ನಮ್ಮ ಹೀನಾಯ ಸೋಲಿಗೆ ನಾವು ಮಾಡಿದ ಈ ಒಂದು ತಪ್ಪೇ ಕಾರಣ... ಅಚ್ಚರಿ ಹೇಳಿಕೆ ನೀಡಿದ ಶುಭಮಾನ್ ಗಿಲ್! Shubman Gill

ನಮ್ಮ ಹೀನಾಯ ಸೋಲಿಗೆ ನಾವು ಮಾಡಿದ ಈ ಒಂದು ತಪ್ಪೇ ಕಾರಣ... ಅಚ್ಚರಿ ಹೇಳಿಕೆ ನೀಡಿದ ಶುಭಮಾನ್ ಗಿಲ್! Shubman Gill
ನಮ್ಮ ಹೀನಾಯ ಸೋಲಿಗೆ ನಾವು ಮಾಡಿದ ಈ ಒಂದು ತಪ್ಪೇ ಕಾರಣ... ಅಚ್ಚರಿ ಹೇಳಿಕೆ ನೀಡಿದ ಶುಭಮಾನ್ ಗಿಲ್! Shubman Gill
Published on

ಪ್ರಮುಖ ಮುಖ್ಯಾಂಶಗಳು

  • ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲುಂಡ ಗುಜರಾತ್​ ಟೈಟಾನ್ಸ್​
  • 92 ರನ್‌ಗಳ ಭಾರಿ ಅಂತರದಿಂದ ಸೋಲನುಭವಿಸಿದ ನಾಯಕ ಶುಭಮಾನ್​ ಗಿಲ್​ ಪಡೆ
  • ಕಳಪೆ ಫೀಲ್ಡಿಂಗ್‌ನಿಂದಾಗಿಯೇ ನಾವು ಗೆಲ್ಲಬೇಕಾಗಿದ್ದ ಪಂದ್ಯವನ್ನು ಕೈಚೆಲ್ಲಿದೆವು ಎಂದ ಗಿಲ್​
  • ಪಂದ್ಯದಲ್ಲಿ ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ್ದೇ ನಮಗೆ ಭಾರಿ ಬೆಲೆಯಾಗಿ ಪರಿಣಮಿಸಿತು ಎಂದ ಜಿಟಿ ನಾಯಕ
Shubman Gill : ಧರ್ಮಶಾಲಾದಲ್ಲಿ ಮಂಗಳವಾರ (ಮೇ 26) ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 92 ರನ್‌ಗಳ ಭಾರಿ ಅಂತರದಿಂದ ಸೋಲನುಭವಿಸಿದ ಬಳಿಕ ಮಾತನಾಡಿದ ಗುಜರಾತ್ ಟೈಟನ್ಸ್ ನಾಯಕ ಶುಭಮಾನ್ ಗಿಲ್, ಕಳಪೆ ಫೀಲ್ಡಿಂಗ್‌ನಿಂದಾಗಿಯೇ ನಾವು ಗೆಲ್ಲಬೇಕಾಗಿದ್ದ ಪಂದ್ಯವನ್ನು ಕೈಚೆಲ್ಲಿದೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯದ ಮೊದಲ 12 ರಿಂದ 13 ಓವರ್‌ಗಳವರೆಗೆ ನಮ್ಮ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪೂರ್ಣ ಹಿಡಿತ ಸಾಧಿಸಿದ್ದರು, ಆದರೆ ಆ ಬಳಿಕ ಕೈಚೆಲ್ಲಿದ ಕ್ಯಾಚ್‌ಗಳು ನಮಗೆ ಭಾರಿ ಬೆಲೆಯಾಗಿ ಪರಿಣಮಿಸಿದವು ಎಂದು ಅವರು ಒಪ್ಪಿಕೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರ್‌ಸಿಬಿ ಪರ ನಾಯಕನ ಆಟ ಪ್ರದರ್ಶಿಸಿದ ರಜತ್ ಪಾಟೀದಾರ್ ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಬ್ಬರದ 93 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ (25 ಎಸೆತಗಳಲ್ಲಿ 43 ರನ್, 5 ಬೌಂಡರಿ, 1 ಸಿಕ್ಸರ್) ಮತ್ತು ಕೃಣಾಲ್ ಪಾಂಡ್ಯ (28 ಎಸೆತಗಳಲ್ಲಿ 43 ರನ್, 5 ಬೌಂಡರಿ, 2 ಸಿಕ್ಸರ್) ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುಜರಾತ್ ಟೈಟನ್ಸ್ ತಂಡದ ಬೌಲರ್‌ಗಳಲ್ಲಿ ಕಗಿಸೊ ರಬಾಡ ಮತ್ತು ಜೇಸನ್ ಹೋಲ್ಡರ್ ತಲಾ ಎರಡು ವಿಕೆಟ್ ಪಡೆದರೆ, ಪ್ರಸಿದ್ಧ ಕೃಷ್ಣ ಒಂದು ವಿಕೆಟ್ ಉರುಳಿಸಿದರು.
255 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯಿತು. ಗುಜರಾತ್ ಬ್ಯಾಟ್ಸ್‌ಮನ್ ರಾಹುಲ್ ತೆವಾಟಿಯಾ (68 ರನ್​, 43 ಎಸೆತ, 8 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ತೆವಾಟಿಯಾ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ದಾಖಲಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಜೇಕಬ್​ ಡಫಿ 3 ವಿಕೆಟ್ ಕಸಿದು ಎದುರಾಳಿಗಳಿಗೆ ಆಘಾತ ನೀಡಿದರು. ಇವರಿಗೆ ಸೂಕ್ತ ಬೆಂಬಲ ನೀಡಿದ ಹಿರಿಯ ವೇಗಿ ಭುವನೇಶ್ವರ್ ಕುಮಾರ್, ರಸಿಖ್ ಸಲಾಮ್ ಮತ್ತು ಆಲ್‌ರೌಂಡರ್ ಕೃಣಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ಜೋಶ್ ಹ್ಯಾಜಲ್‌ವುಡ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಭರ್ಜರಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆರ್‌ಸಿಬಿ ತಂಡ ಕ್ವಾಲಿಫೈಯರ್-1 ಪಂದ್ಯದಲ್ಲಿ 92 ರನ್‌ಗಳ ಬೃಹತ್ ಜಯ ಸಾಧಿಸಿತು.

ಕಳಪೆ ಫೀಲ್ಡಿಂಗ್​ನಿಂದಲೇ ಸೋಲು

ಆರ್‌ಸಿಬಿ ವಿರುದ್ಧದ ಹೀನಾಯ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟನ್ಸ್ ನಾಯಕ ಶುಭಮಾನ್ ಗಿಲ್, ತಮ್ಮ ತೀವ್ರ ನಿರಾಶೆಯನ್ನು ಹೊರಹಾಕಿದ್ದಾರೆ. ಪಿಚ್ ವರ್ತಿಸಿದ ರೀತಿಗೆ ಆಶ್ಚರ್ಯವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೇನೂ ಅಚ್ಚರಿಯಾಗಿಲ್ಲ, ನಿಜ ಹೇಳಬೇಕೆಂದರೆ ಆರ್‌ಸಿಬಿ ಇನ್ನಿಂಗ್ಸ್‌ನ ಮೊದಲ 12 ರಿಂದ 13 ಓವರ್‌ಗಳವರೆಗೆ ನಾವು ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದೆವು. ಆದರೆ, ನಮ್ಮ ಕಳಪೆ ಫೀಲ್ಡಿಂಗ್ ಇಡೀ ಪಂದ್ಯವನ್ನು ಕೈತಪ್ಪಿಸಿತು. ಪ್ರಮುಖ ಹಂತಗಳಲ್ಲಿ ಕೆಲವು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ್ದಷ್ಟೇ ಅಲ್ಲದೆ, ಮೈದಾನದಲ್ಲಿನ ಗ್ರೌಂಡ್ ಫೀಲ್ಡಿಂಗ್ ಕೂಡ ತೀರಾ ಕಳಪೆಯಾಗಿತ್ತು ಎಂದು ಗಿಲ್​ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ತಮ್ಮ ತಂಡ ಒಗ್ಗಟ್ಟಿನ ಪ್ರದರ್ಶನ ನೀಡಲು ವಿಫಲವಾಯಿತು ಎಂದು ಬೇಸರ ವ್ಯಕ್ತಪಡಿಸಿದ ಗಿಲ್, ಈ ಪಂದ್ಯದಿಂದ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಈ ಸೋಲನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮರೆತು ಮುಂದೆ ಸಾಗಲಿದ್ದೇವೆ. ಮುಂದಿನ ತಂಡದ ಮೀಟಿಂಗ್​ ಹಾಗೂ ಅಭ್ಯಾಸದ ಅವಧಿಗಳಲ್ಲಿ ಫೀಲ್ಡಿಂಗ್ ಸುಧಾರಣೆಯ ಬಗ್ಗೆ ನಾವು ಖಂಡಿತವಾಗಿಯೂ ಗಂಭೀರವಾಗಿ ಚರ್ಚಿಸಲಿದ್ದೇವೆ. ಸದ್ಯ ನಮ್ಮ ಸಂಪೂರ್ಣ ಗಮನ ಮೊಹಾಲಿಯಲ್ಲಿ ನಡೆಯಲಿರುವ ಕ್ವಾಲಿಫೈಯರ್-2 ಪಂದ್ಯದ ಮೇಲಿದ್ದು, ಅಲ್ಲಿ ಬಲಿಷ್ಠವಾಗಿ ಕಂಬ್ಯಾಕ್ ಮಾಡಲು ಎದುರು ನೋಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ಪವರ್ ಪ್ಲೇನಲ್ಲಿ ಉತ್ತಮ ಆರಂಭ ಪಡೆಯುವುದು ಅತ್ಯಂತ ಮುಖ್ಯ ಎಂದು ವಿಶ್ಲೇಷಿಸಿದ ಗಿಲ್, ಪವರ್ ಪ್ಲೇ ಓವರ್‌ಗಳಲ್ಲಿ ಉತ್ತಮವಾಗಿ ರನ್ ಕಲೆಹಾಕಿದರೆ ಈ ಮೈದಾನದಲ್ಲಿ ಯಾವುದೇ ಗುರಿಯನ್ನಾದರೂ ಬೆನ್ನಟ್ಟಬಹುದು, ಏಕೆಂದರೆ ಇಲ್ಲಿನ ಔಟ್‌ಫೀಲ್ಡ್ ತುಂಬಾ ವೇಗವಾಗಿದೆ. ಆದರೆ, ನಮ್ಮ ಬ್ಯಾಟಿಂಗ್ ವೇಳೆ ಸಾಯಿ ಸುದರ್ಶನ್ 'ಹಿಟ್ ವಿಕೆಟ್' ಆಗಿ ಔಟ್ ಆಗಿದ್ದು ನಮ್ಮ ದುರದೃಷ್ಟವಾಗಿತ್ತು. ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ಅತ್ಯಂತ ವಿರಳವಾಗಿ ನಡೆಯುತ್ತವೆ ಎಂದು ಪಂದ್ಯದ ಪ್ರಮುಖ ತಿರುವಿನ ಬಗ್ಗೆ ಮಾತನಾಡಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net