

ಹರಾರೆ: ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಆಲ್ರೌಂಡರ್ ಯೂಸುಫ್ ಪಠಾಣ್ (80*ರನ್, 26 ಎಸೆತ, 5 ಬೌಂಡರಿ, 8 ಸಿಕ್ಸರ್) ಮತ್ತು ಕನ್ನಡಿಗ ರಾಬಿನ್ ಉತ್ತಪ್ಪ (88*ರನ್, 36 ಎಸೆತ, 8 ಬೌಂಡರಿ, 6 ಸಿಕ್ಸರ್) ಜಿಂಬಾಬ್ವೆಯ ಜಿಮ್ ಆಫ್ರೋ ಟಿ10 ಕ್ರಿಕೆಟ್ ಲೀಗ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಮ್ಮ ತಂಡಗಳ ಗೆಲುವಿನ ರೂವರಿಗಳಾಗಿ ಹೊರಹೊಮ್ಮಿದ್ದಾರೆ.
ಶುಕ್ರವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡರ್ಬಜ್ ಖಲಂದರ್ಸ್ ವಿರುದ್ಧ 6 ವಿಕೆಟ್ಗಳಿಂದ ಗೆಲುವು ದಾಖಲಿಸುವ ಮೂಲಕ ಜೊಹಾನ್ಸ್ರ್ಬಗ್ ಬಫಾಲೋಸ್ ಫೈನಲ್ ಪ್ರವೇಶಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಡರ್ಬನ್ ತಂಡ 10 ಓವರ್ಗಳಲ್ಲಿ 4 ವಿಕೆಟ್ಗೆ 140 ರನ್ ಪೇರಿಸಿತು. ಪ್ರತಿಯಾಗಿ ಯೂಸುಫ್ ಪಠಾಣ್ ಆರ್ಭಟದಿಂದ ಜೊಹಾನ್ಸ್ರ್ಬಗ್ ತಂಡ 9.5 ಓವರ್ಗಳಲ್ಲಿ 4 ವಿಕೆಟ್ಗೆ 142 ರನ್ ಪೇರಿಸಿ ಜಯಿಸಿತು. ಕೊನೇ 3 ಓವರ್ಗಳಲ್ಲಿ ಗೆಲುವಿಗೆ 64 ರನ್ ಬೇಕಿದ್ದಾಗ ಯೂಸುಫ್ ಪಠಾಣ್ ಗರ್ಜಿಸಿದರು. ಮೊಹಮದ್ ಆಮೀರ್ ಎಸೆದ ಇನಿಂಗ್ಸ್ನ 8ನೇ ಓವರ್ನಲ್ಲಿ 3 ಸಿಕ್ಸರ್, 1 ಬೌಂಡರಿ ಸಹಿತ 25 ರನ್ ಕಸಿದರು. 9ನೇ ಓವರ್ನಲ್ಲಿ ಮತ್ತೆ 19 ರನ್ ಸಿಡಿಸಿದರು. ಕೊನೇ ಓವರ್ನಲ್ಲಿ 20 ರನ್ ಬೇಕಿದ್ದಾಗ 2 ಬೌಂಡರಿ, 2 ಸಿಕ್ಸರ್ ಸಿಡಿಸಿ ಇನ್ನೊಂದು ಎಸೆತ ಬಾಕಿ ಇರುವಂತೆಯೇ 42 ವರ್ಷದ ಯೂಸುಫ್ ಪಠಾಣ್ ಗೆಲುವು ತಂದರು.
ಎಲಿಮಿನೇಟರ್ ಕಾದಾಟವಾಗಿದ್ದ ದಿನದ 2ನೇ ಪಂದ್ಯದಲ್ಲಿ ಹರಾರೆ ಹರಿಕೇನ್ಸ್ ತಂಡ ನಾಯಕ ರಾಬಿನ್ ಉತ್ತಪ್ಪ ಅಬ್ಬರದಿಂದ ಕೇಪ್ಟೌನ್ ಸ್ಯಾಂಪ್ ಆರ್ಮಿ ಎದುರು 9 ವಿಕೆಟ್ಗಳಿಂದ ಗೆದ್ದು 2ನೇ ಕ್ವಾಲಿಫೈಯರ್ ಪ್ರವೇಶಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೇಪ್ಟೌನ್ 3 ವಿಕೆಟ್ಗೆ 145 ರನ್ ಪೇರಿಸಿತು. ಪ್ರತಿಯಾಗಿ ಹರಾರೆ ಹರಿಕೇನ್ಸ್ ತಂಡ, ಆರಂಭಿಕನಾಗಿ ಕಣಕ್ಕಿಳಿದು ನಾಯಕನಾಟ ಆಡಿದ ಉತ್ತಪ್ಪ ಸಾಹಸದಿಂದ 9.2 ಓವರ್ಗಳಲ್ಲೇ 1 ವಿಕೆಟ್ಗೆ 146 ರನ್ ಪೇರಿಸಿ ಜಯಿಸಿತು. ಉತ್ತಪ್ಪಗೆ ಡೋನೊವನ್ ಫೆರೇರಾ (35*ರನ್, 16 ಎಸೆತ, 1 ಬೌಂಡರಿ, 4 ಸಿಕ್ಸರ್) ಭರ್ಜರಿ ಸಾಥ್ ನೀಡಿದರು.