ಐಪಿಎಲ್​ನಲ್ಲಿ ಗಿಫ್ಟ್ ಆಗಿ ಸಿಕ್ಕ ದುಬಾರಿ ಕಾರು: ಡ್ರೈವಿಂಗ್​ ಲೈಸೆನ್ಸ್ ಬಗ್ಗೆ ಕೇಳಿದ್ದಕ್ಕೆ ವೈಭವ್​ ಕೊಟ್ಟ ಉತ್ತರ ವೈರಲ್​​! Vaibhav Sooryavanshi

ಐಪಿಎಲ್​ನಲ್ಲಿ ಗಿಫ್ಟ್ ಆಗಿ ಸಿಕ್ಕ ದುಬಾರಿ ಕಾರು: ಡ್ರೈವಿಂಗ್​ ಲೈಸೆನ್ಸ್ ಬಗ್ಗೆ ಕೇಳಿದ್ದಕ್ಕೆ ವೈಭವ್​ ಕೊಟ್ಟ ಉತ್ತರ ವೈರಲ್​​! Vaibhav Sooryavanshi
ಐಪಿಎಲ್​ನಲ್ಲಿ ಗಿಫ್ಟ್ ಆಗಿ ಸಿಕ್ಕ ದುಬಾರಿ ಕಾರು: ಡ್ರೈವಿಂಗ್​ ಲೈಸೆನ್ಸ್ ಬಗ್ಗೆ ಕೇಳಿದ್ದಕ್ಕೆ ವೈಭವ್​ ಕೊಟ್ಟ ಉತ್ತರ ವೈರಲ್​​! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಕಣ್ಮನ ಸೆಳೆದ ವೈಭವ್​ ಸೂರ್ಯವಂಶಿ
  • ರನ್​ ಮಳೆಯನ್ನೇ ಸುರಿಸಿದ ವೈಭವ್​ ಹಲವು ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡರು
  • ಐಪಿಎಲ್​ ಪ್ರಾಯೋಜಕತ್ವದ ಅತ್ಯಾಧುನಿಕ ಎಸ್‌ಯುವಿ (SUV) ಕಾರು ಕೂಡ ಅವುಗಳಲ್ಲಿ ಒಂದು
  • ಡ್ರೈವಿಂಗ್ ಲೈಸೆನ್ಸ್ ಪಡೆಯಲು 18 ವರ್ಷ ತುಂಬುವವರೆಗೆ ಕಾಯಬೇಕಾಗಿದೆ ವೈಭವ್​
Vaibhav Sooryavanshi : ಇತ್ತೀಚೆಗಷ್ಟೇ ಮುಕ್ತಾಯಗೊಂಡ 19ನೇ ಆವೃತ್ತಿಯ ಐಪಿಎಲ್​ನಲ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಕಣ್ಮನ ಸೆಳೆದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಹಲವು ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡರು. ಅವುಗಳಲ್ಲಿ ಐಪಿಎಲ್​ ಪ್ರಾಯೋಜಕತ್ವದ ಅತ್ಯಾಧುನಿಕ ಎಸ್‌ಯುವಿ (SUV) ಕಾರು ಕೂಡ ಒಂದಾಗಿದೆ.
ಪ್ರಸ್ತುತ ಕೇವಲ 15 ವರ್ಷ ವಯಸ್ಸಿನವರಾಗಿರುವ ಸ್ಫೋಟಕ ಬ್ಯಾಟರ್ ವೈಭವ್​, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನು ಮೂರು ವರ್ಷಗಳು ಅಂದರೆ 18 ವರ್ಷ ತುಂಬುವವರೆಗೆ ಕಾಯಬೇಕಾಗಿದೆ. ಅಲ್ಲಿಯವರೆಗೂ ವೈಭವ್​ ಕಾರು ಚಾಲನೆ ಮಾಡುವಂತಿಲ್ಲ. ಹೀಗಾಗಿ, ಕಾರಿನ ಕುರಿತು ತಮ್ಮ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಸೂರ್ಯವಂಶಿ, ನನ್ನ ಸಮಯ ಬರುವವರೆಗೆ ನಾನು ಕಾಯುತ್ತೇನೆ, ಅಲ್ಲಿಯವರೆಗೆ ನನ್ನ ತಂದೆ ಕಾರನ್ನು ಚಲಾಯಿಸಲಿದ್ದಾರೆ ಎಂದು ಅತ್ಯಂತ ಪ್ರಬುದ್ಧವಾಗಿ ಉತ್ತರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಾರಿನ ಕುರಿತು ಮಾತನಾಡುತ್ತಾ ವೈಭವ್ ಸೂರ್ಯವಂಶಿ, ನಾನು ಈ ಕಾರನ್ನು ಇನ್ನು ಮೂರು ವರ್ಷಗಳ ಕಾಲ ಹೀಗೆಯೇ ಇಟ್ಟುಕೊಳ್ಳುತ್ತೇನೆ. ಮೊದಲು ನನ್ನ ಡ್ರೈವಿಂಗ್ ಲೈಸೆನ್ಸ್ ಬರಲಿ, ಆಮೇಲೆ ನಾನೇ ಇದನ್ನು ಚಲಾಯಿಸುತ್ತೇನೆ. ಅಲ್ಲಿಯವರೆಗೆ ನನ್ನ ತಂದೆಗೆ ಕಾರು ಓಡಿಸಲು ಹೇಳಿ, ನಾನು ಅವರ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಮುದ್ದಾಗಿ ಉತ್ತರಿಸಿದ್ದಾರೆ. ಇದೇ ಸಂವಾದದಲ್ಲಿ ಈ ಹದಿಹರೆಯದ ಆಟಗಾರ, ಪಂದ್ಯಗಳಿಗೂ ಮುನ್ನ ಮಾನಸಿಕವಾಗಿ ಸಿದ್ಧರಾಗುವ ಬಗ್ಗೆಯೂ ಮಾತನಾಡಿದ್ದಾರೆ.
ನಾನು ಪಂದ್ಯಕ್ಕೂ ಮುನ್ನವೇ ರೂಮಿನಲ್ಲಿ ಕುಳಿತು ಆಟದ ಬಗ್ಗೆ ಯೋಚಿಸುತ್ತೇನೆ. ನಿರ್ದಿಷ್ಟ ಬೌಲರ್ ಎದುರು ನಾನು ಹೇಗೆ ಆಡಬೇಕು, ಒತ್ತಡದ ಪರಿಸ್ಥಿತಿ ಎದುರಾದರೆ ಅದನ್ನು ಹೇಗೆ ನಿಭಾಯಿಸಬೇಕು ಎಂದು ಮುಂಚಿತವಾಗಿಯೇ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇನೆ. ಇದು ಮಾನಸಿಕವಾಗಿ ನಮ್ಮನ್ನು ತುಂಬಾ ಸದೃಢಗೊಳಿಸುತ್ತದೆ. ನಾವು ಯಾವಾಗಲೂ ದೇಹಕ್ಕೆ ತರಬೇತಿ ನೀಡುತ್ತೇವೆ ಆದರೆ, ಮನಸ್ಸನ್ನು ಗಟ್ಟಿಯಾಗಿಡುವುದು ಅಷ್ಟೇ ಮುಖ್ಯ. ಉದಾಹರಣೆಗೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೊನೆಯ 20 ರಿಂದ 30 ಎಸೆತಗಳಲ್ಲಿ 50 ರಿಂದ 60 ರನ್ ಬೇಕಾಗಿದ್ದಾಗ, ಒಬ್ಬಂಟಿಯಾಗಿ ಬ್ಯಾಟ್ ಮಾಡುವಾಗ ಇಂತಹ ಮಾನಸಿಕ ಸಿದ್ಧತೆ ನಮಗೆ ನೆರವಾಗುತ್ತದೆ ಎಂದು ಯುವ ಬ್ಯಾಟರ್ ತಮ್ಮ ಪ್ರಬುದ್ಧ ಚಿಂತನೆಯನ್ನು ಹಂಚಿಕೊಂಡಿದ್ದಾರೆ.
ಐಪಿಎಲ್ 2026ರ ಸೀಸನ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ 15 ವರ್ಷದ ವೈಭವ್ ಸೂರ್ಯವಂಶಿ, ಇದೀಗ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಒಟ್ಟು 776 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ನೀಡಲಾಗುವ ಪ್ರತಿಷ್ಠಿತ 'ಆರೆಂಜ್ ಕ್ಯಾಪ್' ಅನ್ನು ವೈಭವ್​ ಮುಡಿಗೇರಿಸಿಕೊಂಡರು. ಈ ಮೂಲಕ ಯುವ ಆಟಗಾರ ಶುಭಮಾನ್ ಗಿಲ್, ಸಾಯಿ ಸುದರ್ಶನ್ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜ ಆಟಗಾರರನ್ನೇ ಹಿಂದಿಕ್ಕಿರುವುದು ವಿಶೇಷವಾಗಿದೆ.
ಈ ಅಪೂರ್ವ ಸಾಧನೆಯ ಬೆನ್ನಲ್ಲೇ ಸೂರ್ಯವಂಶಿ ಅವರಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ 2026ರ ಏಷ್ಯನ್ ಗೇಮ್ಸ್‌ನ ಭಾರತೀಯ ಟಿ20 ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಭಾರತ ತಂಡವು ಜೂನ್ ತಿಂಗಳಲ್ಲಿ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಮುಂದಿನ ತಿಂಗಳು (ಜುಲೈ) ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಎದುರಿಸಲಿದೆ. ಇದಾದ ಸುಮಾರು ಎರಡು ತಿಂಗಳ ನಂತರ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನಲ್ಲೂ ಭಾರತ ತಂಡದ ಪರವಾಗಿ ಈ ಯುವ ಬ್ಯಾಟರ್ ಕಣಕ್ಕಿಳಿಯಲಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net