

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ನಲ್ಲಿ ಜಿನೀವಾ ಸಮಾವೇಶ ದಿನದ ಅಂಗವಾಗಿ ರೆಡ್‌ಕ್ರಾಸ್ ಸಂಸ್ಥೆ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಯುವ ದಿನ ಮತ್ತು ಕ್ಯಾನ್ಸರ್ ಜಾಗೃತಿ ಶಿಬಿರವನ್ನು ಮಾಜಿ ಸಚಿವ ಹಾಗೂ ಶಾಸಕ ಗೋಪಾಲಯ್ಯ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಗೋಪಾಲಯ್ಯ, ರೆಡ್‌ಕ್ರಾಸ್ ಸಂಸ್ಥೆ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಮಾನವೀಯ ಸೇವೆಗಳನ್ನು ನೀಡುತ್ತಿರುವ ರೆಡ್‌ಕ್ರಾಸ್ ಸಂಸ್ಥೆ ವಿಶೇಷವಾಗಿ ಆಶಾ ಕಾರ್ಯಕರ್ತರು, ಬಿಬಿಎಂಪಿ ಪೌರ ಕಾರ್ಮಿಕರು ಮತ್ತು ಇತರ ಬಡ ಜನರಿಗೆ ಮಾರಕರೋಗವಾಗಿರುವ ಕ್ಯಾನ್ಸರ್ ಬಗ್ಗೆ ಜಾಗೃತಿ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದ್ದು, ಸಂಸ್ಥೆಯ ಪೋಷಕ ಸದಸ್ಯರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ರೆಡ್‌ಕ್ರಾಸ್ ಉಪಾಧ್ಯಕ್ಷರಾದ ಭಾಸ್ಕರ್ ರಾವ್, ರೆಡ್‌ಕ್ರಾಸ್ 7 ತತ್ವಗಳ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ಆರೋಗ್ಯ ಹಾಗೂ ಮಾನವೀಯ ಸೇವೆ ನೀಡುವ ಬಗ್ಗೆ ಹೆಚ್ಚು ಗಮನಹರಿಸಿದ್ದು, ಸಮಾಜಕ್ಕೆ ಇನ್ನಷ್ಟು ಸೇವೆಗಳನ್ನು ವಿಸ್ತರಿಸಲು ರೆಡ್‌ಕ್ರಾಸ್‌ಗೆ ಸದಸ್ಯರಾಗುವ ಮೂಲಕ ಬೆಂಬಲ ನೀಡುವಂತೆ ವಿನಂತಿಸಿದರು.
ಕ್ಯಾನ್ಸರ್ ಸೊಸೈಟಿ ಮತ್ತು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಮತ್ತು ಪುರುಷರು ತಪಾಸಣೆಗೆ ಒಳಗಾದರು. ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ರೆಡ್‌ಕ್ರಾಸ್ ಮುಖ್ಯಸ್ಥ ಎ.ಬಿ.ಶೆಟ್ಟಿ, ಕಾರ್ಯದರ್ಶಿ ರಾಜೇಶ್,ರಾಜ್ಯ ಶಾಖೆ ಸದಸ್ಯ ನಾಗೇಶ್, ಖಜಾಂಚಿ ಅಶ್ವತ್‌ನಾರಾಯಣ್, ರಾಜೀವ್ ಶೆಟ್ಟಿ, ಮಲ್ಲಯ್ಶ, ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.