

ವಿಜಯವಾಣಿ ಸುದ್ದಿಜಾಲ ಉಡುಪಿ
ಮೀನುಗಾರಿಕೆ ನಡೆಸುತ್ತಿದ್ದ ವೇಳೆ ನಾರಾಯಣ ಮೊಗವೀರ ನಾಪತ್ತೆಯಾಗಿದ್ದು, ಅವರ ಕುಟುಂಬಕ್ಕೆ ಇನ್ನೆರಡು ದಿನದಲ್ಲಿ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಪರಿಹಾರ ನೀಡಿ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದರು.
ಉಡುಪಿ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್ ಉಪಸ್ಥಿತಿಯಲ್ಲಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಬೈಂದೂರು ಕ್ಷೇತ್ರದ ಮೀನುಗಾರಿಕಾ ಯೋಜನೆಗಳು ಹಾಗೂ ಮೀನುಗಾರರಿಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಜ.2ರಂದು ಪರ್ಸಿನ್ ಬೋಟ್ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ನಾರಾಯಣ ಮೊಗವೀರ ನಾಪತ್ತೆಯಾಗಿದ್ದಾರೆ. ಇನ್ನೂ ಅವರ ಸುಳಿವು ಸಿಗದಿರುವುದು ದು:ಖದಾಯಕ ಸಂಗತಿ. ಘಟನೆಯ ಬಳಿಕ ನಾನು ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದೇನೆ. ನಾಪತ್ತೆಯಾಗಿರುವ ಮೀನುಗಾರನ ಪತ್ತೆ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗೆ ಮನವಿ ಮಾಡಿದ್ದೆ. ಈ ಬಗ್ಗೆ ಅಗತ್ಯ ಮುತುವರ್ಜಿ ವಹಿಸದಿರುವುದೂ ಖಂಡನೀಯ. ಬಡ ಮೀನುಗಾರರ ನೋವಿಗೆ ಸ್ಪಂದಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಇದ್ದರು.