

ಮಂಗಳೂರು : ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ನೇತೃತ್ವದ ನಿಯೋಗ ವಿಶ್ವ ಆರೋಗ್ಯ ಸಂಸ್ಥೆ ಯ ಮಾಜಿ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರನ್ನು ಚೆನ್ನೈಯಲ್ಲಿ ಭೇಟಿಯಾದರು. ವಿಶ್ವ ಆರೋಗ್ಯ ಸಂಸ್ಥೆಯು ಅಡಕೆಯ ಉಪಯೋಗ ಕ್ಯಾನ್ಸರ್ ಕಾರಕವೆಂದು ಪರಿಗಣಿಸಿರುವುದು ಅಡಕೆಯನ್ನೇ ಜೀವನಾಧಾರವಾಗಿ ನಂಬಿರುವ ರೈತರ ಮೇಲೆ ಬೀರಿರುವ ಪರಿಣಾಮದ ಬಗ್ಗೆ ವಿಸ್ತೃತ ಚರ್ಚೆ
ನಡೆಸಿದರು. ನಿಯೋಗದಲ್ಲಿ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ.ಸತ್ಯನಾರಾಯಣ, ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೇಶವ ಭಟ್ ಉಪಸ್ಥಿತರಿದ್ದರು.
ಅಡಕೆಯ ಉಪಯೋಗವು ಕ್ಯಾನ್ಸರ್‌ಕಾರಕವಲ್ಲ ಬದಲಾಗಿ ಶಮನಕಾರಕ ಗುಣಗಳನ್ನು ಹೊಂದಿರುವುದನ್ನು ಸಾಬೀತುಪಡಿಸುವ ಸುಮಾರು 20 ಕ್ಕೂ ಹೆಚ್ಚು ಸಂಶೋಧನಾ ವರದಿಗಳನ್ನು ಪ್ರಸ್ತುತ ಪಡಿಸಿ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿಯವರಿಗೆ ಮನವರಿಕೆ ಮಾಡಲಾಯಿತು. ರೈತರ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಪಡೆದು, ಇಂತಹ ವಿಶ್ವಾಸಾರ್ಹ ದಾಖಲೆಗಳನ್ನು ಇಂಟರ್ ನ್ಯಾಶನಲ್ ಏಜನ್ಸಿ ಫಾರ್ ಕ್ಯಾನ್ಸರ್ ರಿಸರ್ಚ್ ಮತ್ತು ವರ್ಲ್ಡ್ ಹೆಲ್ತ್ ಆರ್ಗನೈಸೇಷನ್‌ನಲ್ಲಿ ಮಂಡಿಸಿ ಅಡಕೆಯ ಬಗೆಗಿನ
ತಪ್ಪು ತಿಳುವಳಿಕೆಯನ್ನು ಮರು ಪರಿಶೀಲಿಸಲು ಭಾರತ ಸರ್ಕಾರ ಮೂಲಕ ಒತ್ತಡ ಹೇರುವಂತೆ ನಿಯೋಗ ಸಲಹೆ ನೀಡಿತು.
ರೈತರ ಸಮಸ್ಯೆ ನಿವಾರಣೆಗೆ ಕ್ಯಾಂಪ್ಕೊದ ಪ್ರಯತ್ನಕ್ಕೆ ಡಾ.ಸೌಮ್ಯ ಸ್ವಾಮಿನಾಥನ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಈ ಕುರಿತು ಕೇಂದ್ರ ಕೃಷಿ ಹಾಗೂ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವಾಲಯಕ್ಕೆ ಅಭಿಪ್ರಾಯ ನೀಡುವುದಾಗಿ ಭರವಸೆ ನೀಡಿದರು.