ಉತ್ತರ ಪ್ರದೇಶದ ಮಸೀದಿಯಲ್ಲಿ ಅಡಗಿದ್ದ ಕರ್ನಾಟಕದ ತಬ್ಲಿಘಿಗಳ ಮೇಲೆ ಕೇಸ್!

uttar pradesha
Published on

ಮುಝಫ್ಫರ್‌ನಗರ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದ ಮಸೀದಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡದೆ ಉಳಿದುಕೊಂಡಿದ್ದಕ್ಕಾಗಿ ಕರ್ನಾಟಕ ಮತ್ತು ಅಸ್ಸಾಂನ ಒಟ್ಟು 24 ತಬ್ಲಿಘ್ ಜಮಾತ್ ಸದಸ್ಯರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು ಏಪ್ರಿಲ್ 23ರಿಂದಲೂ ಪಟ್ವಾರಿ ಮಸೀದಿಯಲ್ಲಿ ತಂಗಿದ್ದುದು ಬುಧವಾರ ಪತ್ತೆಯಾಗಿತ್ತು. ಇದರಲ್ಲಿ ಕರ್ನಾಟಕದವರು ಎಷ್ಟು ಮಂದಿ ಮತ್ತು ಅಸ್ಸಾಂನವರು ಎಷ್ಟು ಜನ ಎಂಬುದು ದೃಢಪಟ್ಟಿಲ್ಲ.

ಇವರ ವಿರುದ್ಧ 1897ರ ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆ ನಿಷೇಧ ಕಾನೂನು ಮತ್ತು ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಯಶ್‌ಪಾಲ್ ಧಮಾ ತಿಳಿಸಿದ್ದಾರೆ.

ಇಂತಹುದೇ ಇನ್ನೊಂದು ಪ್ರಕರಣದಲ್ಲಿ 10 ಜನ ತಬ್ಲಿಘಿಗಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಇವರು ಮುಝಫ್ಫರ್‌ನಗರ ಜಿಲ್ಲೆಯ ನ್ಯೂ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶೇರ್‌ನಗರ್ ಗ್ರಾಮದ ಮಸೀದಿಯಲ್ಲಿ ಅಡಗಿಕೊಂಡಿದ್ದರು.

ಈ 10 ಜನರ ಪೈಕಿ ಒಬ್ಬನಿಗೆ ಕರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ದೃಢಪಟ್ಟಿದ್ದು, ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇಡೀ ಶೇರ್‌ನಗರ ಗ್ರಾಮಕ್ಕೆ ದಿಗ್ಬಂಧನ ವಿಧಿಸಲಾಗಿದೆ.

ಈ ಗ್ರಾಮದ ಜಮಾತ್ ಸದಸ್ಯರು ಮಾರ್ಚ್ 23ರಂದು ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಸಮಾವೇಶದಲ್ಲಿ ಭಾಗವಹಿಸಿ ವಾಪಸಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net