ಸೋಂಕಿತರ ಸಂಪರ್ಕವೇ ಇಲ್ಲದಿದ್ರೂ ಕರೊನಾ ಸೋಂಕು

02Tmk_Gubbi_SBI (1)
Published on

ತುಮಕೂರು:  ಜಿಲ್ಲೆಯಲ್ಲಿ ಕರೊನಾ ಮಹಾಸ್ಫೋಟವಾಗಿದೆ. ಒಂದೇ ದಿನ 44 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 183ಕ್ಕೇರಿದೆ.

ಕೊರಟಗೆರೆ ತಾಲೂಕಿನಲ್ಲಿ 17 ಹಾಗೂ ಗುಬ್ಬಿಯಲ್ಲಿ 13 ಪ್ರಕರಣ ಪತ್ತೆಯಾಗಿದ್ದು, ಕರೊನಾ ಮಹಾಮಾರಿ ಆರ್ಭಟಿಸಿದೆ. ಸೋಂಕಿತರಲ್ಲಿ ಬಹುತೇಕರಿಗೆ ಪ್ರಯಾಣದ ಹಿನ್ನೆಲೆ, ಸೋಂಕಿತರ ಸಂಪರ್ಕ ಹೊಂದಿಲ್ಲದೆ ಇರುವುದು ಜಿಲ್ಲಾಡಳಿತಕ್ಕೆ ತಲೆಬಿಸಿ ಮಾಡಿದೆ.

ಗುರುವಾರ ಒಂದೇ ದಿನ 44 ಪ್ರಕರಣ ವರದಿಯಾಗಿವೆ. ಕೊರಟಗೆರೆ-17, ಗುಬ್ಬಿ -11, ಚಿಕ್ಕನಾಯಕನಹಳ್ಳಿ -4, ತಿಪಟೂರು-5, ಕುಣಿಗಲ್-3 ಹಾಗೂ ತುರುವೇಕೆರೆಯಲ್ಲಿ ಮೂವರು, ಮಧುಗಿರಿಯಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲಾಕೇಂದ್ರ ತುಮಕೂರು, ಮಧುಗಿರಿ, ಪಾವಗಡ, ಶಿರಾ ತಾಲೂಕುಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಈವರೆಗೆ ಕರೊನಾ 7 ಮಂದಿ ಬಲಿಯಾಗಿದ್ದರೆ. 127 ಸಕ್ರಿಯ ಪ್ರಕರಣಗಳಿವೆ.

ತಾಯಿ, ಮಗುವಿಗೆ ಸೋಂಕು: ಕೊರಟಗೆರೆ ತಾಲೂಕಿನ ಎಲೆರಾಂಪುರದಲ್ಲಿ 26 ವರ್ಷ ಮಹಿಳೆ ಹಾಗೂ ಒಂಬತ್ತೂವರೆ ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ. 39 ವರ್ಷದ ತಾಪಂ ಸರ್ಕಾರಿ ನೌಕರನಿಗೂ ಸೋಂಕು ದೃಢಪಟ್ಟಿದ್ದು, ತಾಪಂ ಕಚೇರಿ ಸೀಲ್‌ಡೌನ್ ಮಾಡಲಾಗಿದೆ. ತಾಲೂಕು ಆಡಳಿತ ಮಂಡಳಿಗೆ ಇದು ಭಯ ಹುಟ್ಟಿಸಿದೆ. ಇನ್ನುಳಿದಂತೆ ಜಂಪೇನಹಳ್ಳಿ 39 ವರ್ಷದ ವ್ಯಕ್ತಿ, ಎತ್ತಗಾನಹಳ್ಳಿ 78 ವರ್ಷ ವೃದ್ಧೆ, ಮಿಣಸಂದ್ರದ 18 ವರ್ಷದ ಯುವಕ, ಎಂ. ವೆಂಕಟಾಪುರದ 20 ವರ್ಷದ ಯುವತಿ, ವೆಂಕೋನಹಳ್ಳಿ 48 ವರ್ಷದ ಪುರುಷ, ಪಾತಗಾನಹಳ್ಳಿ 26 ಪುರುಷ, ಟಿ. ಗೊಲ್ಲಹಳ್ಳಿಯ 61 ವರ್ಷದ ವಯೋವೃದ್ಧ, ಕರೇಕಲ್ಲಹಟ್ಟಿ ತಾಂಡದ 32 ವರ್ಷದ ಗೃಹಿಣಿ, ನೀಲಗೊಂಡನಹಳ್ಳಿ 48 ವರ್ಷದ ಪುರುಷ, ಕುರುಬರ ಪಾಳ್ಯದ 38 ವರ್ಷದ ಪುರುಷ, ಎಂ.ಜಿ.ಗುಣಿಯ 33 ವರ್ಷದ ಪುರುಷ, ಬಿದಲೋಟಿ 27 ವರ್ಷದ ಯುವಕ, ಕ್ಯಾಶವಾರದ 5 ವರ್ಷದ ಹೆಣ್ಣು ಮಗುವಿಗೆ ಸೋಂಕು ದೃಢಪಟ್ಟಿದೆ. ಯಾವುದೇ ರೋಗಲಕ್ಷಣಗಳಿಲ್ಲದ ಸೋಂಕಿತರನ್ನು ಕಸಬಾ ಹೋಬಳಿಯ ಹುಲೀಕುಂಟೆ ಗ್ರಾಮದ ರೆಡ್ಡಿಕಟ್ಟೆ ಬಾರೆಯ ಬಳಿ ಮುರಾರ್ಜಿ ವಸತಿ ಶಾಲೆಯಲ್ಲಿ ಇಡಲಾಗಿದ್ದು ಕೆಲವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಹಾಗೂ ದ್ವೀತೀಯ ಸಂಪರ್ಕದಲ್ಲಿದ್ದವರನ್ನೂ ಪತ್ತೆಹಚ್ಚಲು ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿವೆ. ತುರುವೇಕೆರೆಯ ಮೂವರಲ್ಲಿ ದಂಡಿನಶಿವರದ 8ವರ್ಷದ ಗಂಡು ಮಗು, ಮಾಯಸಂದ್ರದ ಮಹಿಳೆ, ಚಟ್ನಹಳ್ಳಿಯ ಯುವಕನಿಗೆ ಸೋಂಕು ದೃಢವಾಗಿದೆ.

ಆಟೋ ಚಾಲಕನಿಗೆ ಸೋಂಕು: ಕುಣಿಗಲ್ 20ನೇ ವಾರ್ಡ್ ಲಯನ್ಸ್ ಸ್ಕೂಲ್ ರಸ್ತೆ ನಿವಾಸಿ, 37 ವರ್ಷದ ಆಟೋ ಚಾಲಕನಿಗೆ ಸೋಂಕು ತಗುಲಿದೆ. ಈತ ಪ್ರತಿನಿತ್ಯ ಮಾಗಡಿ ಹಾಗೂ ಇತರ ಕಡೆಗೆ ಹಾಲು ಸರಬರಾಜು ಮಾಡುತ್ತಿದ್ದ. 3-4 ದಿನಗಳಿಂದ ತಲೆ ನೋವು, ಜ್ವರ, ಕೆಮ್ಮು, ನಗಡಿ ಕಾಣಿಸಿಕೊಂಡಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದ. ಈ ವೇಳೆ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿಕೊಡಲಾಗಿತ್ತು. ಸೋಂಕು ದೃಢವಾಗಿದ್ದು ಲಯನ್ಸ್ ಸ್ಕೂಲ್ ರಸ್ತೆಯಲ್ಲಿ ವಾಸವಾಗಿದ್ದ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇಪ್ಪಾಡಿ ಹಾಗೂ ಭಕ್ತರಹಳ್ಳಿ ಇಬ್ಬರು ಪುರುಷರಿಗೆ ಸೋಂಕು ದೃಢವಾಗಿದೆ,

ಪಿಯು ವಿದ್ಯಾರ್ಥಿಗೆ ಕರೊನಾ: ತಿಪಟೂರು ತಾಲೂಕು ಬಿಳಿಗೆರೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾವೇರಿ ಜಿಲ್ಲೆಗೆ ಸ್ನೇಹಿತೆ ಮದುವೆಗೆ ತೆರಳಿದ್ದ ವಿದ್ಯಾರ್ಥಿನಿಗೆ ಸೋಂಕು ತಗುಲಿದೆ. ನಗರದ ಮಾರನಗೆರೆ, ವಿದ್ಯಾನಗರ ಹಾಗೂ ತಾಲೂಕಿನ ನೊಣವಿನಕೆರೆ, ದಸರೀಘಟ್ಟದಲ್ಲೂ ಕರೊನಾ ಪ್ರಕರಣ ಪತ್ತೆಯಾಗಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net