ಇಂದು ಬಾನಂಗಳದಲ್ಲಿ ವಿಸ್ಮಯ- ನೋಡಿ ಕಣ್ತುಂಬಿಸಿಕೊಳ್ಳಿ

dhoomaketu
Published on

ಬೆಂಗಳೂರು: ಇಂದು ಆಗಸದಲ್ಲಿ ಅಪರೂಪದ ವಿಸ್ಮಯವೊಂದು ನಡೆಯಲಿದೆ. ‘ಸಿ-2020 ಎಫ್‌3 ನಿಯೋವಿಸ್’ (C/2020 F3 NEOWISE) ಎಂಬ ಧೂಮಕೇತು ಭೂಮಿಗೆ ಅತ್ಯಂತ ಸಮೀಪ ಹಾದು ಹೋಗಲಿದೆ. ಇದನ್ನು ಇಂದು ಸಂಜೆ ಸೂರ್ಯಾಸ್ತದ ನಂತರ ಎಲ್ಲರೂ ವೀಕ್ಷಿಸಬಹುದಾಗಿದೆ.

ಇದು ಜುಲೈ 14ರಂದು ಅಂದರೆ ಇಂದು ಅತಿ ಸಮೀಪದಲ್ಲಿ ಕಾಣಿಸಿಕೊಳ್ಳಲಿದೆ. ಸೂರ್ಯಾಸ್ತದ ನಂತರ ಮುಂದಿನ 20 ದಿನಗಳವರೆಗೆ ಸುಮಾರು 20 ನಿಮಿಷಗಳ ಕಾಲ ಇದು ದೂರ ಸರಿಯುತ್ತ ಹೋಗುತ್ತದೆ. ಜನರು ಇದನ್ನು ಇಂದು ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ ಎಂದಿದ್ದಾರೆ ವಿಜ್ಞಾನಿಗಳು.

ಈ ಧೂಮಕೇತುವಿನ ಬಗ್ಗೆ ಇದರ ಆಗಮ ಕಕ್ಷೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು (ನಾಸಾ) ಮಾರ್ಚ್ 27ರಂದೇ ಗುರುತಿಸಿತ್ತು, ಸೂರ್ಯನಿಗೆ ಅತಿ ಸಮೀಪದಲ್ಲಿ ಅಂದರೆ ನಾಲ್ಕು ಕೋಟಿ ಮೂವತ್ತು ಲಕ್ಷ ಕಿಲೋಮೀಟರ್ ದೂರದಲ್ಲಿ ಇದು ಕಾಣಿಸಿಕೊಳ್ಳುವ ಬಗ್ಗೆ ನಾಸಾ ಹೇಳಿದೆ. ಭೂಮಿಯಿಂದ ಸುಮಾರು 20 ಕೋಟಿ ಕಿಲೋಮೀಟರ್ ದೂರದಲ್ಲಿರುವ ಈ ಧೂಮಕೇತು, ಇಂದು 4.30 ಕೋಟಿ ಕಿಲೋಮೀಟರ್‌ ಅಂತರದಲ್ಲಿ ಕಾಣಿಸಿಕೊಳ್ಳಲಿದೆ.

ಸ್ವಂತ ಬೆಳಕು ಹೊಂದಿರದ ಧೂಮಕೇತುಗಳು, ಸೂರ್ಯನಿಂದ ಸ್ವೀಕರಿಸಿದ ಶಕ್ತಿಯನ್ನು ಸ್ಫೋಟಗಳ ಮೂಲಕ ಬಿಡುಗಡೆ ಮಾಡಿ ಪ್ರಜ್ವಲಿಸುತ್ತವೆ. ಸೂರ್ಯನ ಸಮೀಪ ಬಂದಂತೆ ಉದ್ದನೆಯ ಬಾಲದೊಂದಿಗೆ ಪ್ರಕಾಶಿಸುತ್ತಾ ಸುಂಯ್ಯೆಂದು ಸಾಗಿ ಹೋಗುತ್ತವೆ.

‘ನಿಯೋವಿಸ್’ ಧೂಮಕೇತು ಸೂರ್ಯನಿಗೆ ಅತಿ ಸಮೀಪವಾಗಿದ್ದ ಸಮಯದಲ್ಲಿ ಬುಧ ಗ್ರಹದ ಕಕ್ಷೆಯನ್ನು ದಾಟುವಾಗ ಅದರ ಹೊರ ಪದರದಲ್ಲಿದ್ದ ಮಂಜುಗಡ್ಡೆಯಿಂದ ಅನಿಲ ಹಾಗೂ ಧೂಳಿನ ಮೋಡಗಳು ರೂಪುಗೊಂಡಿದ್ದು ‘ನಾಸಾ’ ವಿಜ್ಞಾನಿಗಳಿಗೆ ಗೋಚರವಾಗಿತ್ತು. ಈ ಧೂಮಕೇತುವಿನ ನ್ಯೂಕ್ಲಿಯಸ್‌ನ ವ್ಯಾಸ ಸುಮಾರು ಐದು ಕಿಲೋಮೀಟರ್. ಇಂಥ ವಿಶಿಷ್ಟ ರಚನೆಯ ಧೂಮಕೇತುಗಳ ಒಡಲಾಳದಲ್ಲಿನ ಸಾಮಗ್ರಿ ಮಾತ್ರ ಹುಟ್ಟಿದಾಗ ಹೇಗಿತ್ತೋ ಹಾಗೆಯೇ ಇರಬಹುದೆಂದು ವಿಜ್ಞಾನಿಗಳು ಊಹಿಸಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net