

ಬೆಂಗಳೂರು: ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರವು ಬಿಡುಗಡೆಯಾಗಿ ನಾಲ್ಕು ದಿನಗಳಾಗಿವೆ. ಈ ನಾಲ್ಕು ದಿನಗಳಲ್ಲಿ ಚಿತ್ರವು 50 ಕೋಟಿ ರೂ.ಗಳಿಗೂ ಮೀರಿ ಕಲೆಕ್ಷನ್ ಆಗಿದ್ದು, ವಾರ ಮುಗಿಯುವ ಹೊತ್ತಿಗೆ ಚಿತ್ರ 100 ಕೋಟಿ ರೂ. ಕ್ಲಬ್ ಸೇರಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ.
‘ವಿಕ್ರಾಂತ್ ರೋಣ’ ಗೆಲುವಿನ ಅಲೆಯಲ್ಲಿ ತೇಲುತ್ತಿರುವಾಗಲೇ, ಸುದೀಪ್ ಮತ್ತು ಅನೂಪ್ ಭಂಡಾರಿ ಮುಂದಿನ ಚಿತ್ರ ಯಾವಾಗ ಪ್ರಾರಂಭವಾಗಬಹುದು ಎಂಬ ಚರ್ಚೆ ಈಗಾಗಲೇ ಶುರುವಾಗಿದೆ. ‘ವಿಕ್ರಾಂತ್ ರೋಣ’ ಬಿಡುಗಡೆಗೂ ಮುನ್ನವೇ, ಅನೂಪ್ ಭಂಡಾರಿ ನಿರ್ದೇಶನದ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುವುದಾಗಿ ಸುದೀಪ್ ಹೇಳಿದ್ದರು. ಅದಕ್ಕೆ ಸರಿಯಾಗಿ, ‘ಬಿಲ್ಲ ರಂಗ ಬಾಷ’ ಮತ್ತು ‘ಅಶ್ವತ್ಥಾಮ’ ಎಂಬ ಎರಡು ಚಿತ್ರಗಳಲ್ಲಿ ಈ ಜೋಡಿ ಮುಂದುವರೆಯಬಹುದು ಎಂಬ ಸುದ್ದಿ ಈಗಾಗಲೇ ಇದೆ. ಈ ಕುರಿತು ಅನೂಪ್ ಅವರನ್ನು ಕೇಳಿದರೆ, ಸದ್ಯದಲ್ಲೇ ಘೋಷಿಸಲಾಗುತ್ತದೆ ಎನ್ನುತ್ತಾರೆ.
‘ಸುದೀಪ್ ವರ್ಸಟೈಲ್ ನಟ. ಯಾವ ರೀತಿಯ ಪಾತ್ರವನ್ನು ಬೇಕಾದರೂ ಲೀಲಾಜಾಲವಾಗಿ ಮಾಡುತ್ತಾರೆ. ಅವರ ಜತೆಗೆ ಮತ್ತೊಂದು ಚಿತ್ರ ಮಾಡುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಅದರ ಘೋಷಣೆ ಮಾಡಲಿದ್ದೇವೆ’ ಎನ್ನುತ್ತಾರೆ. ಹಾಗಾದರೆ ‘ವಿಕ್ರಾಂತ್ ರೋಣ’ 50 ದಿನ ಪೂರೈಸಿದ ಬಳಿಕ ಘೋಷಣೆ ಆಗುತ್ತಾ ? ಎಂಬ ಪ್ರಶ್ನೆಗೆ, ‘50 ದಿನ ಆಗಬಹುದು ಅಥವಾ 20 ದಿನಗಳಲ್ಲೇ ಆಗಬಹುದು’ ಎಂದು ನಗುತ್ತಾರೆ ಅನೂಪ್. ಇನ್ನು, ಇದೇ ಸಮಯದಲ್ಲಿ ಸುದೀಪ್ ತಮಗೆ ಕಾರ್ವೊಂದನ್ನು ಉಡುಗೊರೆಯಾಗಿ ನೀಡಿದ್ದರ ಬಗ್ಗೆ ಹೇಳುತ್ತಾರೆ ಅನೂಪ್. ‘ಸುದೀಪ್ ಎಲ್ಲೂ ಹೇಳಬೇಡಿ ಎಂದಿದ್ದಾರೆ’ ಎಂದು ಹಿಂದೇಟು ಹಾಕುತ್ತಲೇ ಮಾತನಾಡುವ ಅನೂಪ್, ‘ಅವರಿಗೆ ತಂಡದಲ್ಲಿ ಯಾರ ಕೆಲಸವಾದರೂ ಇಷ್ಟವಾದರೆ ಅಂಥವರಿಗೆ ಏನಾದರೂ ಉಡುಗೊರೆ ಕೊಡುತ್ತಾರೆ. ಚಿತ್ರದಲ್ಲಿ ನನ್ನ ಕೆಲಸವೂ ಅವರಿಗೆ ಇಷ್ಟವಾದ ಕಾರಣವೇ ಅವರು ನನಗೆ ಕಾರ್ ಗಿಫ್ಟ್ ಮಾಡಿದರು. ಚಿತ್ರ ಪ್ರಾರಂಭದ ಸಮಯದಲ್ಲಿ ನಾನು ಒಬ್ಬ ನಿರ್ದೇಶಕನಾಗಿದ್ದೆ. ಆದರೆ, ಈಗ ನಾನು ಸುದೀಪ್ ಸರ್ ಕುಟುಂಬದ ಸದಸ್ಯ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅನೂಪ್. ಅಂದಹಾಗೆ ‘ರಾರಾ ರಕ್ಕಮ್ಮ’ ಹಾಡಿನ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ಗೂ ಸುದೀಪ್ ಕಾರ್ ಗಿಫ್ಟ್ ಮಾಡಿದ್ದರು.