252 ಥಾರ್, 338 ಲಂಡನ್ ಟ್ರಿಪ್... RR​ ತಂಡಕ್ಕೆ ವೈಭವ್ ತಂದುಕೊಟ್ಟ ಲಾಭದ ಲೆಕ್ಕಾಚಾರಕ್ಕೆ ಕ್ರೀಡಾ ಜಗತ್ತು ಶಾಕ್! Vaibhav Sooryavanshi

252 ಥಾರ್, 338 ಲಂಡನ್ ಟ್ರಿಪ್... RR​ ತಂಡಕ್ಕೆ ವೈಭವ್ ತಂದುಕೊಟ್ಟ ಲಾಭದ ಲೆಕ್ಕಾಚಾರಕ್ಕೆ ಕ್ರೀಡಾ ಜಗತ್ತು ಶಾಕ್! Vaibhav Sooryavanshi
252 ಥಾರ್, 338 ಲಂಡನ್ ಟ್ರಿಪ್... RR​ ತಂಡಕ್ಕೆ ವೈಭವ್ ತಂದುಕೊಟ್ಟ ಲಾಭದ ಲೆಕ್ಕಾಚಾರಕ್ಕೆ ಕ್ರೀಡಾ ಜಗತ್ತು ಶಾಕ್! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್ ಹರಾಜಿನಲ್ಲಿ ವೈಭವ್​ ಸೂರ್ಯವಂಶಿ ಪಡೆದಿದ್ದು ಕೇವಲ 1.10 ಕೋಟಿ ರೂಪಾಯಿಗೆ
  • ಆದರೆ ತನ್ನನ್ನು ಖರೀದಿ ಮಾಡಿದ ರಾಜಸ್ಥಾನ ರಾಯಲ್ಸ್​ ತಂಡಕ್ಕೆ ವೈಭವ್​ ತಂದುಕೊಟ್ಟ ಲಾಭ ಹುಬ್ಬೇರಿಸುವಂಥದ್ದು
  • ಬರೋಬ್ಬರಿ 33.87 ಕೋಟಿ ರೂ. ಲಾಭದ ಮೂಲಕ ಐಪಿಎಲ್ ಇತಿಹಾಸದಲ್ಲೆ ದಾಖಲೆ ಬರೆದ ವಂಡರ್​ ಕಿಡ್​
  • ಇಡೀ ಸೀಸನ್‌ನಲ್ಲಿ ಅತಿ ಹೆಚ್ಚು ಲಾಭ ತಂದುಕೊಟ್ಟ ಆಟಗಾರರ ಪಟ್ಟಿಯಲ್ಲಿ ವೈಭವ್​ಗೆ ಮೂರನೇ ಸ್ಥಾನ
Vaibhav Sooryavanshi : ಐಪಿಎಲ್ 2025ರ ಹರಾಜಿನಲ್ಲಿ ಕೇವಲ 1.10 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿರುವ 15 ವರ್ಷದ ವೈಭವ್ ಸೂರ್ಯವಂಶಿ, ಪ್ರಸಕ್ತ 19ನೇ ಆವೃತ್ತಿಯ ಐಪಿಎಲ್​ ಸೀಸನ್‌ನಲ್ಲಿ ಬ್ಯಾಟಿಂಗ್ ಮೂಲಕ ರನ್ ಮಳೆ ಹರಿಸಿದ್ದಷ್ಟೇ ಅಲ್ಲದೆ ಫ್ರಾಂಚೈಸಿಗೆ ಬರೋಬ್ಬರಿ 33.87 ಕೋಟಿ ರೂಪಾಯಿಯ ಭಾರಿ ಲಾಭವನ್ನು ತಂದುಕೊಡುವ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ‘ಮನಿ-ಮ್ಯಾಜಿಕ್’ ಹೂಡಿಕೆಯಾಗಿ ಹೊರಹೊಮ್ಮಿದ್ದಾರೆ!
ಪ್ರಸಕ್ತ 2026ನೇ ಸೀಸನ್‌ನ 16 ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ನೀಡಿದ ಪ್ರದರ್ಶನವನ್ನು ಬಾಲ್-ಬೈ-ಬಾಲ್ ಡೇಟಾ ಆಧಾರಿತ ಇಂಪ್ಯಾಕ್ಟ್ ಮಾಡೆಲ್ ಮೂಲಕ ಲೆಕ್ಕ ಹಾಕಿದಾಗ ಅದರ ಮೌಲ್ಯ ಬರೋಬ್ಬರಿ 34.97 ಕೋಟಿ ರೂ. ಎಂದು ತಿಳಿದುಬಂದಿದೆ. ಇದರ ಮುಖೇನ ಫ್ರಾಂಚೈಸಿಗೆ ಸಿಕ್ಕ ನಿವ್ವಳ ಲಾಭ 33.87 ಕೋಟಿ ರೂ. ಹಾಗೂ ಹೂಡಿಕೆಯ ಮೇಲಿನ ಆದಾಯ ಬರೋಬ್ಬರಿ 31.79 ಪಟ್ಟು ಹೆಚ್ಚಾಗಿದೆ.
ಇಡೀ ಸೀಸನ್‌ನಲ್ಲಿ ಅತಿ ಹೆಚ್ಚು ಲಾಭ ತಂದುಕೊಟ್ಟ ಆಟಗಾರರ ಪಟ್ಟಿಯಲ್ಲಿ ವೈಭವ್​ ಮೂರನೇ ಸ್ಥಾನದಲ್ಲಿದ್ದು, ಇವರಿಗಿಂತ ಮೇಲಿರುವ ಶುಭಮಾನ್ ಗಿಲ್ (16.50 ಕೋಟಿ ರೂ.) ಮತ್ತು ರಜತ್ ಪಾಟೀದಾರ್ (11.00 ಕೋಟಿ ರೂ.) ಅವರನ್ನು ಖರೀದಿಸಲು ಫ್ರಾಂಚೈಸಿಗಳು ಭಾರೀ ಮೊತ್ತವನ್ನು ವೆಚ್ಚ ಮಾಡಿದ್ದವು. ಆದರೆ ಸೂರ್ಯವಂಶಿ ತೀರಾ ಕಡಿಮೆ ಬೆಲೆಗೆ ಸಿಕ್ಕಿ ಅವರಷ್ಟೇ ಸಮಾನವಾದ ಲಾಭವನ್ನು ತಂದುಕೊಟ್ಟಿದ್ದಾರೆ.
ಅಂದಹಾಗೆ, ಈ ಇಂಪ್ಯಾಕ್ಟ್ ಮಾಡೆಲ್, ಆಟಗಾರರ ಹೆಸರಿನ ಪ್ರಸಿದ್ಧಿಗೆ ಯಾವುದೇ ಮೌಲ್ಯ ನೀಡುವುದಿಲ್ಲ, ಬದಲಿಗೆ ಅವರು ಎದುರಿಸಿದ ಪ್ರತಿ ಎಸೆತದ ನಿಜವಾದ ಮೌಲ್ಯವನ್ನು ಮಾತ್ರ ಲೆಕ್ಕಾಚಾರ ಮಾಡುತ್ತದೆ. ಈ ಮಾಡೆಲ್ ಪ್ರಕಾರ, ಸೂರ್ಯವಂಶಿ ಆಡಿದ 16 ಪಂದ್ಯಗಳಲ್ಲಿ 7 ಪಂದ್ಯಗಳು ಅತ್ಯುನ್ನತ ಪ್ರದರ್ಶನದ ಶ್ರೇಣಿಗೆ ಸೇರಿವೆ. ಒಂದು ಪಂದ್ಯಕ್ಕೆ ಅವರ ಮೇಲೇ ಮಾಡಿದ್ದ ಹೂಡಿಕೆ ಕೇವಲ 6.9 ಲಕ್ಷ ರೂ.ಆಗಿದ್ದರೆ, ಅವರು ತಮ್ಮ ಅತ್ಯುತ್ತಮ ಪಂದ್ಯವೊಂದರಲ್ಲಿ ಒಂದೇ ಸಂಜೆಗೆ ತಂದುಕೊಟ್ಟ ರಿಟರ್ನ್ ಮೌಲ್ಯ ಬರೋಬ್ಬರಿ 5.16 ಕೋಟಿ ರೂಪಾಯಿ! ಇನ್ನು ಅವರ ಅತ್ಯಂತ ಕಳಪೆ ಪ್ರದರ್ಶನದ ಪಂದ್ಯವು ರಾಜಸ್ಥಾನ ರಾಯಲ್ಸ್ ತಂಡಕ್ಕೆ ತಂದ ನಷ್ಟ ಕೇವಲ 0.18 ಕೋಟಿ ರೂಪಾಯಿ ಮಾತ್ರ.
ಇನ್ನು ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಆರ್ಭಟವು ಒಂದೇ ಒಂದು ಸೂತ್ರದ ಮೇಲೆ ನಿಂತಿತ್ತು, ಅದುವೇ ‘ಪವರ್‌ಪ್ಲೇ ತನಗಷ್ಟೇ ಸ್ವಂತ’ ಎಂಬ ಆಕ್ರಮಣಕಾರಿ ಆಟ. ಈ ಸೀಸನ್‌ನಲ್ಲಿ ಅವರು ಸಿಡಿಸಿದ ಒಟ್ಟು 776 ರನ್‌ಗಳಲ್ಲಿ ಬರೋಬ್ಬರಿ 521 ರನ್‌ಗಳು ಕೇವಲ ಮೊದಲ 6 ಓವರ್‌ಗಳಲ್ಲೇ ಮೂಡಿಬಂದಿದ್ದವು. ಫೀಲ್ಡಿಂಗ್ ನಿರ್ಬಂಧಗಳ ಲಾಭ ಪಡೆದು ಹೊಸ ಚೆಂಡಿನಲ್ಲಿ ಬೌಲರ್‌ಗಳನ್ನು ದಂಡಿಸುವುದನ್ನೇ ಅವರು ತಮ್ಮ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದರು.
ಜೈಪುರದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ ಸೂರ್ಯವಂಶಿ, ಐಪಿಎಲ್ ಇತಿಹಾಸದಲ್ಲೇ 3ನೇ ಅತಿ ವೇಗದ ಶತಕದ ದಾಖಲೆ ಬರೆದರು. ಆ ಪಂದ್ಯದಲ್ಲಿ ಅವರ 37 ಎಸೆತಗಳ 103 ರನ್‌ಗಳ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್ ಹಾಗೂ 5 ಬೌಂಡರಿಗಳಿದ್ದವು. ಇನ್ನು ಪ್ಲೇಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲೂ ಇದೇ ಹೈದರಾಬಾದ್ ವಿರುದ್ಧ 29 ಎಸೆತಗಳಲ್ಲಿ 334.48ರ ಸ್ಟ್ರೈಕ್ ರೇಟ್‌ನೊಂದಿಗೆ 97 ರನ್ ಚಚ್ಚಿದರು, ಇದು ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ 90 ಪ್ಲಸ್ ರನ್ ಗಳಿಸಿದ ಬ್ಯಾಟರ್ ಒಬ್ಬರ ಅತ್ಯಧಿಕ ಸ್ಟ್ರೈಕ್ ರೇಟ್ ಆಗಿದೆ. ತದನಂತರ ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ ತಂಡ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಅತ್ಯಂತ ಪ್ರೌಢಿಮೆಯ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್​ 7 ಸಿಕ್ಸರ್‌ಗಳ ನೆರವಿನಿಂದ 47 ಎಸೆತಗಳಲ್ಲಿ 96 ರನ್ ಗಳಿಸಿ ಕುಸಿಯುತ್ತಿದ್ದ ಮಧ್ಯಮ ಕ್ರಮಾಂಕಕ್ಕೆ ಆಸರೆಯಾದರು. ಆದರೆ, ಸತತ ಎರಡನೇ ನಾಕೌಟ್ ಪಂದ್ಯದಲ್ಲೂ ಶತಕದ ಅಂಚಿನಲ್ಲಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.
ಈ ಸೀಸನ್‌ನಲ್ಲಿ ಅವರ ಬ್ಯಾಟಿಂಗ್‌ನ ಅತ್ಯಂತ ವಿಶಿಷ್ಟ ಅಂಕಿ-ಅಂಶವೆಂದರೆ ಅದು ಅವರು ಆಡಿದ ‘ಪುಲ್ ಶಾಟ್’. ಈ ಸೀಸನ್‌ನಲ್ಲಿ ಪುಲ್ ಶಾಟ್ ಮೂಲಕವೇ ಬರೋಬ್ಬರಿ 20 ಸಿಕ್ಸರ್ ಸಿಡಿಸಿರುವ ಅವರು, ಆಡಿದ 36 ಶಾರ್ಟ್‌ಗಳಲ್ಲಿ ಕೇವಲ ಒಂದೇ ಒಂದು ಬಾರಿ ಮಾತ್ರ ಔಟಾಗಿದ್ದಾರೆ ಹಾಗೂ ಈ ಶಾಟ್‌ನಲ್ಲಿ ಅವರ ಸ್ಟ್ರೈಕ್ ರೇಟ್ ಬರೋಬ್ಬರಿ 419.44 ಆಗಿತ್ತು! ಇಡೀ ಟೂರ್ನಿಯಲ್ಲಿ ತಾವು ಎದುರಿಸಿದ ಒಟ್ಟು 44 ಬೌಲರ್‌ಗಳಲ್ಲಿ 31 ಬೌಲರ್‌ಗಳಿಗೆ ಸಿಕ್ಸರ್ ರುಚಿ ತೋರಿಸಿರುವ ಸೂರ್ಯವಂಶಿ, ಅವರಲ್ಲಿ 8 ಬೌಲರ್‌ಗಳಿಗೆ ತಾವು ಎದುರಿಸಿದ ಅತ್ಯಂತ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಸ್ವಾಗತ ಕೋರಿರುವುದು ಅವರ ಅಪ್ರತಿಮ ಬ್ಯಾಟಿಂಗ್ ಧೈರ್ಯಕ್ಕೆ ಸಾಕ್ಷಿಯಾಗಿದೆ.
ಒಟ್ಟಾರೆ, ಐಪಿಎಲ್ 2025ರಲ್ಲಿ ರಾಜಸ್ಥಾನ ರಾಯಲ್ಸ್ ಕೇವಲ 1.10 ಕೋಟಿ ರೂ. ನೀಡಿ ಖರೀದಿಸಿದ್ದ ವೈಭವ್ ಸೂರ್ಯವಂಶಿ, ಪ್ರಸಕ್ತ 2026ರ ಸೀಸನ್​ನಲ್ಲಿ ಒಟ್ಟು 16 ಪಂದ್ಯಗಳಲ್ಲಿ ನೀಡಿದ ಅಪ್ರತಿಮ ಪ್ರದರ್ಶನದಿಂದ ಫ್ರಾಂಚೈಸಿಗೆ ಬರೋಬ್ಬರಿ 34.97 ಕೋಟಿ ರೂ. ಮೌಲ್ಯದ ಇಂಪ್ಯಾಕ್ಟ್ ರಿಟರ್ನ್ ತಂದುಕೊಟ್ಟಿದ್ದಾರೆ. ಇದರ ಮೂಲಕ ಇಡೀ ಸೀಸನ್‌ನಲ್ಲಿ ಫ್ರಾಂಚೈಸಿಗೆ 33.87 ಕೋಟಿಯ ನಿವ್ವಳ ಲಾಭ ಸಿಕ್ಕಿದ್ದು, ಹೂಡಿಕೆಯ ರಿಕವರಿ ಮಲ್ಟಿಪಲ್ 31.79 ಪಟ್ಟು ಹೆಚ್ಚಾಗಿದೆ. ಅಂದರೆ ರಾಜಸ್ಥಾನ ರಾಯಲ್ಸ್ ಇವರ ಮೇಲೆ ವೆಚ್ಚ ಮಾಡಿದ ಪ್ರತಿ ಒಂದು ರೂಪಾಯಿಗೂ ಈ ಇಂಪ್ಯಾಕ್ಟ್ ಮಾಡೆಲ್ ಶೇ. 31.79 ರಷ್ಟು ಮೌಲ್ಯದ ಲಾಭವನ್ನು ಮರಳಿ ನೀಡಿದೆ. ಇಡೀ ಸೀಸನ್‌ನಲ್ಲಿ ಅತಿ ಹೆಚ್ಚು ಲಾಭ ತಂದುಕೊಟ್ಟವರ ಪಟ್ಟಿಯಲ್ಲಿ ಇವರು ಶುಭಮನ್ ಗಿಲ್ (16.50 ಕೋಟಿ ಹೂಡಿಕೆ, 35.14 ಕೋಟಿ ರೂ. ಲಾಭ) ಮತ್ತು ರಜತ್ ಪಾಟೀದಾರ್ (11.00 ಕೋಟಿ ರೂ. ಹೂಡಿಕೆ, 35.06 ಕೋಟಿ ರೂ. ಲಾಭ) ಅವರ ನಂತರದ ಮೂರನೇ ಸ್ಥಾನದಲ್ಲಿದ್ದಾರೆ. ಅಗ್ರ ಇಬ್ಬರು ಆಟಗಾರರಿಗೂ ಹಾಗೂ ಸೂರ್ಯವಂಶಿ ಗಳಿಸಿದ ಲಾಭಕ್ಕೂ ಇರುವ ವ್ಯತ್ಯಾಸ ಕೇವಲ 1.30 ಕೋಟಿಗಿಂತ ಕಡಿಮೆ, ಆದರೆ ಇವರಿಗಾಗಿ ಮಾಡಿದ ಹೂಡಿಕೆಯ ವ್ಯತ್ಯಾಸ ಮಾತ್ರ ಬರೋಬ್ಬರಿ 9.90 ಕೋಟಿಯಷ್ಟ ದೊಡ್ಡದಾಗಿದೆ.
ಐಪಿಎಲ್ 2026ರ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಗಳಿಸಿಕೊಟ್ಟ 33.87 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಕೇವಲ ಕ್ರಿಕೆಟ್ ಜಗತ್ತಿಗೆ ಮಾತ್ರವಲ್ಲದೆ ಸಾಮಾನ್ಯ ಉದಾಹರಣೆಗಳೊಂದಿಗೆ ಹೋಲಿಸಿ ನೋಡಿದಾಗ ಬೆರಗಾಗುವುದಂತೂ ಖಂಡಿತ. ವೈಭವ್​ ತಂದುಕೊಟ್ಟ ಲಾಭದ ಮೊತ್ತದಿಂದ ಮುಂಬೈ-ಲಂಡನ್ ನಡುವಿನ ಏರ್ ಇಂಡಿಯಾದ ಸುಮಾರು 338 ಬಿಸಿನೆಸ್ ಕ್ಲಾಸ್ ರಿಟರ್ನ್ ಟಿಕೆಟ್‌ಗಳನ್ನು ಖರೀದಿಸಬಹುದು ಅಥವಾ ಸಣ್ಣ ನಗರಗಳ ಜನರ ಕನಸಿನ ಕಾರಾಗಿರುವ ಬರೋಬ್ಬರಿ 252 ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿಗಳನ್ನು ಕೊಂಡುಕೊಳ್ಳಬಹುದು! ಅಷ್ಟೇ ಅಲ್ಲದೆ, ಐಐಟಿ (IIT) ಯಲ್ಲಿ ನಾಲ್ಕು ವರ್ಷಗಳ ಪೂರ್ಣ ಪ್ರಮಾಣದ ಬಿ.ಟೆಕ್ ಎಂಜಿನಿಯರಿಂಗ್ ಓದಲು ತಗಲುವ ವೆಚ್ಚವನ್ನು ಲೆಕ್ಕ ಹಾಕಿದರೆ, ಸುಮಾರು 423 ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣ ಶುಲ್ಕವನ್ನು ಈ ಒಂದೇ ಸೀಸನ್‌ನ ಲಾಭದ ಹಣದಿಂದ ಭರಿಸಬಹುದಾಗಿದೆ.
ಇದಕ್ಕಿಂತಲೂ ಮುಖ್ಯವಾಗಿ ಕ್ರಿಕೆಟ್ ಲೋಕದ ಒಳಗೇ ಹೋಲಿಕೆ ಮಾಡುವುದಾದರೆ, ಸೂರ್ಯವಂಶಿ ಅವರ 33.87 ಕೋಟಿಯ ಲಾಭವು ಈ ಸೀಸನ್‌ನಲ್ಲಿ ಭಾರೀ ಮೊತ್ತಕ್ಕೆ ಹರಾಜಾಗಿದ್ದ ರಿಷಭ್ ಪಂತ್ (27.00 ಕೋಟಿ ರೂ.), ನಿಕೋಲಸ್ ಪೂರನ್ (21.00 ಕೋಟಿ ರೂ.), ಯುಜ್ವೇಂದ್ರ ಚಹಾಲ್ (18.00 ಕೋಟಿ ರೂ.) ಮತ್ತು ಜಸ್ಪ್ರೀತ್ ಬುಮ್ರಾ (18.00 ಕೋಟಿ ರೂ.) ಅವರ ವೈಯಕ್ತಿಕ ಖರೀದಿ ಬೆಲೆಗಿಂತಲೂ ದೊಡ್ಡದಾಗಿದೆ. ಆದರೆ ದುರದೃಷ್ಟವಶಾತ್ ಈ ನಾಲ್ಕು ಆಟಗಾರರು ಇದೇ ಇಂಪ್ಯಾಕ್ಟ್ ಮಾಡೆಲ್‌ನಲ್ಲಿ ನಷ್ಟ ಅನುಭವಿಸಿದ್ದಾರೆ. ಇಡೀ ಐಪಿಎಲ್ 2026ರ ಸೀಸನ್‌ನಲ್ಲಿ ಒಟ್ಟು 203 ಆಟಗಾರರಿಂದ ಲೀಗ್‌ಗೆ ಒಟ್ಟಾರೆ 294.04 ಕೋಟಿ ರೂ. ಲಾಭ ಬಂದಿದ್ದು, ಇದರಲ್ಲಿ ಇಡೀ ಟೂರ್ನಿಯ ಒಟ್ಟು ಸಂಬಳದ ವೆಚ್ಚದಲ್ಲಿ ಕೇವಲ 0.107% ರಷ್ಟು ಮಾತ್ರ ಪಾಲನ್ನು ಹೊಂದಿದ್ದ ಸೂರ್ಯವಂಶಿ ಒಬ್ಬರೇ ಶೇ. 11.5 ರಷ್ಟು ಭಾರೀ ಲಾಭವನ್ನು ಕೊಡುಗೆಯಾಗಿ ನೀಡಿದ್ದಾರೆ. ಟೂರ್ನಿಯಲ್ಲಿ 1 ರಿಂದ 3 ಕೋಟಿ ರೂ. ಶ್ರೇಣಿಯಲ್ಲಿದ್ದ ಆಟಗಾರರು ಸರಾಸರಿ 3.41 ಕೋಟಿ ರೂ. ಲಾಭ ತಂದುಕೊಟ್ಟಿದ್ದರೆ, ಸೂರ್ಯವಂಶಿ ತಮ್ಮ ಶ್ರೇಣಿಯ ಸರಾಸರಿಗಿಂತ ಬರೋಬ್ಬರಿ 9.9 ಪಟ್ಟು ಹೆಚ್ಚಿನ ಲಾಭ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net