ಸುಲಭವಾಗಿ ಸಿಕ್ಸರ್​ ಬಾರಿಸುತ್ತೀಯಲ್ಲ ದಿನಕ್ಕೆ ಎಷ್ಟು ಲೀಟರ್​ ಹಾಲು ಕುಡಿತ್ತೀಯಾ? ವೈಭವ್​ ಕೊಟ್ಟ ಉತ್ತರ ವೈರಲ್​... Vaibhav Suryavanshi

ಸುಲಭವಾಗಿ ಸಿಕ್ಸರ್​ ಬಾರಿಸುತ್ತೀಯಲ್ಲ ದಿನಕ್ಕೆ ಎಷ್ಟು ಲೀಟರ್​ ಹಾಲು ಕುಡಿತ್ತೀಯಾ? ವೈಭವ್​ ಕೊಟ್ಟ ಉತ್ತರ ವೈರಲ್​... Vaibhav Suryavanshi
ಸುಲಭವಾಗಿ ಸಿಕ್ಸರ್​ ಬಾರಿಸುತ್ತೀಯಲ್ಲ ದಿನಕ್ಕೆ ಎಷ್ಟು ಲೀಟರ್​ ಹಾಲು ಕುಡಿತ್ತೀಯಾ? ವೈಭವ್​ ಕೊಟ್ಟ ಉತ್ತರ ವೈರಲ್​... Vaibhav Suryavanshi
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆಯಷ್ಟೇ ( ಮೇ 31 ) ಮುಕ್ತಾಯಗೊಂಡ 19ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​
  • ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಸೆನ್ಸೇಷನ್​ ವೈಭವ್ ಸೂರ್ಯವಂಶಿಯಿಂದ ಅದ್ಭುತ ಪ್ರದರ್ಶನ
  • ಒಂದಲ್ಲ, ಎರಡಲ್ಲ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ ಬಿಹಾರದ ವಂಡರ್ ಕಿಡ್​ ವೈಭವ್​ ಸೂರ್ಯವಂಶಿ ​
  • ಇಡೀ ಕ್ರಿಕೆಟ್ ಲೋಕವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿರುವ ಉದಯೋನ್ಮುಖ ಆಟಗಾರ
Vaibhav Suryavanshi : ಸುಮಾರು ಎರಡು ತಿಂಗಳ ಕಾಲ ಮನರಂಜನೆ ನೀಡಿದ 19ನೇ ಆವೃತ್ತಿಯ ಐಪಿಎಲ್​ ಮುಗಿದಿದ್ದರೂ, ರಾಜಸ್ಥಾನ ರಾಯಲ್ಸ್‌ ತಂಡದ ಯುವ ಬ್ಯಾಟಿಂಗ್ ಸೆನ್ಸೇಷನ್ 15 ವರ್ಷದ ವೈಭವ್ ಸೂರ್ಯವಂಶಿ ಹೆಸರು ಮಾತ್ರ ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ.
ಭಾನುವಾರ (ಮೇ 31) ಅಹಮದಾಬಾದ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವೆ ನಡೆದ ಫೈನಲ್​ ಪಂದ್ಯದ ಬಳಿಕ ಎಲ್ಲರ ಕಣ್ಣುಗಳು ವೈಭವ್​ ಮೇಲೆಯೇ ಇದ್ದವು. ಈ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವೈಭವ್ ಐದು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಆರೆಂಜ್ ಕ್ಯಾಪ್, ಅತ್ಯಂತ ಮೌಲ್ಯಯುತ ಆಟಗಾರ, ಋತುವಿನ ಉದಯೋನ್ಮುಖ ಆಟಗಾರ, ಸೂಪರ್ ಸ್ಟ್ರೈಕರ್ ಮತ್ತು ಹೆಚ್ಚಿನ ಸಿಕ್ಸರ್ ಪ್ರಶಸ್ತಿಗಳನ್ನು ವೈಭವ್​ ತಮ್ಮದಾಗಿಸಿಕೊಂಡರು.
ಕೇವಲ 15 ವರ್ಷ 65 ದಿನಗಳ ಪ್ರಾಯದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಿಗೆ ನೀಡಲಾಗುವ ಪ್ರತಿಷ್ಠಿತ 'ಆರೆಂಜ್ ಕ್ಯಾಪ್' (Orange Cap) ಮುಡಿಗೇರಿಸಿಕೊಳ್ಳುವ ಮೂಲಕ ವೈಭವ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ ಎಂಬ ಅಭೂತಪೂರ್ವ ದಾಖಲೆ ಬರೆದಿದ್ದಾರೆ. ಈ ಪ್ರಸಕ್ತ ಸೀಸನ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಒಟ್ಟು 16 ಇನ್ನಿಂಗ್ಸ್‌ಗಳಿಂದ ಬರೋಬ್ಬರಿ 776 ರನ್ ಚಚ್ಚಿದ್ದಾರೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಆಟಗಾರರಾದ ಶುಭಮಾನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರಿಗೆ ಈ ಬೃಹತ್ ರನ್ ದಾಖಲೆಯನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈ ಪ್ರಶಸ್ತಿ ವೈಭವ್​ ಪಾಲಾಯಿತು.
ಕೇವಲ ರನ್ ಗಳಿಸುವುದಷ್ಟೇ ಅಲ್ಲದೆ, ಈ ಸೀಸನ್‌ನಲ್ಲಿ ಒಟ್ಟು 72 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ವೈಭವ್ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ. ಈ ಮೂಲಕ ಈ ಹಿಂದೆ ಐಪಿಎಲ್‌ನ ಒಂದೇ ಸೀಸನ್‌ನಲ್ಲಿ 59 ಸಿಕ್ಸರ್ ಬಾರಿಸಿ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ಪುಡಿಪುಡಿ ಮಾಡಿ, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ವೇದಿಕೆಯ ಮೇಲೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು, ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಬಲಿಷ್ಠವಾಗಿ ಸಿಕ್ಸರ್‌ಗಳನ್ನು ಹೇಗೆ ಬಾರಿಸುತ್ತೀರಿ? ದಿನಕ್ಕೆ ಎಷ್ಟು ಲೀಟರ್ ಹಾಲು ಕುಡಿಯುತ್ತೀರಿ? ಎಂದು ವೈಭವ್ ಅವರಿಗೆ ತಮಾಷೆಯ ಪ್ರಶ್ನೆಯೊಂದನ್ನು ಕೇಳಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ವೈಭವ್, ನಾನು ಈಗ ಹಾಲು ಕುಡಿಯುವುದನ್ನು ನಿಲ್ಲಿಸಿದ್ದೇನೆ ಎಂದು ಹೇಳುವ ಮೂಲಕ ಅಲ್ಲಿ ನೆರೆದಿದ್ದವರಲ್ಲಿ ನಗುವಿನ ಅಲೆ ಎಬ್ಬಿಸಿದರು.
ಒಟ್ಟಾರೆಯಾಗಿ ಹೇಳುವುದಾದರೆ, ಇಷ್ಟು ಕಿರಿಯ ವಯಸ್ಸಿನಲ್ಲಿಯೇ ವೈಭವ್ ಸೂರ್ಯವಂಶಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಡೀ ಕ್ರಿಕೆಟ್ ಲೋಕವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net