ಎಲ್ಲವೂ ಅವರಿಗಾಗಿ... ಭರ್ಜರಿ ಶತಕದ ಬೆನ್ನಲ್ಲೇ L ಸಂಭ್ರಮಾಚರಣೆ ಹಿಂದಿನ ಕಾರಣ ಬಿಚ್ಚಿಟ್ಟ ಅಭಿಷೇಕ್​ ಶರ್ಮಾ! Abhishek Sharma

ಎಲ್ಲವೂ ಅವರಿಗಾಗಿ... ಭರ್ಜರಿ ಶತಕದ ಬೆನ್ನಲ್ಲೇ L ಸಂಭ್ರಮಾಚರಣೆ ಹಿಂದಿನ ಕಾರಣ ಬಿಚ್ಚಿಟ್ಟ ಅಭಿಷೇಕ್​ ಶರ್ಮಾ! Abhishek Sharma
ಎಲ್ಲವೂ ಅವರಿಗಾಗಿ... ಭರ್ಜರಿ ಶತಕದ ಬೆನ್ನಲ್ಲೇ L ಸಂಭ್ರಮಾಚರಣೆ ಹಿಂದಿನ ಕಾರಣ ಬಿಚ್ಚಿಟ್ಟ ಅಭಿಷೇಕ್​ ಶರ್ಮಾ! Abhishek Sharma
Published on

ಪ್ರಮುಖ ಮುಖ್ಯಾಂಶಗಳು

  • ಬಿರುಗಾಳಿಯ ಬ್ಯಾಟಿಂಗ್​ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ ಅಭಿಷೇಕ್ ಶರ್ಮಾ
  • ನಿನ್ನೆ 68 ಎಸೆತಗಳಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ ಅಜೇಯ 135 ರನ್ ಗಳಿಸಿದ ಅಭಿ
  • ಸನ್‌ರೈಸರ್ಸ್ ಹೈದರಾಬಾದ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಭಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ
  • ಪ್ರಶಸ್ತಿ ಸ್ವೀಕರಿಸಿದ ಬಳಿಕ ಅನೇಕ ಆಸಕ್ತಿದಾಯಕ ವಿಷಯಗಳ ಬಗ್ಗೆ ಮಾತನಾಡಿದ ಅಭಿಷೇಕ್
Abhishek Sharma : ಸನ್‌ರೈಸರ್ಸ್ ಹೈದರಾಬಾದ್‌ (SRH) ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ತಮ್ಮ ಬಿರುಗಾಳಿಯ ಬ್ಯಾಟಿಂಗ್​ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಮಂಗಳವಾರ (ಏಪ್ರಿಲ್​ 21) ಹೈದರಾಬಾದ್​ನ ಉಪ್ಪಲ್ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಅಭಿಷೇಕ್​, ಕೇವಲ 68 ಎಸೆತಗಳಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ ಅಜೇಯ 135 ರನ್ ಗಳಿಸಿದರು. ಅಲ್ಲದೆ, ಎಸ್​ಆರ್​ಎಚ್​ ತಂಡ ಡೆಲ್ಲಿ ವಿರುದ್ಧ 47 ರನ್‌ಗಳಿಂದ ರೋಚಕ ಜಯ ಸಾಧಿಸಿತು. ಸನ್‌ರೈಸರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಭಿಷೇಕ್ ಶರ್ಮಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಅಭಿಷೇಕ್ ಶರ್ಮಾ ಅವರು ಅನೇಕ ಆಸಕ್ತಿದಾಯಕ ವಿಷಯಗಳ ಬಗ್ಗೆ ಮಾತನಾಡಿದರು. ತಮ್ಮ ಶತಕವನ್ನು ಎಸ್​ಆರ್​ಎಚ್​ ತಂಡದ ಅಭಿಮಾನಿಗಳಿಗೆ ಹಾಗೂ ತಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಅರ್ಪಿಸುವುದಾಗಿ ಹೇಳಿದರು. ಇದೇ ವೇಳೆ ಪಂದ್ಯದ ಬಗ್ಗೆ ಮಾತನಾಡಿದ ಅಭಿ, ಸ್ಪಷ್ಟ ಯೋಜನೆಯೊಂದಿಗೆ ಮೈದಾನಕ್ಕೆ ಇಳಿದಿದ್ದಾಗಿ ತಿಳಿಸಿದರು. ನಾನು ಮತ್ತು ಹೆಡ್ ಪವರ್ ಪ್ಲೇನ ಸಂಪೂರ್ಣ ಲಾಭ ಪಡೆಯಲು ಬಯಸಿದ್ದೆವು ಎಂದರು.
ಆರಂಭದಲ್ಲಿ ಪಿಚ್ ಸ್ವಲ್ಪ ನಿಧಾನವಾಗಿತ್ತು. ಹೀಗಾಗಿ, ನಮ್ಮ ಯೋಜನೆಗಳನ್ನು ಬದಲಾಯಿಸಬೇಕಾಯಿತು. ಆದ್ದರಿಂದ ಆರಂಭದಲ್ಲಿ ರನ್​ ಗಳಿಕೆ ಸ್ವಲ್ಪ ನಿಧಾನವಾಯಿತು. ಆದಾಗ್ಯೂ, ಪವರ್ ಪ್ಲೇನಲ್ಲಿ ಯಾವಾಗಲೂ ಆಕ್ರಮಣಕಾರಿಯಾಗಿ ಆಡಲು ನಿರ್ಧರಿಸಿದ್ದೇನೆ ಎಂದು ಅಭಿ ಹೇಳಿದರು. ಉಪ್ಪಲ್ ಮೈದಾನದಲ್ಲಿ ರನ್ ಗಳಿಸುವುದೆಂದರೆ ಯಾವಾಗಲೂ ನನಗೆ ವಿಶೇಷ ಭಾವನೆ. ಇದನ್ನು ಹಿಂದೆಯೂ ಹಲವು ಬಾರಿ ಹೇಳಿದ್ದೇನೆ ಎಂದರು.
ಏನೇ ಆಗಲಿ ನಾನು ಯಾವಾಗಲೂ ಪ್ರೇಕ್ಷಕರನ್ನು ರಂಜಿಸಲು ಬಯಸುತ್ತೇನೆ. ಸನ್‌ರೈಸರ್ಸ್ ಹೈದರಾಬಾದ್​ ತಂಡ ನೀಡಿದ ಸ್ವಾತಂತ್ರ್ಯ ಮತ್ತು ಅವಕಾಶಗಳು ನಾನು ಈ ಮಟ್ಟಕ್ಕೆ ಏರಲು ಕಾರಣ. 2024ರ ಐಪಿಎಲ್​ ಸೀಸನ್​ ನನ್ನ ಆಟದಲ್ಲಿ ಗಮನಾರ್ಹ ಬದಲಾವಣೆ ತಂದಿತು. ಅಂದಿನಿಂದ ತಂಡದಲ್ಲಿನ ವಾತಾವರಣವು ತುಂಬಾ ಉತ್ತಮವಾಗಿದೆ. ಯಶಸ್ಸನ್ನು ಮಾತ್ರವಲ್ಲದೆ, ಸೋತಾಗಲೂ ಹುಡುಗರನ್ನು ಪ್ರೋತ್ಸಾಹಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ ಎಂದು ಅಭಿ ಹೇಳಿದರು.
ಎಲ್​ ಸಂಭ್ರಮಾಚರಣೆ ಬಗ್ಗೆ ಮಾತು
ಶತಕ ಬಾರಿಸಿದ ನಂತರ ಮಾಡುವ ಎಲ್ ಸೆಲೆಬ್ರೇಷನ್ ಬಗ್ಗೆ ಮಾತನಾಡಿದ ಅಭಿ, ಬಹಳ ದಿನಗಳಿಂದ ನಾನು ಹೀಗೆ ಆಚರಿಸುತ್ತಿದ್ದೇನೆ. ಅಭಿಮಾನಿಗಳು ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ಹೊರಗೆಯೂ ಸಾಕಷ್ಟು ಬೆಂಬಲ ನೀಡುತ್ತಾರೆ. ಅವರು ನೀಡುವ ಪ್ರೀತಿಯಲ್ಲಿ ಸ್ವಲ್ಪವಾದರೂ ಹಿಂತಿರುಗಿಸಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಹೀಗೆ ಆಚರಿಸುತ್ತೇನೆ ಎಂದು ಹೇಳಿದರು.
ಇಂದು ನನ್ನ ಹೆತ್ತವರ ಮುಂದೆ ಶತಕ ಗಳಿಸಿದ್ದು ತುಂಬಾ ವಿಶೇಷ ಎಂದು ಅಭಿ ಹೇಳಿದರು. ಸೋಂಕಿನಿಂದಾಗಿ ನನ್ನ ಸಹೋದರಿ ಇಂದಿನ ಪಂದ್ಯಕ್ಕೆ ಬರಲು ಸಾಧ್ಯವಾಗಲಿಲ್ಲ. ನಾನು 12 ವರ್ಷದೊಳಗಿನವರ ತಂಡದಲ್ಲಿ ಆಡುವಾಗ ನನ್ನ ತಂದೆ ಯಾವಾಗಲೂ ಪರದೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು. ಇದೀಗ ಹೈದರಾಬಾದ್‌ನಲ್ಲಿಯೂ ಅವರು ಯಾವಾಗಲೂ ಅಲ್ಲಿಯೇ ಕುಳಿತುಕೊಳ್ಳುತ್ತಾರೆ. ನಾನು ನಾನ್-ಸ್ಟ್ರೈಕರ್‌ನ ತುದಿಯಲ್ಲಿದ್ದಾಗಲೆಲ್ಲಾ, ಯಾವಾಗಲೂ ಸನ್ನೆಗಳೊಂದಿಗೆ ಹೇಗೆ ಆಡಬೇಕೆಂದು ಹೇಳುತ್ತಾರೆ. ಅದು ಇಂದಿಗೂ ಮುಂದುವರೆದಿದೆ. ಪೋಷಕರು ಮತ್ತು ಸ್ನೇಹಿತರ ಮುಂದೆ ಅದ್ಭುತ ಪ್ರದರ್ಶನ ನೀಡುವುದು ಯಾವಾಗಲೂ ಬಹಳ ವಿಶೇಷವಾಗಿದೆ ಎಂದು ಅಭಿಷೇಕ್ ಶರ್ಮಾ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net