

ಬುಡಾಪೆಸ್ಟ್ (ಹಂಗೆರಿ): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶನಿವಾರವಷ್ಟೇ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದ ಹಿನ್ನೆಲೆಯಲ್ಲಿ ಪ್ರಿಯಾ ಮಲಿಕ್ ಕೂಡ ಒಲಿಂಪಿಕ್ಸ್‌ನಲ್ಲೇ ಪದಕ ಜಯಿಸಿದ್ದಾರೆ ಎಂದು ಭಾವಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂತು. ಕೆಲ ಮಂದಿ ವಿಶ್ವ ಕೆಡೆಟ್ ಚಾಂಪಿಯನ್‌ಗೆ ಅಭಿನಂದನೆ ಎಂದರೆ, ಕೆಲಮಂದಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ ಗೆದ್ದುಕೊಟ್ಟ ಪ್ರಿಯಾಗೆ ಅಭಿನಂದನೆಗಳು ಎಂದು ಬರೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಗೆ ಈಡಾದರು. ತಕ್ಷಣವೇ ತಿದ್ದುಕೊಂಡ ಕೆಲಮಂದಿ ಪ್ರಿಯಾ ಮಲಿಕ್‌ಗೆ ಶುಭಾಶಯ ಕೋರಿದರು.
ಭಾರತದ ಕುಸ್ತಿಪಟು ಪ್ರಿಯಾ ಮಲಿಕ್, ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು. ಭಾನುವಾರ ನಡೆದ ಮಹಿಳೆಯರ 73 ಕೆಜಿ ವಿಭಾಗದ ಫೈನಲ್‌ನಲ್ಲಿ ಪ್ರಿಯಾ ಮಲಿಕ್ 5-0 ಯಿಂದ ಬೆಲಾರಸ್‌ನ ಕಸೆನಿಯಾ ಪಟಾಪೊವಿಚ್ ಎದುರು ಜಯ ದಾಖಲಿಸಿದರು. ಪ್ರಿಯಾ ಮಲಿಕ್ 2019ರಲ್ಲಿ ಪುಣೆಯಲ್ಲಿ ಖೇಲೋ ಇಂಡಿಯಾ ಕೂಟದಲ್ಲೂ ಸ್ವರ್ಣ ಗೆದ್ದಿದ್ದರು. ಇದಕ್ಕೂ ಮೊದಲು ಮಹಿಳೆಯರ 43 ಕೆಜಿ ವಿಭಾಗದಲ್ಲಿ ತನು ಸ್ವರ್ಣ ಜಯಿಸಿದ್ದರೆ, ಪುರುಷರ ವಿಭಾಗದಲ್ಲಿ ಜಸ್ಕರಣ್ ಸಿಂಗ್ ಬೆಳ್ಳಿ ಪದಕ ಗೆದ್ದರೆ, ಚಿರಾಗ್ ಹಾಗೂ ಜೈದೀಪ್ ಕಂಚಿನ ಪದಕ ಜಯಿಸಿದ್ದರು.