ಫೈನಲ್​ನಲ್ಲಿ ನಾವು ಗೆಲ್ಲಬಹುದಿತ್ತು ಆದ್ರೆ ಆ ಒಂದು ಮಿಸ್ಟೇಕ್​ನಿಂದ ಸೋತೆವು... ಶುಭಮಾನ್​ ಗಿಲ್​ ಅಚ್ಚರಿ ಹೇಳಿಕೆ! Shubman Gill

ಫೈನಲ್​ನಲ್ಲಿ ನಾವು ಗೆಲ್ಲಬಹುದಿತ್ತು ಆದ್ರೆ ಆ ಒಂದು ಮಿಸ್ಟೇಕ್​ನಿಂದ ಸೋತೆವು... ಶುಭಮಾನ್​ ಗಿಲ್​ ಅಚ್ಚರಿ ಹೇಳಿಕೆ! Shubman Gill
ಫೈನಲ್​ನಲ್ಲಿ ನಾವು ಗೆಲ್ಲಬಹುದಿತ್ತು ಆದ್ರೆ ಆ ಒಂದು ಮಿಸ್ಟೇಕ್​ನಿಂದ ಸೋತೆವು... ಶುಭಮಾನ್​ ಗಿಲ್​ ಅಚ್ಚರಿ ಹೇಳಿಕೆ! Shubman Gill
Published on

ಪ್ರಮುಖ ಮುಖ್ಯಾಂಶಗಳು

  • ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಫೈನಲ್​ ಪಂದ್ಯ
  • ಆರ್​ಸಿಬಿ ವಿರುದ್ಧ 5 ವಿಕೆಟ್‌ಗಳ ಸೋಲು ಅನುಭವಿಸುವುದರೊಂದಿಗೆ 2ನೇ ಬಾರಿ ಟ್ರೋಫಿ ಗೆಲ್ಲುವ ಗುಜರಾತ್​ ಟೈಟನ್ಸ್​ ಕನಸು ಭಗ್ನ
  • ಬ್ಯಾಟಿಂಗ್ ವಿಫಲತೆ, ಪವರ್ ಪ್ಲೇನಲ್ಲಿ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ಸೋಲಿಗೆ ಕಾರಣ ಎಂದು ಶುಭಮಾನ್​ ಗಿಲ್​
  • ನಮ್ಮ ಬೌಲರ್‌ಗಳು ಪವರ್ ಪ್ಲೇನಲ್ಲಿ ವಿಕೆಟ್ ಪಡೆಯಲು ವಿಫಲರಾದರು ಎಂದ ಗುಜರಾತ್​ ನಾಯಕ ಗಿಲ್​
Shubman Gill : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ನಡೆದ ಐಪಿಎಲ್ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ 5 ವಿಕೆಟ್‌ಗಳ ಸೋಲನ್ನು ಅನುಭವಿಸುವುದರೊಂದಿಗೆ, ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಅವರ ಕನಸು ಭಗ್ನಗೊಂಡಿದೆ. ಈ ಸೋಲಿನ ಕುರಿತು ಮಾತನಾಡಿದ ಗುಜರಾತ್ ಟೈಟನ್ಸ್ ನಾಯಕ ಶುಭಮಾನ್ ಗಿಲ್, ಬ್ಯಾಟಿಂಗ್ ವಿಫಲತೆ, ಪವರ್ ಪ್ಲೇನಲ್ಲಿ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ಹಾಗೂ ಪ್ರಮುಖ ವಿಕೆಟ್‌ಗಳನ್ನು ಕಸಿದುಕೊಳ್ಳಲು ಸಾಧ್ಯವಾಗದೇ ಇದ್ದಿದ್ದೇ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಗುಜರಾತ್ ಬ್ಯಾಟ್ಸ್‌ಮನ್‌ಗಳ ಪೈಕಿ ವಾಷಿಂಗ್ಟನ್ ಸುಂದರ್ (37 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅಜೇಯ 50) ಅರ್ಧಶತಕ ಸಿಡಿಸಿ ಗಮನ ಸೆಳೆದರು. ಇನ್ನು ಆರ್‌ಸಿಬಿ ಬೌಲರ್‌ಗಳಲ್ಲಿ ರಸಿಖ್ ಸಲಾಮ್ ದಾರ್ ಮೂರು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ ಎರಡು ವಿಕೆಟ್ ಹಾಗೂ ಕೃನಾಲ್ ಪಾಂಡ್ಯ ಒಂದು ವಿಕೆಟ್ ಉರುಳಿಸಿದರು.
ಬಳಿಕ 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯಭೇರಿ ಬಾರಿಸಿತು. ಬೆಂಗಳೂರು ಪರ ವಿರಾಟ್ ಕೊಹ್ಲಿ (42 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಅಜೇಯ 75 ರನ್​) ಭರ್ಜರಿ ಅರ್ಧಶತಕ ಬಾರಿಸಿದರೆ, ವೆಂಕಟೇಶ್ ಅಯ್ಯರ್ (16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 32) ಉತ್ತಮ ಸಾಥ್ ನೀಡಿದರು. ಗುಜರಾತ್ ಪರ ರಶೀದ್ ಖಾನ್ ಎರಡು ವಿಕೆಟ್ ಪಡೆದರೆ, ಸಿರಾಜ್, ರಬಾಡ ಮತ್ತು ಅರ್ಷದ್ ಖಾನ್ ತಲಾ ಒಂದು ವಿಕೆಟ್ ಪಡೆದರು.

ಪಿಚ್ ಅಷ್ಟೇನೂ ನಿಧಾನಗತಿಯಲ್ಲಿರಲಿಲ್ಲ

ಪಂದ್ಯದ ಸೋಲಿನ ನಂತರ ಮಾತನಾಡಿದ ಗುಜರಾತ್ ಟೈಟನ್ಸ್ ನಾಯಕ ಶುಭಮಾನ್ ಗಿಲ್, ನಾವು ಬ್ಯಾಟಿಂಗ್‌ನಲ್ಲಿ 180 ರಿಂದ 190 ರನ್ ಗಳಿಸಿದ್ದರೆ ಪಂದ್ಯ ರೋಚಕ ಹಂತಕ್ಕೆ ತಲುಪುತ್ತಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪಿಚ್ ಅಷ್ಟೇನೂ ನಿಧಾನಗತಿಯಲ್ಲಿರಲಿಲ್ಲ, ಆರಂಭದ ನಾಲ್ಕು ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಸ್ವಿಂಗ್ ಸಿಕ್ಕಿದ್ದರಿಂದ ನಾವು ಬೇಗನೆ ವಿಕೆಟ್ ಕಳೆದುಕೊಂಡೆವು. ಇದರಿಂದಾಗಿ ಮಧ್ಯದ ಓವರ್‌ಗಳಲ್ಲಿ ರನ್ ಗಳಿಸುವ ವೇಗ ಕುಂಠಿತಗೊಂಡು, ನಾವು ಅಂದುಕೊಂಡ ಮೊತ್ತವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಗಿಲ್​ ಬೇಸರ ವ್ಯಕ್ತಪಡಿಸಿದರು.

ವಿಕೆಟ್ ಪಡೆಯಲು ವಿಫಲ

ತಾವು ಆಡುತ್ತಿರುವುದು ಫೈನಲ್ ಪಂದ್ಯ ಎಂಬ ಅರಿವು ತಮಗಿತ್ತು ಎಂದ ಗಿಲ್, ಕೇವಲ 150 ರಿಂದ 160 ರನ್ ಗಳಿಸಿದ ಹೊರತಾಗಿಯೂ ಪವರ್ ಪ್ಲೇನಲ್ಲಿ ಎರಡು ವಿಕೆಟ್ ಪಡೆದಿದ್ದರೆ ಪಂದ್ಯವನ್ನು ಗೆಲ್ಲಬಹುದಿತ್ತು ಎಂದು ಅಭಿಪ್ರಾಯಪಟ್ಟರು. ಆದರೆ, ತಮ್ಮ ಬೌಲರ್‌ಗಳು ಪವರ್ ಪ್ಲೇನಲ್ಲಿ ವಿಕೆಟ್ ಪಡೆಯಲು ವಿಫಲರಾದರು ಮತ್ತು ಇದೇ ಸಮಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಪವರ್ ಪ್ಲೇನಲ್ಲಿ 15 ರಿಂದ 20 ರನ್‌ಗಳನ್ನು ಹೆಚ್ಚುವರಿಯಾಗಿ ಗಳಿಸುವ ಮೂಲಕ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು ಎಂದು ಗಿಲ್​ ತಿಳಿಸಿದರು.

ಕಂಬ್ಯಾಕ್ ಮಾಡಿದ ರೀತಿ ಶ್ಲಾಘನೀಯ

ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಈ ಸೀಸನ್‌ನಿಂದ ಕಲಿಯಲು ಹಲವು ಪಾಸಿಟಿವ್​ ಅಂಶಗಳಿವೆ ಎಂದು ಶುಭಮಾನ್ ಗಿಲ್ ತಿಳಿಸಿದರು. ಟೂರ್ನಿಯಲ್ಲಿ ತಮ್ಮದು ಅತ್ಯುತ್ತಮ ಬೌಲಿಂಗ್ ತಂಡಗಳಲ್ಲಿ ಒಂದಾಗಿತ್ತು ಎಂದ ಅವರು, ಆರಂಭಿಕ ಎರಡು ಪಂದ್ಯಗಳನ್ನು ಸೋತ ನಂತರ ತಂಡವು ಭರ್ಜರಿಯಾಗಿ ಕಂಬ್ಯಾಕ್ ಮಾಡಿದ ರೀತಿ ನಿಜಕ್ಕೂ ಪ್ರಶಂಸನೀಯ ಎಂದು ಶ್ಲಾಘಿಸಿದರು.
ತಾವು ಮಾಡಿದ ತಪ್ಪುಗಳಿಂದ ನಿರಂತರವಾಗಿ ಕಲಿಯುವುದನ್ನು ಮುಂದುವರಿಸುವುದಾಗಿ ಮತ್ತು ಇನ್ನೂ ಅನೇಕ ವಿಷಯಗಳಲ್ಲಿ ಸುಧಾರಣೆ ಕಾಣಬೇಕಿದೆ ಎಂದು ಗಿಲ್ ಹೇಳಿದರು. ಈ ಮಾತುಗಳನ್ನು ತಾವು ಸೋತಿರುವ ಕಾರಣಕ್ಕೆ ಹೇಳುತ್ತಿಲ್ಲ, ಒಂದು ವೇಳೆ ಪಂದ್ಯವನ್ನು ಗೆದ್ದಿದ್ದರೂ ಇದೇ ಮಾತನ್ನು ಹೇಳುತ್ತಿದ್ದೆ ಎಂದ ಗಿಲ್​, ಏನೇ ಆದರೂ ಟೂರ್ನಿಯಲ್ಲಿ ತಮ್ಮ ತಂಡ ನೀಡಿದ ಪ್ರದರ್ಶನದ ಬಗ್ಗೆ ತಮಗೆ ಸಂತೋಷವಿದೆ ಎಂದು ನಾಯಕ ಗಿಲ್ ತಿಳಿಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net