ಮನೆಮನೆಗಳ ಆಹಾರೋದ್ಯಮಕ್ಕೆ 10,000 ಕೋಟಿ ರೂಪಾಯಿ ಯೋಜನೆ

Micro Food Processing Unit 20 MAY 20
Published on

ನವದೆಹಲಿ: ದೇಶಾದ್ಯಂತ ಇರುವ 2 ಲಕ್ಷದಷ್ಟು ಆಹಾರ ಸಂಸ್ಕರಣಾ ಕಿರು ಘಟಕಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಆಹಾರ ಸಂಸ್ಕರಣಾ ಕಿರು ಘಟಕಗಳಿಗೆ ಉತ್ತೇಜನ ನೀಡುವ 10,000 ಕೋಟಿ ರೂಪಾಯಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

ಈ ಯೋಜನೆಯ ಮೂಲಕ ದೇಶದಲ್ಲಿರುವ 2 ಲಕ್ಷದಷ್ಟು ಆಹಾರ ಸಂಸ್ಕರಣಾ ಕಿರುಘಟಕಗಳಿಗೆ ಸಾಲ ಸಂಬಂಧಿತ ಸಬ್ಸಿಡಿ ನೀಡುವ ಉದ್ದೇಶ ಸರ್ಕಾರದ್ದು. ಇದು ಕೋವಿಡ್​ 19 ನಿಂದ ಅರ್ಥ ವ್ಯವಸ್ಥೆಗೆ ಆಗಿರುವ ಹಾನಿಯನ್ನು ತಪ್ಪಿಸುವುದಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್​ನ ಭಾಗವೇ ಆಗಿದೆ. ಈ ಯೋಜನೆಗೆ 'ಸ್ಕೀಂ ಫಾರ್ ಫಾರ್ಮಲೈಸೇಷನ್ ಆಫ್ ಮೈಕ್ರೋ ಫುಡ್ ಪ್ರಾಸೆಸಿಂಗ್ ಎಂಟರ್​ಪ್ರೈಸೆಸ್' ಎಂದು ಹೆಸರು.

ದೇಶದಲ್ಲಿ 25 ಲಕ್ಷಕ್ಕೂ ಹೆಚ್ಚು ನೋಂದಣಿ ರಹಿತ ಆಹಾರ ಸಂಸ್ಕರಣಾ ಉದ್ಯಮಗಳಿದ್ದು, ಒಟ್ಟಾರೆ ಉದ್ಯಮದಲ್ಲಿ ಇದರ ಪಾಲು ಶೇಕಡ 98. ಇವುಗಳ ಪೈಕಿ ಶೇಕಡ 66 ಗ್ರಾಮೀಣ ಭಾಗದಲ್ಲಿದ್ದು, ಅವುಗಳ ಪೈಕಿ ಶೇಕಡ 80 ಕುಟುಂಬ ಕೇಂದ್ರಿತವಾಗಿವೆ. ಈ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇದನ್ನು ಬಲಪಡಿಸುವ ಉದ್ದೇಶದಿಂದಲೇ ಈ ಯೋಜನೆ ರೂಪಿಸಲಾಗಿದೆ. ಇದಕ್ಕೆ ಉದ್ಯಮದ ಸ್ವರೂಪ ನೀಡುವ ಸಲುವಾಗಿ ಪ್ರಯತ್ನ ನಡೆಸಲಾಗುತ್ತಿದೆ.

ಈ ಯೋಜನೆಯ ಅಸಂಘಟಿತ ವಲಯಕ್ಕೇ ಮೀಸಲಾಗಿದ್ದು, ಇದರ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40ರ ಅನುಪಾತದಲ್ಲಿ ಹಂಚಿಕೊಳ್ಳಲಿವೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅಂದರೆ 2024-25ರೊಳಗೆ ಇದನ್ನು ಅನುಷ್ಠಾನಗೊಳಿಸಲಾಗುವುದು. 10 ಲಕ್ಷ ರೂಪಾಯಿ ಒಳಗಿನ ಪ್ರಾಜೆಕ್ಟ್​ಗಳನ್ನು ಕಿರು ಉದ್ಯಮವಾಗಿರಲಿದ್ದು, ಸಾಲ-ಸಬ್ಸಿಡಿಗೆ ಪರಿಗಣಿಸಲಾಗುತ್ತದೆ. ಇದರಲ್ಲಿ ಮಾರ್ಜಿನ್ ಮನಿಯಾಗಿ ಫಲಾನುಭವಿ ಶೇಕಡ 10 ಹೂಡಿಕೆ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.

ಸ್ವಸಹಾಯ ಸಂಘಗಳ ಮೂಲಕ ಸದಸ್ಯರು ಇಂತಹ ಉದ್ಯಮ ಆರಂಭಿಸುವುದೇ ಆದರೆ, ಮೂಲ ಬಂಡವಾಳ ಎಂಬ ನೆಲೆಯಲ್ಲಿ ಸಂಘಕ್ಕೆ 4 ಲಕ್ಷ ರೂಪಾಯಿ ನೀಡಿ ಸದಸ್ಯರಿಗೆ ಸಾಲ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net