

ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಸಂಬಂಧವನ್ನೇ ಕಡಿದುಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿಂದೆ ಜೆಡಿಎಸ್ನಲ್ಲಿದ್ದ ಇಬ್ರಾಹಿಂ, ಸಿದ್ದರಾಮಯ್ಯರನ್ನ ಬೆಂಬಲಿಸಿ ಕಾಂಗ್ರೆಸ್ ಸೇರಿದ್ದರು, 2018ರ ಚುನಾವಣೆಯಲ್ಲೂ ಪರವಾಗಿ ರಾಜ್ಯ ಸುತ್ತಿದ್ದರು. ಇದೀಗ ವಿಧಾನಪರಿಷತ್ ಪ್ರತಿಪಕ್ಷ ಸ್ಥಾನದ ಆಯ್ಕೆ ಸಂದರ್ಭ ಸಿದ್ದರಾಮಯ್ಯ ತಮ್ಮ ಪರ ನಿಲ್ಲಲಿಲ್ಲ ಎಂದು ಮುನಿಸಿಕೊಂಡ ಅವರು ಜೆಡಿಎಸ್ ಮನೆಗೆ ಎಂಟ್ರಿ ಕೊಡುವ ಎಲ್ಲ ಲಕ್ಷಣಗಳೂ ಗೋಚರಿಸಿವೆ.
ಇದಕ್ಕೆ ಪುಷ್ಟಿ ನೀಡುವಂತೆ ಸೋಮವಾರ ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, 'ನಾನು ಮತ್ತು ದೇವೇಗೌಡರು ತಂದೆ-ಮಗ ಇದ್ದಂತೆ. ತಂದೆ ಎಂದಾದರೂ ಮಗನಿಗೆ ಬೇಡ ಅಂತಾರಾ? ನಾಳೆಯಿಂದ ರಾಜ್ಯ ಪ್ರವಾಸ ಆರಂಭಿಸುವೆ. ಜನರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡುವೆ' ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಬಂದು ಮಾತುಕತೆ ನಡೆಸಿದ್ದಾರೆ. ಎಚ್ಡಿಕೆ-ದೇವೇಗೌಡರೂ ಮಾತನಾಡಿದ್ದಾರೆ. ಜನರ ಬಳಿ ಹೋಗಿ ಎರಡನ್ನೂ ತಿಳಿಸುವೆ, ಅವರು ಹೇಗೆ ಹೇಳ್ತಾರೋ ಹಾಗೆ ಮಾಡುವೆ. ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯ ಬಗ್ಗೆ ನಾನು ಮಾತಾಡಲ್ಲ, ಸಮಯ ಬಂದಾಗ ನೀವೇ ನೋಡಿ. ರಾಜ್ಯದ ಜನರೇ ಚಿತ್ರಣ ಕೊಡಬೇಕು ಎಂದು ಒಗಟಿನಂತೆ ಇಬ್ರಾಹಿಂ ಹೇಳಿದರು.
ಬಿಜೆಪಿ ಬಗ್ಗೆಯೂ ಆತ್ಮೀಯತೆ ಇದೆ. ಯಾರ ಬಗ್ಗೆಯೂ ವೈಯಕ್ತಿಕ ಶತೃತ್ವ ಇಲ್ಲ, ಸಿದ್ಧಾಂತ ಬೇರೆ ಬೇರೆ ಅಷ್ಟೆ. ನಾನು ಸಚಿವನಾಗಿದ್ದಾಗ ಅನಿಲ್ ಬೈಜಲ್ ಅಂತ ಎಂಡಿ ಇದ್ರು, ಅವರು ಆರ್ಎಸ್ಎಸ್. ಹಾಗಂತ ನಾನು ಆರ್ಎಸ್ಎಸ್ ಆದನಾ? ಇಲ್ಲ. ಎಲ್ಲರ ಅಭಿಪ್ರಾಯ ಪಡೆದು ನನ್ನ ನಿರ್ಧಾರ ಹೇಳ್ತೀನಿ ಎಂದು ಡಿಕೆಶಿ ಅವರಿಗೆ ಹೇಳಿದೆ ಎಂದರು.
ವಿಧಾನಪರಿಷತ್ ಪ್ರತಿಪಕ್ಷ ಸ್ಥಾನದ ಆಯ್ಕೆ ಸಂದರ್ಭ ಸಿದ್ದರಾಮಯ್ಯ ತಮ್ಮ ಪರ ನಿಲ್ಲಲಿಲ್ಲ ಎಂದು ಮುನಿಸಿಕೊಂಡು ಕಾಂಗ್ರೆಸ್ ಸಂಬಂಧವನ್ನೇ ಕಡಿದುಕೊಳ್ಳಲು ಸಿ.ಎಂ. ಇಬ್ರಾಹಿಂ ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ನಡುವೆ ಎಚ್.ಡಿ.ಕುಮಾರಸ್ವಾಮಿ, ಇಬ್ರಾಹಿಂ ಅವರನ್ನ ಭೇಟಿ ಮಾಡಿ ಪಕ್ಷಕ್ಕೆ ಮರಳುವಂತೆ ಆಹ್ವಾನ ನೀಡಿದ್ದರು. ಇದರ ಬೆನ್ನಲ್ಲೇ ಇಬ್ರಾಹಿಂ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದ ಡಿಕೆಶಿ, ಕಾಂಗ್ರೆಸ್ನಲ್ಲೇ ಮುಂದುವರಿಯುವಂತೆ ಕೋರಿಕೊಂಡಿದ್ದರು. ಆದರೆ, ಸೋಮವಾರ ದೇವೇಗೌಡರನ್ನು ಭೇಟಿಯಾಗಿ ಇಬ್ರಾಹಿಂ ಮಾತುಕತೆ ನಡೆಸಿರುವುದು ಭಾರಿ ಕುತೂಹಲ ಮೂಡಿಸಿದೆ.
ಈ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಇಬ್ರಾಹಿಂ ಅವರು ಸ್ವಂತ ಮನೆಗೆ ಬರುವ ಬಗ್ಗೆ ಚಿಂತನೆ ಮಾಡ್ತಿದ್ದಾರೆ. ಈ ಬಗ್ಗೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಇತ್ತೀಚಿಗೆ ನಾನು ಇಬ್ರಾಹಿಂ ಅವರನ್ನ ಭೇಟಿ ಮಾಡಿದ್ದೆ. ಇದಾದ ಬೆನ್ನಲ್ಲೇ ಕಾಂಗ್ರೆಸ್ನ ಕೆಲ ನಾಯಕರು ಇಬ್ರಾಹಿಂ ಮನೆಗೆ ಹೋಗಿದ್ದಾರೆ. ಇಬ್ರಾಹಿಂ ಅವರು ಇದೀಗ ಸ್ವಂತ ಮನೆಯ ಅಡ್ರೆಸ್ ಹುಡುಕಿದ್ದಾರೆ. ಅವರು ಪ್ರವಾಸ ಹೋಗಿ ಬಂದು ಒಂದು ನಿರ್ಣಯ ಮಾಡ್ತಾರೆ ಎಂದರು.