ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪ್ರಕರಣ ದಾಖಲು

FIR-2
Published on

ಮಂಗಳೂರು: ಕುಡುಪು ಕೂಲಿ ಕಾರ್ಮಿಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ನಗರ ಕಮಿಷನರೆಟ್ ವ್ಯಾಪ್ತಿಯಲ್ಲಿ 3 ಪ್ರಕರಣ ದಾಖಲಿಸಲಾಗಿದೆ.

ಕುಡುಪು ಬಳಿ ಕೂಲಿ ಕಾರ್ಮಿಕನ ಹತ್ಯೆಗೆ ಸಂಬಂದಿಸಿದಂತೆ ಬ್ಯಾರಿ ಮುಸ್ಲಿಂ ಆರ್ಮಿ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ‘ಬ್ರೇಕಿಂಗ್ ನ್ಯೂಸ್ ಕುಡುಪು ಕೂಲಿ ಕಾರ್ಮಿಕನ ಹತ್ಯೆಗೆ ಬಳಸಿದ ಬ್ಯಾಟ್ ಸ್ಟಂಪ್ ವಶಕ್ಕೆ ಹತ್ಯೆಗೆ ಬಳಸಿದ ಮಾರಕಾಸ್ತ್ರ ಕಾಣೆಯಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ?’ ಎಂದು ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಇದರ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನ ‘ಬ್ಯಾರಿ ರೋಯಲ್ ನವಾಬ್’ ಪೇಜ್‌ನಲ್ಲಿ ಸುಳ್ಳು ಮಾಹಿತಿ ಹಾಕಿದವರ ಮೇಲೆ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ‘ಮೈಕಲ್ತೋ ಬ್ಯಾರಿ’ ಗ್ರೂಪ್‌ನಲ್ಲಿ ಮಂಗಳೂರು ನಗರದಲ್ಲಿ ಗಲಾಟೆ ಎಬ್ಬಿಸಿ ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಿದ್ದನ್ನು ಮಂಗಳೂರು ನಗರ ಪೊಲೀಸ್ ಘಟಕದ ಸೋಶಿಯಲ್ ಮಾನಿಟರಿಂಗ್ ಸೆಲ್‌ನಲ್ಲಿ ಪತ್ತೆ ಮಾಡಲಾಗಿದೆ. ಈ ಬಗ್ಗೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಝಾಕಿರ್ ಹುಸೇನ್ ಎಂಬಾತನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net