ದೇವೇಗೌಡರ ಪಾರ್ಟಿ ಸೇರಿಕೋ ಅಂತ ಸಿ.ಟಿ. ರವಿಗೆ ಹೇಳಿದ್ದರಂತೆ ಅವರ ತಂದೆ!

Untitled-3
Published on

ಶಿವಮೊಗ್ಗ: ‘‘ನಾನು ರಾಜಕೀಯ ಜೀವನದ ಆರಂಭದಲ್ಲಿ ಬಿಜೆಪಿಯ ಸದಸ್ಯತ್ವ ಪಡೆದಾಗ, ನನ್ನ ಅಪ್ಪ ‘ಇದ್ಯಾವುದೋ ಪಕ್ಷ, ಸುಮ್ನೇ ದೇವೇಗೌಡರ ಪಕ್ಷ ಸೇರಿಕೋ’ ಎಂದಿದ್ದರು. ಅವರ ಮಾತು ಕೇಳಿದ್ದರೆ ನನ್ನ ಪರಿಸ್ಥಿತಿಯೇ ಬೇರೆಯಾಗುತ್ತಿತ್ತು’’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಮೊದಲ ಬಾರಿಗೆ ಶನಿವಾರ ಶಿವಮೊಗ್ಗಕ್ಕೆ ಆಗಮಿಸಿದ್ದ ಸಿ.ಟಿ.ರವಿ ಅವರನ್ನು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘‘ಅಂದು ನಮ್ಮಪ್ಪನ ಮಾತು ಕೇಳಿ ದೇವೇಗೌಡರ ಪಕ್ಷಕ್ಕೆ ಸೇರಿಕೊಂಡಿದ್ದರೆ ಇಂದು ದೊಡ್ಡ ಗೌಡರಿಗೆ ಜೈ, ಸಣ್ಣ ಗೌಡರಿಗೆ ಜೈ, ಮರಿ ಗೌಡರಿಗೆ ಜೈ ಅನ್ನಬೇಕಿತ್ತು. ಆದರೆ ಬಿಜೆಪಿ ಸೇರಿದ್ದರಿಂದ ಭಾರತ್ ಮಾತಾ ಕೀ ಜೈ ಎನ್ನುವುದನ್ನು ಪಕ್ಷ ಕಲಿಸಿದೆ’’ ಎಂದು ಹೇಳಿದರು.

‘‘ನಾನು ಬಿಜೆಪಿಗೆ ಬಂದಾಗ ಮೊದಲು ನೀಡಿದ ಜವಾಬ್ದಾರಿ ಮೈಕ್‌ನಲ್ಲಿ ಪ್ರಚಾರ ಮಾಡುವುದು. ಓರ್ವ ಮೈಕ್ ಪ್ರಚಾರಕನನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮಾಡಬಹುದು ಎಂದರೆ ಅದು ಬಿಜೆಪಿಯಲ್ಲಿ ಮಾತ್ರ. ಅದು ನಮ್ಮ ಪಕ್ಷದ ವಿಶೇಷ ಕೂಡ. ಪಕ್ಷದಲ್ಲಿ ಎಲ್ಲರನ್ನೂ ಗುರುತಿಸುತ್ತಾರೆ ಎನ್ನುವುದಕ್ಕೆ ನಾನೇ ನಿದರ್ಶನ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net