ಕಾರ್ಡ್‌ದಾರರಿಗೆ ಸಿಕ್ಕಿಲ್ಲ ರಾಜ್ಯದ ಪಾಲಿನ ಅನ್ನಭಾಗ್ಯ ಅಕ್ಕಿ: ಎಫ್​​ಸಿಐಗೆ ಹಣ ಪಾವತಿಸದ ಆಹಾರ ಇಲಾಖೆ

Annabhagya
Published on

ಬೆಂಗಳೂರು: ಸತತ 2 ತಿಂಗಳಿಂದ ರಾಜ್ಯದ ಪಾಲಿನ ‘ಅನ್ನಭಾಗ್ಯ’ ಯೋಜನೆ ಅಕ್ಕಿ ಕಾರ್ಡ್‌ದಾರರಿಗೆ ತಡವಾಗಿ ಸಿಗುತ್ತಿದೆ. ಜೂನ್ ಪಾಲಿನ ಪಡಿತರ ಪ್ರಸಕ್ತ ತಿಂಗಳು ಮುಗಿಯುತ್ತಿದ್ದರೂ ಪಡಿತರದಾರರಿಗೆ ವಿತರಣೆಯಾಗಿಲ್ಲ. ಇದರಿಂದ ಪ್ರತಿ ನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಸಾವಿರಾರು ಕಾರ್ಡ್‌ದಾರರು ಜಮಾಯಿಸಿ, ಅಕ್ಕಿ ಸಿಗದೆ ಬರಿಗೈಯಲ್ಲಿ ಮನೆಗೆ ತೆರಳುತ್ತಿದ್ದಾರೆ.

ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್,10.80 ಲಕ್ಷ ಅಂತ್ಯೋದಯ ಕಾರ್ಡ್‌ಗಳಿಂದ ಒಟ್ಟು 4.11 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು 4.34 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥವನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯದ ಯೋಜನೆಗಳಿಂದ ತಲಾ 5 ಕೆಜಿ ಸೇರಿ ಒಟ್ಟು 10 ಕೆಜಿಯನ್ನು ಪ್ರತಿ ತಿಂಗಳು ಬಿಪಿಎಲ್ ಹೊಂದಿರುವ ಪ್ರತಿ ಸದಸ್ಯನಿಗೆ ಉಚಿತವಾಗಿ ನೀಡಲಾಗುತ್ತಿದೆ. ಅಂತ್ಯೋದಯ ಕಾರ್ಡ್‌ಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ಸೇರಿ ಒಟ್ಟು 35 ಕೆಜಿ ನೀಡಲಾಗುತ್ತಿದೆ. ಪ್ರತಿ ತಿಂಗಳು 1ನೇ ತಾರೀಖಿನಿಂದ ಭಾರತೀಯ ಆಹಾರ ನಿಗಮ(ಎಫ್​​ಸಿಐ)ದ ಗೋದಾಮುಗಳಿಂದ ಸಗಟು ಮಳಿಗೆಗಳಿಗೆ ಅಕ್ಕಿ, ಜೋಳ,ರಾಗಿಯನ್ನು ಎತ್ತುವಳಿ ಮಾಡಬೇಕಿತ್ತು. ಬಳಿಕ, ಸಗಟು ಮಳಿಗೆಗಳಿಂದ ಎತ್ತುವಳಿ ಮಾಡುವ ನ್ಯಾಯಬೆಲೆ ಅಂಗಡಿಗಳು,ಕಾರ್ಡ್‌ದಾರರಿಗೆ ರೇಷನ್ ವಿತರಿಸಬೇಕಿತ್ತು.

ಕಾರಣವೇನು?

ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ’ ಯೋಜನೆಯ ಪಡಿತರ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯದಲ್ಲಿ ಲಾನುಭವಿಗಳಿಗೆ ವಿತರಣೆಯಾಗುತ್ತಿದೆ. ಆದರೆ, ರಾಜ್ಯದ ಪಾಲಿನ ಅನ್ನಭಾಗ್ಯ ಅಕ್ಕಿಯನ್ನು ಕಾರ್ಡ್‌ದಾರರಿಗೆ ವಿತರಿಸಲು ಆಹಾರ ಇಲಾಖೆ, ಮುಂಚಿತವಾಗಿ ಭಾರತೀಯ ಆಹಾರ ನಿಗಮ(ಎಫ್​​ಸಿಐ)ಕ್ಕೆ ಹಣ ಪಾವತಿಸಿ ಖರೀದಿಸಬೇಕಿತ್ತು. ಆದರೆ, ಇಲಾಖೆ, ಎಫ್​​ಸಿಐಗೆ 2.16 ಲಕ್ಷ ಮೆಟ್ರಿಕ್ ಅಕ್ಕಿ ಖರೀದಿಸಲು ಹಣ ಪಾವತಿಸಿಲ್ಲ. ಇದರಿಂದ, ಗೋದಾಮುಗಳಿಂದ ಸಗಟು ಮಳಿಗೆಗಳಿಗೆ ಪಡಿತರ ಸರಬರಾಜು ಆಗಿಲ್ಲ.

ಪಡಿತರ ಸಂಘದಿಂದ ಸರ್ಕಾರಕ್ಕೆ ಪತ್ರ

ಜೂನ್ ತಿಂಗಳ ಪಾಲಿನ ಆಹಾರ ಪದಾರ್ಥ, ನ್ಯಾಯಬೆಲೆ ಅಂಗಡಿಗಳಿಗೆ ಇನ್ನೂ ಹಂಚಿಕೆ ಮಾಡಿಲ್ಲ. ಜು.26 ಕಳೆದರೂ ಎಫ್​​ಸಿಐ ಗೋದಾಮುನಿಂದ, ಸಗಟು ಮಳಿಗೆಗಳಿಗೆ ಹಂಚಿಕೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಆಹಾರ ಸಚಿವ ಕೆ.ಎಚ್.ಮುನಿಯಪ್ಪಗೆ ಪತ್ರ ಬರೆದಿದ್ದಾರೆ. ಪ್ರತಿ ನಿತ್ಯ ಕಾರ್ಡ್‌ದಾರರು ಅಂಗಡಿಗಳ ಮುಂದೆ ಧಾವಿಸಿ ಪಡಿತರ ವಿತರಣೆ ಬಗ್ಗೆ ವಿಚಾರಿಸುತ್ತಿದ್ದಾರೆ. ಉಳಿದ 3 ದಿನಗಳಲ್ಲಿ ಕಾರ್ಡ್‌ದಾರರಿಗೆ ಅಕ್ಕಿ ವಿತರಣೆ ತೊಂದರೆಯಾಗಲಿದೆ. ಹಾಗಾಗಿ, ಕೂಡಲೆ ಆಹಾರ ಪದಾರ್ಥ ಎತ್ತುವಳಿಗೆ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಕ್ಕಿಗೆ ಬಿಲ್ ಹಾಕಿದರೆ 24 ಗಂಟೆ ನಂತರ ಅಪ್ಡೇಟ್ ಆಗುತ್ತದೆ. ಅಲ್ಲಿಯವರೆಗೆ ಪಡಿತರ ವಿತರಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಪ್ರತಿ ತಿಂಗಳು ಸರಿಯಾಗಿ ಸಮಯಕ್ಕೆ ಎಫ್​​ಸಿಐಗೆ, ಸರ್ಕಾರ ಹಣ ಪಾವತಿಸಿದರೆ ಕಾರ್ಡ್‌ದಾರರಿಗೆ ವಿತರಿಸಲು ಅನುಕೂಲವಾಗುತ್ತದೆ. 5 ತಿಂಗಳಿಂದ ಮಾಲೀಕರಿಗೆ ಕಮಿಷನ್ ಹಣ ಬಿಡುಗಡೆಯಾಗಿಲ್ಲ ಎಂದು ಕೃಷ್ಣಪ್ಪ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net