ಮರವೂರು ಸೇತುವೆ -ಮರಕಡ ರಸ್ತೆ ಅಗಲೀಕರಣಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಗ್ರಹ

mng-7june-air port road
Published on



ಮಂಗಳೂರು : ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಮರವೂರು ಸೇತುವೆಯಿಂದ ಮರಕಡ ನಡುವಿನ ರಸ್ತೆಯನ್ನು ಅಗಲೀಕರಣಗೊಳಿಸುವಂತೆ ಒತ್ತಾಯಿಸಿ ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಪತ್ರ ಬರೆದಿದ್ದಾರೆ.
ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯು ಮರಕಡದವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ದಿಯಾಗಿದೆ. ಅಲ್ಲಿಂದ ಮುಂದಕ್ಕೆ ಮರವೂರು ಸೇತುವೆ ಮತ್ತು ಮರಕಡ ನಡುವಿನ ರಸ್ತೆ ಬಹಳ ಕಿರಿದಾಗಿದ್ದು ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಈ ರಸ್ತೆಯು ಕಳಪೆ ಗುಣಮಟ್ಟದಿಂದ ಕೂಡಿದ್ದು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಇದು ವಿಮಾನ ನಿಲ್ದಾಣಕ್ಕೆ ಪ್ರಮುಖ ರಸ್ತೆಯಾಗಿರುವುದರಿಂದ ಪ್ರಯಾಣಿಕರ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಮರವೂರು ಸೇತುವೆ ಹಾಗೂ ಮರಕಡ ನಡುವಿನ ರಸ್ತೆ ಚತುಷ್ಪಥವಾಗಿ ಪರಿವರ್ತಿಸುವುದಕ್ಕೆ ಅಗತ್ಯ ಕೈಗೊಳ್ಳಬೇಕೆಂದು ಕ್ಯಾ. ಚೌಟ ಮನವಿ ಮಾಡಿದ್ದಾರೆ.
ಈ ರಸ್ತೆ ಅಭಿವೃದ್ದಿಯಾದರೆ ಮಂಗಳೂರಿನ ವಿಮಾನ ನಿಲ್ದಾಣದವರೆಗೂ ಸಂಪೂರ್ಣವಾಗಿ ನಾಲ್ಕು ಪಥದ ರಸ್ತೆಯಾಗುತ್ತದೆ.
ನಗರದಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ಅವಧಿಯೂ ಕಡಿಮೆಯಾಗಲಿದೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಪ್ರಯಾಣ ದುಸ್ತರವಾಗುತ್ತಿದೆ. ಈ ರಸ್ತೆಯ ಶಾಶ್ವತ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವವರೆಗೂ,
ರಸ್ತೆಯಲ್ಲಿರುವ ಹೊಂಡ ಮುಚ್ಚಿಸಿ ಮೂಲಭೂತ ನಿರ್ವಹಣೆಗಾಗಿ ತುರ್ತು ಕ್ರಮಗಳು ಕೈಗೊಳ್ಳಬೇಕೆಂದು ಸಚಿವರಿಗೆ ಬರೆದಿರುವ ಪತ್ರದಲ್ಲಿ
ಸಂಸದರು ಕೋರಿದ್ದಾರೆ.
..........................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net