ಮುಗಿಯದ ಸಂಪುಟ ಸಂಕಟ: ಮುಗಿದ ಸಿಎಂ ಹೇಳಿದ ಸಮಯ

BSY JPG
Published on

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ಸಂಕಷ್ಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಪಕ್ಷದ ವರಿಷ್ಠರು ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಇರುವುದು ಆಕಾಂಕ್ಷಿಗಳಲ್ಲಿ ಆತಂಕಕ್ಕೂ ಕಾರಣವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ಹೋಗಿ ಬಂದ ಸಂದರ್ಭದಲ್ಲಿ ಮೂರು ದಿನಗಳಲ್ಲಿ ವರಿಷ್ಠರಿಂದ ಸೂಚನೆ ಬರಲಿದೆ ಎಂದು ಹೇಳಿದ್ದರು. ಆದರೆ ಅವರು ಹೇಳಿದ ಗಡುವು ಮುಗಿದಿದ್ದು ವರಿಷ್ಠರಿಂದ ಯಾವ ಮಾಹಿತಿಯೂ ಲಭ್ಯವಾಗಿಲ್ಲ.

ಪದೇ ಪದೇ ಹೀಗೆ: ಯಡಿಯೂರಪ್ಪ ಸರ್ಕಾರ ಬರಲು ಕಾರಣವಾದವರಿಗೆ ತಾವು ಕೊಟ್ಟ ಮಾತು ಉಳಿಸಿಕೊಳ್ಳಲು ಮೂರು ಬಾರಿ ಹೈಕಮಾಂಡ್ ಅಂಗಳದ ಬಾಗಿಲು ತಟ್ಟಿ ಬಂದಿದ್ದಾರೆ. ಆದರೆ ಯಾವುದೇ ಉಪಯೋಗವಾಗಿಲ್ಲ. ಯಾವುದೇ ತೀರ್ವನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತಿಲ್ಲ. ಅದಕ್ಕೆ ಕಾರಣಗಳನ್ನು ಯಡಿಯೂರಪ್ಪ ಅವರಿಗೆ ತಿಳಿಸುತ್ತಿಲ್ಲ.

ಆಕಾಂಕ್ಷಿಗಳಿಗೆ ಮಾಹಿತಿ: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸದ್ಯಕ್ಕೆ ತಾವು ಸಂಪುಟ ಸೇರುವ ಸಾಧ್ಯತೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ

ಎನ್ನಲಾಗಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಇನ್ನಷ್ಟು ತಡವಾಗಲಿದೆ ಎಂಬುದನ್ನು ವರಿಷ್ಠರಿಂದಲೇ ಆಕಾಂಕ್ಷಿಗಳಿಗೆ ತಲುಪಿದೆ. ಆದ್ದರಿಂದ ಸರ್ಕಾರ ಬರಲು ಕಾರಣರಾದ ಬಹುತೇಕ ಆಕಾಂಕ್ಷಿಗಳಲ್ಲಿ ಈಗ ನಿರಾಸೆ ತುಂಬಿದೆ. ಆದ್ದರಿಂದಲೇ ಬಹುತೇಕರು ಈಗ ಸಿಎಂ ಭೇಟಿ ಮಾಡುವುದನ್ನೇ ನಿಲ್ಲಿಸಿದ್ದಾರೆ.

ತಡಕ್ಕೆ ಹಲವು ಕಾರಣ: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ತಡವಾಗಲು ಹಲವು ಕಾರಣಗಳಿವೆ ಎನ್ನುತ್ತವೆ ಬಿಜೆಪಿ ಮೂಲಗಳು. ಮುಂದಿನ ವಾರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬರುತ್ತಿದ್ದಾರೆ. ಅವರು ಬಂದು ಇಲ್ಲಿ ಎರಡು ದಿನ ಇದ್ದು ಅಭಿಪ್ರಾಯ ಸಂಗ್ರಹಿಸಿ ಹೋಗಿ ಮಾಹಿತಿ ನೀಡಲಿದ್ದಾರೆ. ಆ ನಂತರವಷ್ಟೇ ಹೈಕಮಾಂಡ್ ನಿರ್ಧಾರ ಮಾಡಲಿದೆ. ಅಮಿತ್ ಶಾ ಮತ್ತು ನಡ್ಡಾ ಮುಂದಿನ ತಿಂಗಳು ರಾಜ್ಯ ಪ್ರವಾಸಕ್ಕೆ ಬರುತ್ತಿದ್ದಾರೆ. ನಡ್ಡಾ ಮೂರು ದಿನ ಇಲ್ಲಿರಲಿದ್ದು, ಸಮಗ್ರ ಮಾಹಿತಿ ಸಂಗ್ರಹಿಸಲಿದ್ದಾರೆ. ಇನ್ನೂ ಮೂರು ಕ್ಷೇತ್ರಗಳ ಉಪ ಚುನಾವಣೆಗಳು ಯಾವುದೇ ಕ್ಷಣ ಘೋಷಣೆಯಾಗಲಿವೆ. ಆ ಚುನಾವಣೆಗಳು ಮುಗಿದ ನಂತರವಷ್ಟೇ ಸಂಪುಟ ಪುನಾರಚನೆಯಾಗಬಹುದು ಎಂದು ಹೇಳಲಾಗುತ್ತಿದೆ.

ಆಕಾಂಕ್ಷಿಗಳಿಂದ ಸಿಎಂ ಭೇಟಿ: ಸಿಎಂ ಬೆಂಬಲಿಗ ಆಕಾಂಕ್ಷಿಗಳು ಮಾತ್ರ ಒತ್ತಡ ತರುವುದನ್ನು ನಿಲ್ಲಿಸಿಲ್ಲ. ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಹಾಗೂ ಎಂ.ಪಿ. ಕುಮಾರಸ್ವಾಮಿ ಭಾನುವಾರ ಸಿಎಂ ಭೇಟಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಡ ತಂದಿದ್ದಾರೆ. ಆದರೆ ಸಿಎಂ ಯಾವುದೇ ಭರವಸೆ ನೀಡಿಲ್ಲ.

ವಾಟಾಳ್​ಗೆ ರೇಣುಕಾಚಾರ್ಯ ಎಚ್ಚರಿಕೆ

ಬೆಂಗಳೂರು: ಕನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಟೀಕೆ ಮಾಡಿದರೆ ಸಹಿಸುವುದಿಲ್ಲವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಸಿಎಂ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರನ್ನು ಟೀಕಿಸಿದರೆ ನಾವು ನಮ್ಮ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ ಎಂದರು. ಕನ್ನಡ ಚಳವಳಿಗಾರರು ರೋಲ್​ಕಾಲ್​ಗಳು ಎಂಬ ಶಾಸಕ ಯತ್ನಾಳ್ ಹೇಳಿಕೆಯನ್ನು ಸಮರ್ಥನೆ ಮಾಡುವುದಾಗಿ ಹೇಳಿದರು.

ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ಮಾಡುವಂತೆ ಒತ್ತಾಯ ಮಾಡಲಾಗಿದೆ. ಮುಖ್ಯಮಂತ್ರಿ ಅವರಿಗೂ ಮನವಿ ಮಾಡಲಾಗಿದೆ. ಒತ್ತಡ ಹಾಕದೇ ಏನೂ ಸಿಗುವುದಿಲ್ಲ. | ಎಂಪಿ. ರೇಣುಕಾಚಾರ್ಯ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net