ಬೈಂದೂರು ಹೊನಲು ಬೆಳಕಿನ ಕಂಬಳ

kambala
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ಮರಾಠಿ ಸಮಾಜ, ವಲಯ ಕಂಬಳ ಸಮಿತಿ, ಜಿಲ್ಲಾ ಕಂಬಳ ಸಮಿತಿ ಸಹಕಾರದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕೋಟಿ ಚೆನ್ನಯ್ಯ ಜೋಡುಕರೆ ಬೈಂದೂರು ಕಂಬಳ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆಯ ನಗು ಸಿಟಿ ಮೈದಾನದಲ್ಲಿ ಏ.17ರಿಂದ 20ರವರೆಗೆ ನಡೆಯಲಿದೆ ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ 200 ಜೋಡಿ ಕೋಣಗಳು ಕಂಬಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 60-70 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ. ಕಂಬಳದ ಅಭಿಮಾನಿಗಳಿಗೆ ಹಾಗೂ ಆಗಮಿಸುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಿದ್ಧತೆಗಳು ನಡೆಯುತ್ತಿದೆ ಎಂದರು.

ಕಂಬಳೋತ್ಸವದಲ್ಲ ವಿವಿಧ ಕ್ಷೇತ್ರಗಳ ಉತ್ಸವ, ಆಹಾರ-ವಾಣಿಜ್ಯ ಮೇಳ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಪಕ್ಷಾತೀತವಾಗಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಂಬಳ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಬೈಂದೂರು ಮರಾಠಿ ಸಮಾಜ ಸುಧಾಕರ ಸಂಘದ ಅಧ್ಯಕ್ಷ ಭೋಜ ನಾಯ್ಕ, ಮಂಗೇಶ ಶ್ಯಾನುಭಾಗ್, ಅನೂಪ್ ಬೈಂದೂರು, ವಿಶ್ವನಾಥ ಶೆಟ್ಟಿ ಹೊಸಾಡು, ಗೋವರ್ಧನ್, ಸಂತೋಷ ಮೊಗವೀರ ಹೊಸಾಡು ಮತ್ತು ರಾಘವೇಂದ್ರ ಶೆಟ್ಟಿ ಹೊಸಾಡು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net