ಏನನ್ನು ಚೆನ್ನಾಗಿ ಮಾಡುತ್ತಿದ್ದೇನೆ, ಇನ್ನೂ ಏನನ್ನು ಉತ್ತಮವಾಗಿ ಮಾಡಬೇಕು, ಭವಿಷ್ಯದಲ್ಲಿ ಯಾವುದರ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂಬುದನ್ನು ಪ್ರೀತಿಯಿಂದ ತಿಳಿಸಿಕೊಟ್ಟರು ಎಂದು ಆ ರೋಚಕ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಅದೇ ಐಪಿಎಲ್ ಸೀಸನ್‌ನಲ್ಲಿ ಸೂರ್ಯವಂಶಿ ಅವರು ವಿರಾಟ್ ಕೊಹ್ಲಿ ಅವರಿಂದ ತಮ್ಮ ಕ್ಯಾಪ್ ಮೇಲೆ ಆಟೋಗ್ರಾಫ್ ಪಡೆದುಕೊಂಡಿದ್ದರು. ಇಂಟರ್ವ್ಯೂನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಪಂದ್ಯಾವಳಿಯ ವೇಳೆ ತಮ್ಮ ಬಳಿ ಆರೆಂಜ್ ಕ್ಯಾಪ್ ಇಲ್ಲದ ಸಂದರ್ಭಗಳಲ್ಲೆಲ್ಲಾ, ಕೊಹ್ಲಿ ಅವರು ಸಹಿ ಮಾಡಿಕೊಟ್ಟಿದ್ದ ಅದೇ ವಿಶೇಷ ಕ್ಯಾಪ್ ಅನ್ನು ಧರಿಸುತ್ತಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಐಸಿಸಿ ಅಧ್ಯಕ್ಷರು ಹಾಗೂ ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯ್ ಶಾ ಅವರೊಂದಿಗಿನ ತಮ್ಮ ಒಡನಾಟದ ಬಗ್ಗೆಯೂ ಮಾತನಾಡಿರುವ ಸೂರ್ಯವಂಶಿ, ಅವರು ತಮ್ಮನ್ನು ಭೇಟಿಯಾದಾಗಲೆಲ್ಲಾ ಸದಾ ಕೆಲಸ ಮತ್ತು ಆಟದ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡುತ್ತಾರೆ ಎಂದು ಹೇಳಿದ್ದಾರೆ.
ಜಯ್ ಸರ್ ಅವರು ನನ್ನನ್ನು ಎಲ್ಲಿಯೇ ನೋಡಿದರೂ ಪ್ರೀತಿಯಿಂದ ಮಾತನಾಡಿಸುತ್ತಾರೆ ಮತ್ತು ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತಾರೆ. ಸದಾ ಆಟದ ಮೇಲೆ ಗಮನ ಕೇಂದ್ರೀಕರಿಸಬೇಕು, ಇನ್ನು ಬಹಳ ದೂರ ಸಾಗಬೇಕಿದೆ, ವಿನಮ್ರತೆಯಿಂದ ಇರಬೇಕು ಮತ್ತು ನನ್ನ ಕೆಲಸದ ಕಡೆಗೆ ಮಾತ್ರ ಸಂಪೂರ್ಣ ಗಮನ ಹರಿಸಬೇಕು ಎಂದು ಅವರು ನನಗೆ ಕಿವಿಮಾತು ಹೇಳುತ್ತಾರೆ ಎಂದು ಸೂರ್ಯವಂಶಿ ಹಂಚಿಕೊಂಡಿದ್ದಾರೆ.
ಇನ್ನು ಈ ಐಪಿಎಲ್ ಸೀಸನ್‌ನಲ್ಲಿ ಒಟ್ಟು 776 ರನ್‌ಗಳನ್ನು ಬಾರಿಸಿದ ವೈಭವ್ ಸೂರ್ಯವಂಶಿ, 237.30 ರ ಭರ್ಜರಿ ಸ್ಟ್ರೈಕ್-ರೇಟ್‌ನೊಂದಿಗೆ 'ಆರೆಂಜ್ ಕ್ಯಾಪ್' ಹಾಗೂ 'ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್' (MVP) ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಸೀಸನ್ ಮುಗಿಸಿದ್ದಾರೆ. ಇದರ ಬೆನ್ನಲ್ಲೇ ಶನಿವಾರದಂದು ವೈಭವ್​ ಅವರು ಭಾರತ ತಂಡಕ್ಕೆ ತಮ್ಮ ಚೊಚ್ಚಲ ಎಂಟ್ರಿಯನ್ನು ಖಚಿತಪಡಿಸಿಕೊಂಡಿದ್ದಾರೆ. ಐರ್ಲೆಂಡ್​ ಹಾಗೂ ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಗೆ ವೈಭವ್​ ಆಯ್ಕೆಯಾಗಿದ್ದಾರೆ. ಟೀಮ್ ಇಂಡಿಯಾ ಪರ ಆಡಲು ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ಗೌರವಕ್ಕೆ ಸೂರ್ಯವಂಶಿ ಪಾತ್ರರಾಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net