

ಅಡಿಲೇಡ್/ಸಿಡ್ನಿ: ಭಾರತ ತಂಡ ಕರೊನಾ ಕಾಲದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಡಲು ಆಸ್ಟ್ರೇಲಿಯಾ ನೆಲಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ, ಮಹಾಮಾರಿಯಿಂದ ಕೆಲ ಅಡ್ಡಿ-ಆತಂಕಗಳು ಎದುರಾಗಿವೆ. ಅಡಿಲೇಡ್‌ನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಡಿಸೆಂಬರ್ 17ರಿಂದ ಇಲ್ಲಿ ನಡೆಯಬೇಕಿರುವ ಭಾರತ ತಂಡದ ಮೊದಲ ಟೆಸ್ಟ್ ಪಂದ್ಯಕ್ಕೆ ಆತಂಕ ಎದುರಾಗಿದೆ. ಆದರೆ ಪಂದ್ಯ ನಿಗದಿಯಂತೆಯೇ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಭರವಸೆ ನೀಡಿದೆ. ಈ ನಡುವೆ ಕರೊನಾ ಭೀತಿಯಿಂದಾಗಿ ದಕ್ಷಿಣ ಆಸ್ಟ್ರೇಲಿಯಾದ ಗಡಿಗಳನ್ನು ಬಂದ್ ಮಾಡಲಾಗಿರುವ ಕಾರಣ, ಆಸೀಸ್ ರಾಷ್ಟ್ರೀಯ ತಂಡದ ಕೆಲ ಆಟಗಾರರನ್ನು ನ್ಯೂ ಸೌತ್ ವೇಲ್ಸ್‌ನ ಸಿಡ್ನಿಗೆ ಏರ್‌ಲಿಫ್ಟ್ ಮಾಡಲಾಗಿದೆ.
ಅಡಿಲೇಡ್ ಒಳಗೊಂಡಂತೆ ದಕ್ಷಿಣ ಆಸ್ಟ್ರೇಲಿಯಾ ರಾಜ್ಯದಲ್ಲಿ ಸೋಮವಾರ 21 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ರಾಜ್ಯಗಳಾದ ಪಶ್ಚಿಮ ಆಸ್ಟ್ರೇಲಿಯಾ, ಕ್ವೀನ್ಸ್‌ಲ್ಯಾಂಡ್ ಮತ್ತು ಟಾಸ್ಮೇನಿಯಾ ಸೋಮವಾರದಿಂದ ಗಡಿ ಬಂದ್ ಮಾಡಿವೆ. ಹೀಗಾಗಿ ದಕ್ಷಿಣ ಆಸ್ಟ್ರೇಲಿಯಾದಲ್ಲಿದ್ದ, ಭಾರತ ವಿರುದ್ಧ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಆಡಬೇಕಿರುವ ಆಸೀಸ್ ತಂಡದ ಆಟಗಾರರನ್ನು ಸಿಎ ಏರ್‌ಲಿಫ್ಟ್ ಮಾಡಿದೆ. ಟೆಸ್ಟ್ ತಂಡದ ನಾಯಕ ಟಿಮ್ ಪೇನ್, ಯುವ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್, ಮ್ಯಾಥ್ಯೂ ವೇಡ್, ಟ್ರಾವಿಡ್ ಹೆಡ್ ಮತ್ತು ಕ್ಯಾಮರೂನ್ ಗ್ರೀನ್ ಇದರಲ್ಲಿ ಸೇರಿದ್ದಾರೆ.
ಭಾರತ ವಿರುದ್ಧದ ಸರಣಿಯಿಂದ ಸುಮಾರು 2 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಲಾಭದ ನಿರೀಕ್ಷೆಯಲ್ಲಿರುವ ಸಿಎ, ಸರಣಿಯನ್ನು ನಿಗದಿಯಂತೆ ಆಯೋಜಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಹೀಗಾಗಿ ಡಿ. 17ರಿಂದ ಅಡಿಲೇಡ್‌ನಲ್ಲೇ ಮೊದಲ ಟೆಸ್ಟ್ ನಡೆಯಲಿದೆ ಎಂದು ಸಿಎ ಈಗಲೂ ಭರವಸೆ ವ್ಯಕ್ತಪಡಿಸುತ್ತಿದೆ. ದಕ್ಷಿಣ ಆಸ್ಟ್ರೇಲಿಯಾದ ಪರಿಸ್ಥಿತಿಯ ಮೇಲೆ ಸೂಕ್ಷ್ಮವಾಗಿ ಕಣ್ಣಿಡಲಾಗಿದೆ ಎಂದು ಸಿಎ ಸಿಇಒ ನಿಕ್ ಹಾಕ್ಲೆ ಹೇಳಿದ್ದಾರೆ.
ರಾಷ್ಟ್ರೀಯ ತಂಡದ ಆಟಗಾರರಲ್ಲದೆ ಆಸ್ಟ್ರೇಲಿಯಾ ಎ ಮತ್ತು ಬಿಗ್‌ಬಾಷ್ ಲೀಗ್ ತಂಡಗಳ ಆಟಗಾರರನ್ನೂ ಸಿಎ ಯಶಸ್ವಿಯಾಗಿ ಏರ್‌ಲಿಫ್ಟ್ ಮಾಡಿದೆ. ಈ ಮೂಲಕ ತವರಿನ ಬೇಸಗೆ ಋತುವಿನ ಎಲ್ಲ ಸರಣಿ/ಟೂರ್ನಿಗಳಿಗೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಿದೆ.
ಆಸ್ಟ್ರೇಲಿಯಾದಲ್ಲಿ ಈಗ ಅಡಿಲೇಡ್‌ನಿಂದ ಬಂದಿರುವ ಎಲ್ಲ ಪ್ರವಾಸಿಗರಿಗೆ ಇತರ ರಾಜ್ಯಗಳಲ್ಲಿ 14 ದಿನಗಳ ಹೋಟೆಲ್ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಈ ನಿಯಮ ಆಟಗಾರರಿಗೂ ಅನ್ವಯಿಸುತ್ತಿದೆ.
ಭಾರತ ತಂಡ ಸಿಡ್ನಿಯಲ್ಲಿ ಸೇಫ್
ಭಾರತ ತಂಡದ ಆಟಗಾರರು ಮತ್ತು ಯುಎಇಯಲ್ಲಿ ಐಪಿಎಲ್ ಆಡಿ ತವರಿಗೆ ಮರಳಿರುವ ಆಸೀಸ್ ಆಟಗಾರರು ಸದ್ಯ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ನ. 27ರಂದು ಸಿಡ್ನಿಯಲ್ಲಿ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಮುನ್ನಾದಿನ ಈ ಕ್ವಾರಂಟೈನ್ ಅವಧಿ ಮುಕ್ತಾಯಗೊಳ್ಳಲಿದೆ.